Advertisement

ಜನನಾಯಕ ಪಾರೀಕರ್‌ಗೆ ವಿದಾಯ

12:30 AM Mar 20, 2019 | Team Udayavani |

ಪಣಜಿ: ಅಪ್ರತಿಮ ದೇಶಭಕ್ತ, ಸರಳ- ಸಜ್ಜನ ರಾಜಕಾರಣಿ ಮನೋಹರ್‌ ಪಾರೀಕರ್‌ ಅವರಿಗೆ ಸೋಮವಾರ ಸಂಜೆ ಸಕಲ ಸರಕಾರಿ ಹಾಗೂ ಸೇನಾ ಮರ್ಯಾ ದೆಗಳೊಂದಿಗೆ ಹೃದಯಸ್ಪರ್ಶಿ ಅಂತಿಮ ವಿದಾಯ ನೀಡಲಾಯಿತು. ಮಿರಾಮರ್‌ ಬೀಚ್‌ನಲ್ಲಿ ನಡೆದ ಅಂತ್ಯಕ್ರಿಯೆ ಯಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‌ ಶಾ, ಕೇಂದ್ರ ಸಚಿವರಾದ ನಿತಿನ್‌ ಗಡ್ಕರಿ ಹಾಗೂ ಬಿಜೆಪಿ ಆಡಳಿತ ರಾಜ್ಯಗಳ ಮುಖ್ಯಮಂತ್ರಿ ಗಳು ಭಾಗವಹಿಸಿದ್ದರು. ಚಿತೆಗೆ ಪಾರೀಕರ್‌ ಅವರ ಹಿರಿಯ ಪುತ್ರ ಉತ್ಪಲ್‌ ಪಾರೀಕರ್‌ ಅಗ್ನಿಸ್ಪರ್ಶ ಮಾಡಿದರು. ಗೋವಾದ ಮೊದಲ ಮುಖ್ಯಮಂತ್ರಿ ದಯಾನಂದ್‌ ಬಂಡೋಡ್ಕರ್‌ ಅವರ ಸಮಾಧಿ ಪಕ್ಕದಲ್ಲೇ ಪಾರೀಕರ್‌ ಅಂತ್ಯಸಂಸ್ಕಾರವನ್ನೂ ನಡೆಸಲಾಯಿತು. 

Advertisement

ಪ್ರಧಾನಿ ಮೋದಿ ನಮನ: ಕಲಾ ಅಕಾಡೆಮಿ ಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವರಾದ ಸ್ಮತಿ ಇರಾನಿ, ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಸೇರಿದಂತೆ ಹಲವಾರು ಗಣ್ಯರು ಅಗಲಿದ ನಾಯಕನಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಆನಂತರ, ನರೇಂದ್ರ ಮೋದಿಯವರು ಪಾರೀಕರ್‌ ಕುಟುಂಬ ಸದಸ್ಯರೊಂದಿಗೆ ಮಾತುಕತೆ ನಡೆಸಿ ಸಾಂತ್ವನ ಹೇಳಿದರು.

2 ಕಡೆ ಅಂತಿಮ ದರ್ಶನ: ಸೋಮವಾರ ಬೆಳಗ್ಗೆ, ದೋನಾ ಪೌಲಾದಲ್ಲಿರುವ ಪಾರೀಕರ್‌  ಖಾಸಗಿ ನಿವಾಸದಿಂದ ಪಣಜಿ ಯವರೆಗಿನ ಸುಮಾರು 5 ಕಿ.ಮೀ. ದೂರ ದಲ್ಲಿರುವ ಪಣಜಿಯಲ್ಲಿನ ಬಿಜೆಪಿ ಕೇಂದ್ರ ಕಚೇರಿವರೆಗೆ ಟ್ರಕ್‌ನಲ್ಲಿ ಅವರ ಪಾರ್ಥಿವ ಶರೀರವನ್ನು ಕೊಂಡೊಯ್ಯಲಾ ಯಿತು. ಪಣಜಿಯ ಕೇಂದ್ರ ಭಾಗದಲ್ಲಿರುವ ಬಿಜೆಪಿ ಕಚೇರಿಯಲ್ಲಿ ಕೇಂದ್ರ ಸಚಿವ ನಿತಿನ್‌ ಗಡ್ಕರಿ ಸೇರಿದಂತೆ ಹಲವಾರು ಗಣ್ಯರು, ಕಾರ್ಯ ಕರ್ತರು ಪಾರೀಕರ್‌ ಅವರಿಗೆ ಪುಷ್ಪ ನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ಹಲವಾರು ಜನ ದುಃಖತಪ್ತರಾದರು. ಅನಂತರ, ಪಾರ್ಥಿವ ಶರೀರವನ್ನು ಕಲಾ ಅಕಾಡೆಮಿಗೆ ಸ್ಥಳಾಂತರಿಸಿ ಅಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. 

ಜನಪ್ರಿಯತೆಯ ಅನಾವರಣ: ಕಲಾ ಅಕಾಡೆಮಿಯಿಂದ ಮಿರಾಮರ್‌ ಬೀಚ್‌ವರೆಗೆ ಸಂಜೆ 4 ಗಂಟೆಗೆ ನಡೆದ ಅಂತಿಮ ಯಾತ್ರೆಯ ವೇಳೆ, ದಾರಿಯ ಇಕ್ಕೆಲಗಳಲ್ಲೂ ಜನರು ಮರ, ಕಟ್ಟಡಗಳನ್ನು ಏರಿ ಅವರ ಅಂತಿಮ ದರ್ಶನ ಪಡೆದರು. ಎಲ್ಲೆಲ್ಲೂ ಶೋಕ: ಪಾರೀಕರ್‌ ನಿಧನದ ಹಿನ್ನೆಲೆಯಲ್ಲಿ ಕೇಂದ್ರ ಸರಕಾರಒಂದು ದಿನ ಹಾಗೂ ಗೋವಾ ಸರಕಾರಏಳು ದಿನಗಳ ಶೋಕಾಚರಣೆ ಘೋಷಿಸಿದ ಹಿನ್ನೆಲೆಯಲ್ಲಿ ಗೋವಾದ್ಯಂತ ಸೋಮವಾರ ಎಲ್ಲಾ ಸರಕಾರಿ ಕಚೇರಿಗಳ ಮೇಲೆ ರಾಷ್ಟ್ರಧ್ವಜವನ್ನು ಅರ್ಧಕ್ಕೆ ಹಾರಿಸಲಾಗಿತ್ತು. 

ಬಾಂಬೆ ಐಐಟಿ ಶ್ರದ್ಧಾಂಜಲಿ
ಪಾರೀಕರ್‌ ಗೌರವಾರ್ಥ, ಬಾಂಬೆ ಐಐಟಿಯ ಆವರಣದಲ್ಲಿರುವ ಪಿ.ಸಿ. ಸಕ್ಸೇನಾ ಆಡಿಟೋರಿಯಂನಲ್ಲಿ ಸೋಮವಾರ ಸಂಜೆ 5 ಗಂಟೆಗೆ ಶ್ರದ್ಧಾಂಜಲಿ ಸಭೆ ಆಯೋಜಿಸಲಾಗಿತ್ತು. ಬಾಂಬೆ ಐಐಟಿಯಲ್ಲಿ ಲೋಹಶಾಸ್ತ್ರ ವಿಷಯದಲ್ಲಿ ಇಂಜಿನಿಯರಿಂಗ್‌ ಮುಗಿಸಿದ್ದ ಪಾರೀಕರ್‌, ಆನಂತರ ರಾಜಕೀಯಕ್ಕೆ ಕಾಲಿಟ್ಟಿದ್ದರು. ಸ್ವತಂತ್ರ ಭಾರತ ರಾಜ್ಯವೊಂದರ ಮುಖ್ಯಮಂತ್ರಿಯಾದ ಮೊದಲ ಐಐಟಿ ವಿದ್ಯಾರ್ಥಿ ಎಂಬ ಹೆಗ್ಗಳಿಕೆಯೂ ಅವರದ್ದಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next