Advertisement

ಇಂದು “ಮನ್‌ ಕಿ ಬಾತ್‌ 100”ಸಮಾವೇಶ

09:56 PM Apr 25, 2023 | Team Udayavani |

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ “ಮನ್‌ ಕಿ ಬಾತ್‌” ಬಾನುಲಿ ಕಾರ್ಯಕ್ರಮ 100ನೇ ಆವೃತ್ತಿಯನ್ನು ಪೂರ್ಣಗೊಳಿಸುತ್ತಿರುವ ಹಿನ್ನೆಲೆಯಲ್ಲಿ ಬುಧವಾರ ಪ್ರಸಾರ ಭಾರತಿ ನವದೆಹಲಿಯಲ್ಲಿ “ಮನ್‌ ಕಿ ಬಾತ್‌ 100 ಸಮಾವೇಶ” ವನ್ನು ಆಯೋಜಿಸಿದೆ. ಉಪರಾಷ್ಟ್ರಪತಿ ಜಗದೀಪ್‌ ಧನ್‌ಕರ್‌ ಅವರು ಒಂದು ದಿನದ ಈ ಸಮಾವೇಶಕ್ಕೆ ಚಾಲನೆ ನೀಡಲಿದ್ದಾರೆ.

Advertisement

ಸಮಾರೋಪ ಸಮಾರಂಭದಲ್ಲಿ ಮಾತನಾಡಲಿರುವ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು, ಮನ್‌ ಕಿ ಬಾತ್‌ 100ನೇ ಆವೃತ್ತಿಯ ಸ್ಮರಣಾರ್ಥ ನಾಣ್ಯ ಮತ್ತು ಅಂಚೆ ಚೀಟಿಯನ್ನು ಬಿಡುಗಡೆ ಮಾಡಲಿದ್ದಾರೆ. ಪ್ರಧಾನಿ ಮೋದಿ ಅವರು ಬಾನುಲಿ ಕಾರ್ಯಕ್ರಮದಲ್ಲಿ ಪ್ರಸ್ತಾಪಿಸಿದ ಪ್ರಮುಖ ವಿಚಾರಗಳಾದ ನಾರಿ ಶಕ್ತಿ, ವಿರಾಸತ್‌ ಕಾ ಉತ್ಥಾನ್‌(ಪರಂಪರೆಯ ಮೇಲಿನ ಹೆಮ್ಮೆ), ಜನ ಸಂವಾದದಿಂದ ಆತ್ಮನಿರ್ಭರತೆ ಮತ್ತು ಆವಾಹನೆಯಿಂದ ಆಂದೋಲನದ ಬಗ್ಗೆ ಚರ್ಚೆ, ವಿಚಾರ ಸಂಕಿರಣ ನಡೆಯಲಿದೆ.

ಯಾರೆಲ್ಲ ಭಾಗಿ?
ಬಾಲಿವುಡ್‌ ತಾರೆಯರಾದ ಆಮೀರ್‌ ಖಾನ್‌, ರವೀನಾ ಟಂಡನ್‌, ಪುದುಚೇರಿ ನಿವೃತ್ತ ಲೆ.ಗವರ್ನರ್‌ ಕಿರಣ್‌ ಬೇಡಿ, ಸಂಗೀತ ಸಂಯೋಜಕ ರಿಕಿ ಕೇಜ್‌, ಕ್ರೀಡಾಳುಗಳಾದ ನಿಖತ್‌ ಝರೀನ್‌, ದೀಪಾ ಮಲಿಕ್‌, ಉದ್ಯಮಿ ಟಿ.ವಿ.ಮೋಹನ್‌ದಾಸ್‌ ಪೈ ಸೇರಿದಂತೆ ಮನ್‌ ಕಿ ಬಾತ್‌ನ ವಿವಿಧ ಆವೃತ್ತಿಗಳಲ್ಲಿ ಪ್ರಸ್ತಾಪಿಸಲ್ಪಟ್ಟ 100ಕ್ಕೂ ಅಧಿಕ ವ್ಯಕ್ತಿಗಳು ಪಾಲ್ಗೊಳ್ಳಲಿದ್ದಾರೆ.

ಮದರಸಾ, ದರ್ಗಾಗಳಲ್ಲಿ ಪ್ರಸಾರ:
ಮುಂದಿನ ಲೋಕಸಭೆ ಚುನಾವಣೆ ವೇಳೆಗೆ ಮುಸ್ಲಿಂ ಮತದಾರರನ್ನು ಸೆಳೆಯುವ ಉದ್ದೇಶದಿಂದ ಮೋದಿಯವರ ಮನ್‌ ಕಿ ಬಾತ್‌ನ 100ನೇ ಆವೃತ್ತಿಯನ್ನು ಮುಸ್ಲಿಂ ಬಾಹುಳ್ಯದ ಪ್ರದೇಶಗಳಲ್ಲಿ ಪ್ರಸಾರ ಮಾಡಲು ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಸಿದ್ಧತೆ ನಡೆಸಿದೆ. ಮದರಸಾಗಳು, ದರ್ಗಾಗಳು, ಮುಸ್ಲಿಂ ಸಾಂಸ್ಕೃತಿಕ ಕೇಂದ್ರಗಳು ಸೇರಿ ಒಟ್ಟು 2,150 ಸ್ಥಳಗಳಲ್ಲಿ ಇದನ್ನು ಪ್ರಸಾರ ಮಾಡಲಾಗುತ್ತದೆ ಎಂದು ಮೋರ್ಚಾ ಅಧ್ಯಶ್ರ ಜಮಾಲ್‌ ಸಿದ್ದಿಕಿ ತಿಳಿಸಿದ್ದಾರೆ.

ಕಾಂಗ್ರೆಸ್‌ ಲೇವಡಿ:
ಈ ನಡುವೆ, ಮಂಗಳವಾರ ಮನ್‌ ಕಿ ಬಾತ್‌ ಕುರಿತು ಲೇವಡಿ ಮಾಡಿರುವ ಕಾಂಗ್ರೆಸ್‌ ನಾಯಕ ಜೈರಾಮ್‌ ರಮೇಶ್‌, “ಅದಾನಿ, ಚೀನಾ, ಸತ್ಯಪಾಲ್‌ ಮಲಿಕ್‌ ಹೇಳಿಕೆ, ಸಣ್ಣ ಉದ್ಯಮಗಳ ನಾಶ ಸೇರಿದಂತೆ ಹಲವು ಪ್ರಮುಖ ವಿಚಾರಗಳಿಗೆ ಬಂದಾಗ ಪ್ರಧಾನಿ ಮೋದಿಯವರದ್ದು “ಮೌನ್‌ ಕಿ ಬಾತ್‌” ಮಾತ್ರ. ಅವರ ಬಲುದೊಡ್ಡ ಪ್ರಚಾರ ಸಂಸ್ಥೆಗಳು ಏ.30ರಂದು ಪ್ರಸಾರವಾಗಲಿರುವ ಮನ್‌ ಕಿ ಬಾತ್‌ನ 100ನೇ ಅಧ್ಯಾಯ ಹೆಚ್ಚು ಜನಪ್ರಿಯತೆ ಪಡೆಯಲಿ ಎಂದು ಕೆಲಸ ಮಾಡುತ್ತಿವೆ” ಎಂದು ಟ್ವೀಟ್‌ ಮಾಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next