Advertisement

EX PM: ಪಂಚಭೂತಗಳಲ್ಲಿ ಲೀನ; ಸಕಲ ಸರ್ಕಾರಿ-ಸೇನಾ ಗೌರವದೊಂದಿಗೆ ಡಾ.ಸಿಂಗ್‌ ಅಂತ್ಯಕ್ರಿಯೆ

01:03 PM Dec 28, 2024 | Team Udayavani |

ನವದೆಹಲಿ: ಮಾಜಿ ಪ್ರಧಾನಿ, ಆರ್ಥಿಕ ತಜ್ಞ ಡಾ.ಮನಮೋಹನ್‌ ಸಿಂಗ್‌ ಅವರ ಅಂತ್ಯಕ್ರಿಯೆ ನಿಗಮ್ ಬೋಧ್ ಘಾಟ್‌ ನಲ್ಲಿ ಶನಿವಾರ (ಡಿ.28) ಸಕಲ ಸರ್ಕಾರಿ  ಹಾಗೂ ಮೂರು ಸೇನಾ ಗೌರವಗಳೊಂದಿಗೆ ಸಿಖ್‌ ಸಂಪ್ರದಾಯದ ಪ್ರಕಾರ ನಡೆಯಿತು.

Advertisement

ನಿಗಮ್‌ ಬೋಧ್‌ ಘಾಟ್‌ ನಲ್ಲಿ ಡಾ.ಸಿಂಗ್‌ ಅವರ ಪಾರ್ಥಿವ ಶರೀರಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್‌ ಶಾ, ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್‌ ಗಾಂಧಿ, ಸೋನಿಯಾ ಗಾಂಧಿ, ಸಚಿವ ಕಿರಣ್‌ ರಿಜಿಜು ಸೇರಿದಂತೆ ಹಲವು ರಾಜಕೀಯ ಗಣ್ಯರು ಅಂತಿಮ ಪುಪ್ಪ ನಮನ ಸಲ್ಲಿಸಿದರು.

ಮಾಜಿ ಪ್ರಧಾನಿ ಡಾ.ಮನಮೋಹನ್‌ ಸಿಂಗ್‌ ನಿಧನ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ದೇಶಾದ್ಯಂತ ಏಳು ದಿನಗಳ ಶೋಕಾಚರಣೆ ಘೋಷಿಸಿತ್ತು. ಅಲ್ಲದೇ ಸರ್ಕಾರಿ ಕಚೇರಿಗಳಲ್ಲಿ ಅರ್ಧಮಟ್ಟಕ್ಕೆ ರಾಷ್ಟ್ರಧ್ವಜ ಹಾರಿಸುವಂತೆ ಸೂಚಿಸಿತ್ತು. ಕಾಂಗ್ರೆಸ್‌ ಪಕ್ಷ ಕೂಡಾ ತನ್ನೆಲ್ಲಾ ನಿಗದಿತ(ಜನವರಿ 3ರವರೆಗೆ) ಕಾರ್ಯಕ್ರಮಗಳನ್ನು ರದ್ದುಪಡಿಸಿತ್ತು.

ಸ್ಮಾರಕ ನಿರ್ಮಾಣ ಸ್ಥಳಕ್ಕೆ ಕೇಂದ್ರ ಒಪ್ಪಿಗೆ:

ಮನಮೋಹನ್‌ ಸಿಂಗ್‌ ಅವರ ಸ್ಮಾರಕ ನಿರ್ಮಾಣ ಸ್ಥಳದ ವಿಚಾರದಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ತೀವ್ರ ವಾಕ್ಸಮರ ನಡೆದಿತ್ತು. ಕೊನೆಗೂ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ, ಮನಮೋಹನ್‌ ಸಿಂಗ್‌ ಸ್ಮಾರಕ ನಿರ್ಮಾಣ ಮಾಡಲು ಪ್ರತ್ಯೇಕ ಸ್ಥಳ ನೀಡಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ.

Advertisement

ಮನಮೋಹನ್‌ ಸಿಂಗ್‌ ಅವರ ಸ್ಮಾರಕ ನಿರ್ಮಾಣಕ್ಕೆ ಪ್ರತ್ಯೇಕ ಜಾಗ ನೀಡಬೇಕೆಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಮನವಿ ಮಾಡಿಕೊಂಡಿದ್ದರು. ಆದರೆ ಕೇಂದ್ರ ಸರ್ಕಾರ ಆರಂಭದಲ್ಲಿ ನಿರಾಕರಿಸಿತ್ತು. ಇದು ದೇಶದ ಮೊದಲ ಸಿಖ್‌ ಪ್ರಧಾನಿಗೆ ಕೇಂದ್ರ ಸರ್ಕಾರ ಮಾಡಿದ ಅವಮಾನವಾಗಿದೆ ಎಂದು ಕಾಂಗ್ರೆಸ್‌ ಮುಖಂಡ ಜೈರಾಂ ರಮೇಶ್‌ ಅಸಮಾಧಾನ ವ್ಯಕ್ತಪಡಿಸಿದ್ದರು.

ಆದರೆ ಇದಕ್ಕೆ ಬಿಜೆಪಿ ರಾಷ್ಟ್ರೀಯ ವಕ್ತಾರ ಸಿ.ಆರ್. ಕೇಶವನ್‌, ತಮ್ಮದೇ ಪಕ್ಷದ ಮಾಜಿ ಪ್ರಧಾನಿ ನರಸಿಂಹ ರಾವ್‌ ಅವರಿಗೆ ಕಾಂಗ್ರೆಸ್‌ ಸರ್ಕಾರ ಯಾವತ್ತೂ ಸ್ಮಾರಕ ನಿರ್ಮಾಣ ಮಾಡುವ ಬಗ್ಗೆ ಯೋಚಿಸಿಲ್ಲ ಎಂದು ತಿರುಗೇಟು ನೀಡಿದ್ದರು.

ನಂತರ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಜತೆ ಮಾತನಾಡಿ, ಸ್ಮಾರಕ ನಿರ್ಮಾಣಕ್ಕೆ ಸ್ಥಳ ನೀಡುವಂತೆ ಮನವಿ ಮಾಡಿಕೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next