2018ರ ಆಗಸ್ಟ್‌ನಲ್ಲಿ ರಾಜ್ಯದ ಕೊಡಗು, ವಾರದ ಹಿಂದೆಯಷ್ಟೇ ಉತ್ತರ ಕನ್ನಡ ಜಿಲ್ಲೆಯ ಶಿರೂರಿನಲ್ಲಿ ಸಂಭವಿಸಿದ ಭೀಕರ ಭೂಕುಸಿತದ ಮಾದರಿಯಲ್ಲೇ ಮಂಗಳವಾರ ಬೆಳ್ಳಂಬೆಳಗ್ಗೆ ನಮ್ಮ ನೆರೆ ರಾಜ್ಯವಾದ ಕೇರಳದ ವಯನಾಡ್ ಜಿಲ್ಲೆಯಲ್ಲಿ ಪ್ರಳಯಸದೃಶ ರೀತಿಯಲ್ಲಿ ಭೂಕುಸಿತ ಸಂಭವಿಸಿದೆ. ಈ ನೈಸರ್ಗಿಕ ದುರಂತ ಕೇವಲ ಕೇರಳ ಮಾತ್ರವಲ್ಲದೆ ಪಶ್ಚಿಮಘಟ್ಟದ ತಪ್ಪಲಿನಲ್ಲಿರುವ ಎಲ್ಲ ಊರುಗಳ ಜನರನ್ನು ಆತಂಕಕ್ಕೀಡು ಮಾಡಿದೆ.
ವಯನಾಡ್ ಜಿಲ್ಲೆಯಲ್ಲಿ ಸಂಭವಿಸಿದ ಸರಣಿ ಭೂಕುಸಿತದಲ್ಲಿ ಗುಡ್ಡಗಳು ಕುಸಿದು ಈ ಊರುಗಳು ಸಂಪೂರ್ಣವಾಗಿ ಸಮಾಧಿಯಾಗಿವೆ. ಅಲ್ಲಲ್ಲಿ ಸಂತ್ರಸ್ತರು ಕೈಗಳನ್ನು ಮೇಲಕ್ಕೆತ್ತಿ ರಕ್ಷಣೆಗಾಗಿ ಯಾಚಿಸುತ್ತಿರುವ ದೃಶ್ಯಾವಳಿಗಳನ್ನು ಕಂಡಾಗ ಎಂಥ ಕಠೊರ ಹೃದಯವೂ ಒಂದು ಕ್ಷಣ ಕಂಪಿಸದೇ ಇರಲಾರದು. ಎಡೆಬಿಡದೆ ಸುರಿಯುತ್ತಿರುವ ಮಳೆಯ ಹೊರತಾಗಿಯೂ ರಕ್ಷಣ ಕಾರ್ಯಕರ್ತರು ನೂರಾರು ಮಂದಿಯನ್ನು ರಕ್ಷಿಸಿ, ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಊರಿಗೆ ಊರೇ ಈ ದುರಂತದಲ್ಲಿ ಸಮಾಧಿಯಾಗಿರುವ ಪರಿಣಾಮ ಒಟ್ಟು ಹಾನಿಯನ್ನು ಈಗಲೇ ಊಹಿಸುವುದು ಕಷ್ಟಸಾಧ್ಯ.
ಕರ್ನಾಟಕದಲ್ಲೂ ಪ್ರಕೃತಿ ಮುನಿದಿದೆ. ಕರಾವಳಿ ಮತ್ತು ಒಳನಾಡನ್ನು ಬೆಸೆಯುವ ಸಂಪಾಜೆ, ಶಿರಾಡಿ, ಚಾರ್ಮಾಡಿ ಘಾಟಿ ರಸ್ತೆಗಳಲ್ಲಿ ಪದೇಪದೆ ಭೂಕುಸಿತ ಸಂಭವಿಸಿ ವಾಹನ ಸಂಚಾರಕ್ಕೆ ತಡೆಯಾಗುತ್ತಲೇ ಇದೆ. ಮಂಗಳೂರು-ಬೆಂಗಳೂರು ನಡುವಣ ರೈಲು ಸಂಪರ್ಕವೂ ಕಡಿತಗೊಂಡಿದೆ. ಇನ್ನು ಕೋಟ್ಯಂತರ ರೂ. ವ್ಯಯಿಸಿ ಅನುಷ್ಠಾನಗೊಳಿಸಲಾದ ಎತ್ತಿನಹೊಳೆ ಯೋಜನೆಯ ಪೈಪ್‌ಲೈನ್ ಹಾದುಹೋದ ಪ್ರದೇಶದಲ್ಲಿ ಗುಡ್ಡ ಕುಸಿದು ರಸ್ತೆ ಸಂಚಾರ ಸ್ಥಗಿತಗೊಂಡಿದೆ. ಕರ್ನಾಟಕದ ಪಾಲಿಗೆ ಇಂತಹ ಪ್ರಾಕೃತಿಕ ದುರಂತಗಳು ಇತ್ತೀಚಿನ ವರ್ಷಗಳಲ್ಲಿ ಮಾಮೂಲಿ ಎಂಬಂತಾಗಿದೆ.
ಒಟ್ಟಾರೆ ಪಶ್ಚಿಮಘಟ್ಟ ತಪ್ಪಲಿನ ಬೆಟ್ಟಗುಡ್ಡಗಳು ಕಳೆದೆರಡು ದಶಕಗಳಿಂದೀಚೆಗೆ ಪ್ರತೀ ಮಳೆಗಾಲದಲ್ಲಿ ಕುಸಿದು ಸ್ಥಳೀಯ ಜನಜೀವನವನ್ನು ಆತಂಕದ ಮಡುವಿಗೆ ತಳ್ಳುತ್ತಲೇ ಇವೆ.
ಪ್ರತೀ ಬಾರಿ ಇಂತಹ ದುರ್ಘಟನೆಗಳು ಸಂಭವಿಸಿದಾಗಲೆಲ್ಲ ಪ್ರಕೃತಿ ಮಾನವರ ಮೇಲೆ ಇಷ್ಟೊಂದು ಮುನಿಸಿಕೊಳ್ಳಲು ಕಾರಣವೇನು ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತದೆ. ಇದಕ್ಕೆ ಮಾನವನ ಸ್ವಯಂಕೃತ ಅಪರಾಧಗಳೇ ಕಾರಣವೇ ವಿನಾ ಈ ದುರ್ಘಟನೆಗಳಿಗೆ ಪ್ರಕೃತಿಯನ್ನು ದೂರಿ ಒಂದಿಷ್ಟೂ ಪ್ರಯೋಜನವಿಲ್ಲ. ಪಶ್ಚಿಮಘಟ್ಟ ಪ್ರದೇಶವನ್ನು ಸಂಪೂರ್ಣವಾಗಿ ಪರಿಸರ ಸೂಕ್ಷ್ಮ ವಲಯ ಎಂದು ಘೋಷಿಸಿ, ಗಣಿಗಾರಿಕೆ, ಕೈಗಾರಿಕೆಗಳ ಸ್ಥಾಪನೆ, ಹೆದ್ದಾರಿಗಳ ವಿಸ್ತರಣೆ ಆದಿಯಾಗಿ ಯಾವುದೇ ನಿರ್ಮಾಣ ಕಾಮಗಾರಿಗಳನ್ನು ನಡೆಸುವುದನ್ನು ನಿರ್ಬಂಧಿಸಬೇಕು ಎಂದು ಕೇಂದ್ರ ಸರಕಾರದಿಂದ ನೇಮಕವಾಗಿದ್ದ ಮಾಧವ ಗಾಡ್ಗಿàಳ್ ನೇತೃತ್ವದ ಪಶ್ಚಿಮಘಟ್ಟಗಳ ಕುರಿತಾಗಿನ ಪರಿಸರ ತಜ್ಞರ ಸಮಿತಿ 2011ರಲ್ಲಿಯೇ ಶಿಫಾರಸು ಮಾಡಿತ್ತು. ಆದರೆ ಇತ್ತ ಕೇಂದ್ರ ಅಥವಾ ರಾಜ್ಯ ಸರಕಾರಗಳಾಗಲೀ ತಲೆಕೆಡಿಸಿಕೊಳ್ಳದೆ ಬುಡಕಟ್ಟು ಸಮುದಾಯಗಳನ್ನು ಮುಂದಿಟ್ಟು ಈ ವರದಿಯನ್ನು ಸರಾಸಗಟಾಗಿ ತಿರಸ್ಕರಿಸಿದವು. ಆ ಬಳಿಕ ರಚನೆಯಾದ ಕಸ್ತೂರಿರಂಗನ್ ಸಮಿತಿ ನಿರ್ಬಂಧದ ಮಿತಿಯನ್ನು ಒಂದಿಷ್ಟು ಸಡಿಲಗೊಳಿಸಿತ್ತಾದರೂ ಪಶ್ಚಿಮಘಟ್ಟ ಪ್ರದೇಶದಲ್ಲಿನ ಎಲ್ಲ ತೆರನಾದ ನಿರ್ಮಾಣ ಕಾಮಗಾರಿಗಳಿಗೆ ನಿರ್ಬಂಧ ಹೇರುವಂತೆ ಸರಕಾರಕ್ಕೆ ಶಿಫಾರಸು ಮಾಡಿತ್ತು. ಆದರೆ ಸರಕಾರಗಳು ಈ ವರದಿಯ ಜಾರಿಗೂ ಆಸಕ್ತಿ ತೋರಲಿಲ್ಲ.
ಇದು ಕೇವಲ ಕೇರಳ, ಕರ್ನಾಟಕದ ಭವಿಷ್ಯದ ಪ್ರಶ್ನೆ ಮಾತ್ರವಾಗಿರದೆ ಇಡೀ ದೇಶದ ಮುಂದಿರುವ ಗುರುತರ ಸವಾಲು. ಆದಾಯ ಹೆಚ್ಚಳ, ಅಭಿವೃದ್ಧಿಯ ಸೋಗಿನಲ್ಲಿ ನಡೆಯುತ್ತಿರುವ ಈ ಎಲ್ಲ ದೂರದೃಷ್ಟಿರಹಿತ ಯೋಜನೆಗಳಿಗೆ, ಕೆಲಸ ಕಾರ್ಯಗಳಿಗೆ ಇನ್ನಾದರೂ ಕಡಿವಾಣ ಬೀಳಬೇಕು. ವಿಜ್ಞಾನ, ತಂತ್ರಜ್ಞಾನ ಬಳಸಿಕೊಂಡು ಪ್ರಕೃತಿಯ ವಿರುದ್ಧ ದುಸ್ಸಾಹಸಕ್ಕಿಳಿಯುವ ಬದಲಾಗಿ ಪ್ರಕೃತಿಯ ಜತೆಗೆ ಹೆಜ್ಜೆ ಹಾಕುವ ಮನೋಭಾವವನ್ನು ನಮ್ಮ ಸಮಾಜ, ಆಡಳಿತ ವ್ಯವಸ್ಥೆ ಮೈಗೂಡಿಸಿಕೊಳ್ಳಬೇಕಾಗಿರುವುದು ಇಂದಿನ ತುರ್ತು.