Advertisement

Manki ಎಂಡೋಸಲ್ಫಾನ್ ಫಲಾನುಭವಿಗಳಿಗೆ ಸುಸಜ್ಜಿತ ಆಸ್ಪತ್ರೆ ನಿರ್ಮಾಣ: ಸಚಿವ ಮಂಕಾಳ ವೈದ್ಯ

08:06 PM Dec 19, 2023 | Team Udayavani |

ಭಟ್ಕಳ: ಎಂಡೋಸಲ್ಫಾನ್ ಫಲಾನುಭವಿಗಳಿಗಾಗಿ ಭಟ್ಕಳ ಹೊನ್ನಾವರ ಮಧ್ಯವರ್ತಿ ಪ್ರದೇಶವಾದ ಮಂಕಿಯಲ್ಲಿ ಸರಕಾರದಿಂದ 15 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಆಸ್ಪತ್ರೆ ನಿರ್ಮಿಸಲಾಗುವುದು ಎಂದು ರಾಜ್ಯದ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಹೇಳಿದರು.

Advertisement

ತಾಲೂಕು ಆಸ್ಪತ್ರೆಯಲ್ಲಿ ಮಂಗಳವಾರ ಏರ್ಪಡಿಸಲಾಗಿದ್ದ ಎಂಡೋಸಲ್ಫಾನ್ ಪೀಡಿತರ ಗುರುತಿಸುವಿಕೆ ಮತ್ತು ಅವರಿಗೆ ತಜ್ಞ ವೈದ್ಯರಿಂದ ಸೂಕ್ತ ತಪಾಸಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಈ ಹಿಂದೆ ಶಾಸಕನಿದ್ದಾಗ ಎಂಡೋಸಲ್ಫಾನ್ ಪೀಡಿತರ ಸಮೀಕ್ಷೆ ಮಾಡಲಾಗಿತ್ತು. ಜಿಲ್ಲೆಯಲ್ಲಿ 1452 ಜನರನ್ನು ಅಂದು ಗುರುತಿಸಲಾಗಿದ್ದು ಅವರಲ್ಲಿ 768 ಜನರು ಭಟ್ಕಳ ತಾಲೂಕಿನಲ್ಲಿಯೇ ಇದ್ದರು. ಎಂಡೋಸಲ್ಫಾನ್ ಪೀಡಿತರಿಗೆ ಮಾಸಿಕ ರೂ.1200 ಹಾಗೂ ರೂ.4000 ಪರಿಹಾರ, ಜೊತೆಗೆ ಉಚಿತ ಔಷಧಿ, ವಿಕಲಚೇತನರು ಜೊತೆಗೆ ಓರ್ವರಿಗೆ ಉಚಿತ ಪ್ರಯಾಣ ಎಲ್ಲಾ ಸೌಲಭ್ಯ ನೀಡುವುದರೊಂದಿಗೆ ಬೆಳಕೆಯಲ್ಲಿ ಹಗಲು ಆರೈಕೆ ಕೇಂದ್ರವನ್ನು ತೆರೆಯುವುದಕ್ಕೆ ಕೂಡಾ ಯೋಜಿಸಲಾಗಿತ್ತು. ಆದರೆ ನಂತರದ ದಿನಗಳಲ್ಲಿ ಯಾವುದೇ ಪ್ರಗತಿಯಾಗಿಲ್ಲ. ಮತ್ತೆ ಅವರ ಯೋಗಕ್ಷೇಮ ವಿಚಾರಿಸಲು ನಾನೇ ಬರಬೇಕಾಯಿತು ಎಂದು ಎಂಡೋಸಲ್ಫಾನ್ ಪೀಡಿತರನ್ನು ನಿರ್ಲಕ್ಷ್ಯ ಮಾಡಿದ್ದು ಸರಿಯಲ್ಲ ಎಂದರು.

ಅವರ ಕಷ್ಟ, ಅವರ ತಂದೆ ತಾಯಿಯವರ ಕಷ್ಟವನ್ನು ಅರಿತೇ ಮಂಕಿಯಲ್ಲಿ ಸುಸಜ್ಜಿತ 100 ಹಾಸಿಗೆಗಳ ಆಸ್ಪತ್ರೆ ನಿರ್ಮಾಣಕ್ಕೆ ಮುಂದಾಗಿರುವುದಾಗಿಯೂ ತಿಳಿಸಿದರು.

ತಾಲೂಕು, ಜಿಲ್ಲೆ, ರಾಜ್ಯದ ಎಂಡೋಸಲ್ಫಾನ್ ಫಲಾನುಭವಿಗಳಿಗೆ ಸರಕಾರದಿಂದ ಸೂಕ್ತ ಸೌಲಭ್ಯ, ಶಿಕ್ಷಣ ಮತ್ತು ಚಿಕಿತ್ಸೆ ದೊರಕಿಸಿಕೊಡಲು ಎಲ್ಲ ಪ್ರಯತ್ನ ಮಾಡಲಾಗುವುದು ಎಂದೂ ಭರವಸೆ ನೀಡಿದರು.

ಎಂಡೋಸಲ್ಫಾನ್ ಫಲಾನುಭವಿಗಳಿಗೆ ಯಾವುದೇ ರೀತಿಯ ತೊಂದರೆ ಆಗಬಾರದು ಎಂದ ಅವರು ಎಂಡೋಸಲ್ಫಾನ್ ಫಲಾನುಭವಿಗಳನ್ನು ಪಾಲಕರು ಚೆನ್ನಾಗಿ ನೋಡಿಕೊಳ್ಳುವಂತೆ ಕರೆ ನೀಡಿದರು.

Advertisement

ಎಂಡೋಸಲ್ಫಾನ್ ಜಿಲ್ಲಾ ಮೇಲ್ವಿಚಾರಣಾ ಅಧಿಕಾರಿ ಡಾ. ಸತೀಶ ಶೇಟ್ ಎಂಡೋ ಸಲ್ಫಾನ್ ಸಿಂಪರಣೆ, ಕಾಯಿಲೆ, ಸಮೀಕ್ಷೆ, ಪರಿಹಾರೋಪಾಯಗಳ ಕುರಿತು ಉಪನ್ಯಾಸ ನೀಡಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನೀರಜ್, ತಾಲೂಕಾ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಮತ್ತು ತಾಲೂಕು ಆರೋಗ್ಯಾಧಿಕಾರಿ ಡಾ. ಸವಿತಾ ಕಾಮತ್, ತಹಸೀಲ್ದಾರ ತಿಪ್ಪೇಸ್ವಾಮಿ, ಕ್ಷೇತ್ರಶಿಕ್ಷಣಾಧಿಕಾರಿ ವಿ.ಡಿ. ಮೊಗೇರ ಉಪಸ್ಥಿತರಿದ್ದರು. ತಾಲೂಕಿನ ವಿವಿಧ ಭಾಗಗಳಿಂದ ಆಗಮಿಸಿದ ಎಂಡೋಸಲ್ಫಾನ್ ಫಲಾನುಭವಿಗಳಿಗೆ ತಜ್ಞ ವೈದ್ಯರಿಂದ ಸೂಕ್ತ ಚಿಕಿತ್ಸೆ ನೀಡಲಾಯಿತು.

ಡಾ. ಸವಿತಾ ಕಾಮತ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ವೆಂಕಟೇಶ ನಿರ್ವಹಿಸಿದರು. ಶ್ರೀನಿವಾಸ ವಂದನಾರ್ಪಣೆಗೈದರು.

Advertisement

Udayavani is now on Telegram. Click here to join our channel and stay updated with the latest news.

Next