ಕಾರವಾರ: ಕಾಂಗ್ರೆಸ್ ಸಮುದ್ರ ಇದ್ದಂತೆ, ಯಾವ ನದಿಯನ್ನು ಸಹ ಸ್ವೀಕರಿಸುತ್ತದೆ ಎಂದು ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಹೇಳಿದರು.
ಕಾರವಾರದಲ್ಲಿ ಮಾಜಿ ಮುಖ್ಯಮಂತ್ರಿ ಅರಸು ಜಯಂತಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದರು.
ಬಿಜೆಪಿ ಶಾಸಕರು ಕಾಂಗ್ರೆಸ್ ಸೇರ್ಪಡೆ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ಯಾರೇ ಬಂದರೂ ಕಾಂಗ್ರೆಸ್ ಸಮುದ್ರ ಸ್ವೀಕಾರ ಮಾಡುತ್ತದೆ . ಆದರೆ ಪಕ್ಷದ ಸಿದ್ಧಾಂತ ಒಪ್ಪಿ ಬರಬೇಕು. ಯಾವುದೇ ಶರತ್ತು ಹಾಕಬಾರದು ಎಂದರು. ಅಂತಿಮವಾಗಿ ಬಿಜೆಪಿ ಶಾಸಕರನ್ನು ಸೇರಿಸಿಕೊಳ್ಳುವುದು ಹೈಕಮಾಂಡ್ ಗೆ ಬಿಟ್ಟದ್ದು ಎಂದರು. ಶಾಸಕ ಹೆಬ್ಬಾರ್ ಬಗ್ಗೆ ಶಾಸಕ ಭೀಮಣ್ಣ ಕಿಡಿಕಿಡಿಯಾಗಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಅದು ಅವರ ವಯಕ್ತಿಕ ಕೋಪ. ಭೀಮಣ್ಣ ತತ್ವ ಸಿದ್ದಾಂತದ ಕಾರಣಕ್ಕೆ ವಿರೋಧಿಸಿದ್ದಾರೆ. ಆದರೆ ನಾನು ,ಹೆಬ್ಬಾರ್ ರಾಜಕೀಯ ಹೊರತುಪಡಿಸಿ ಸೇಹ್ನಿತರು. 40 ವರ್ಷದಿಂದ ಅವರ ನನ್ನ ಸ್ನೇಹ ಇದೆ. ಅವರು ಕಾಂಗ್ರೆಸ್ ಗೆ ಬರುವುದು ಅನುಮಾನ ಎಂದರು.
ಬಿಜೆಪಿಯವರು ತಲೆ ಕೆಟ್ಟವರು. ಹಿಂದಿನ ಅವಧಿಯಲ್ಲಿ ನಮ್ಮ ಶಾಸಕರನ್ನು ಖರೀದಿ ಮಾಡಿದ್ದರು. ನಮಗೆ ಅಂಥ ಅವಶ್ಯಕತೆ ಇಲ್ಲ. ನಾವು 135 ಜನ ಶಾಸಕರು ಇದ್ದಾರೆ .ನಮ್ಮಲ್ಲಿ ಸಿದ್ದರಾಮಯ್ಯ ಟೀಮ್, ಶಿವಕುಮಾರ್ ಟೀಮ್ ಎಂದಿಲ್ಲ. ನಮ್ಮದು ಕಾಂಗ್ರೆಸ್ ಟೀಮ್. ನಮ್ಮ ಕಾರ್ಯಕ್ರಮ, ಪಕ್ಷದ ಸಿದ್ದಾಂತ ಮೆಚ್ಚಿ ಬಿಜೆಪಿ ಶಾಸಕರು ನಮ್ಮ ಕಡೆಗೆ ಬಂದರೆ, ಅವರ ಸೇರ್ಪಡೆ ಬಗ್ಗೆ ಪಕ್ಷದ ಹೈಕಮಾಂಡ್ ನಿರ್ಧಾರ ಮಾಡಲಿದೆ ಎಂದರು.
ರಾಜಕೀಯದಲ್ಲಿ ಕಾಂಗ್ರೆಸ್ ಸಮುದ್ರ ಎಂದು ಚಿಕ್ಕವನಿದ್ದಾಗ ಕೇಳಿದ್ದೆ.ಈಗ ನಾನು ಕಾಂಗ್ರೆಸ್ ಶಾಸಕ. ಜಿಲ್ಲಾ ಸಚಿವನಾಗಿದ್ದೇನೆ . ಕಾಂಗ್ರೆಸ್ ಎಲ್ಲಾ ನದಿಗಳನ್ನು ಸೇರಿಸಿಕೊಳ್ಳುವ ಐಕ್ಯತೆಯ ಸಮುದ್ರ ಎಂದರು .
ಜನರಿಗೆ, ಸಮಾಜಕ್ಕೆ ,ಸಮುದಾಯಕ್ಕೆ ಕಾಂಗ್ರೆಸ್ ಎಷ್ಟು ಅವಶ್ಯ ಎಂದು ಗೊತ್ತಾಗುತ್ತಿದೆ. ದ್ವೇಷ ಬಿತ್ತುವ ರಾಜಕೀಯ ಪಕ್ಷವನ್ನು ಕರ್ನಾಟಕದಲ್ಲಿ ಸೋಲಿಸಿದ್ದಾರೆ. ಕಾಂಗ್ರೆಸ್ ಗೆ ಅಧಿಕಾರ ನೀಡಿದ್ದಾರೆ ಎಂದು ಸಚಿವ ಮಂಕಾಳು ವೈದ್ಯ ಹೇಳಿದರು.
ಇದನ್ನೂ ಓದಿ: Anil Gokak: ಆಸ್ಪತ್ರೆಗೆ 10,000 ರೂ. ಕಟ್ಟಬೇಕಿತ್ತು, ನನ್ನಲ್ಲಿ ಅಷ್ಟು ಹಣವಿರಲಿಲ್ಲ…