ಬೆಂಗಳೂರು: ಬಿಬಿಎಂಪಿ ಆಯುಕ್ತರಾಗಿ ನೇಮಕಗೊಂಡ ಹಿರಿಯ ಐಎಎಸ್ ಅಧಿಕಾರಿ ಬಿ.ಎಚ್.ಅನಿಲ್ ಕುಮಾರ್ ಅಧಿಕಾರ ಸ್ವೀಕರಿಸಲು ವಿಳಂಬ ಮಾಡುತ್ತಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಡುತ್ತಿದೆ. ಬಿಬಿಎಂಪಿಯಲ್ಲಿ ದಿನದ 24 ಗಂಟೆ ಕಾರ್ಯ ನಿರ್ವಹಿಸಿದರೂ ಬಗೆಹರಿಯದಷ್ಟು ಸಮಸ್ಯೆಗಳಿದ್ದು, ಅಧಿಕಾರ ವಹಿಸಿಕೊಂಡ ಮರು ಕ್ಷಣವೇ ಕಾರ್ಯೋನ್ಮುಖರಾಗುಂತಹ ಪರಿಸ್ಥಿತಿಯಿದೆ.
ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಹೆಚ್ಚುವರಿ ಕಾರ್ಯದರ್ಶಿಯಾಗಿದ್ದ ಬಿ.ಎಚ್.ಅನಿಲ್ ಕುಮಾರ್‌ರನ್ನು ಬಿಬಿಎಂಪಿ ಆಯುಕ್ತರಾಗಿ ವರ್ಗಾವಣೆ ಮಾಡಿ ಆದೇಶ ಹೊರಡಿಸಿರುವ ಸರ್ಕಾರ ಎನ್.ಮಂಜುನಾಥ ಪ್ರಸಾದ್‌ಗೆ ಯಾವುದೇ ಹುದ್ದೆ ಸೂಚಿಸಿಲ್ಲ. ಹಾಗಾಗಿ ಅವರನ್ನು ಪಾಲಿಕೆ ಆಯುಕ್ತರಾಗೇ ಮುಂದುವರಿಸಲು ಬೆಂಗಳೂರಿನ ಶಾಸಕರು ಪಕ್ಷಾತೀತವಾಗಿ ಸರ್ಕಾರದ ಮೇಲೆ ಒತ್ತಡ ಹೇರುತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
ಇದಕ್ಕೆ ಇಂಬು ನೀಡುವಂತೆ ಗುರುವಾರ
“ಉದಯವಾಣಿ’ ಜತೆ ಮಾತನಾಡಿದ ಬಿ.ಎಚ್.ಅನಿಲ್ ಕುಮಾರ್, ಶುಕ್ರವಾರವೇ ಅಧಿಕಾರ ಸ್ವೀಕರಿಸುವುದಾಗಿ ತಿಳಿಸಿದ್ದರು. ಆದರೆ, ಈಗ ಖಾಸಗಿ ಕಾರಣಗಳಿಂದಾಗಿ ಬುಧವಾರ ಅಧಿಕಾರ ಸ್ವೀಕರಿಸವುದಾಗಿ ಹೇಳಿರುವುದು ಮತ್ತಷ್ಟು ಚರ್ಚೆಗಳಿಗೆ ಅನುವು ಮಾಡಿಕೊಟ್ಟಿದೆ.
ಬಿಬಿಎಂಪಿಯಲ್ಲಿ ಅತೀ ಹೆಚ್ಚು ಕಾಲ ಆಯುಕ್ತರಾಗಿ ಸೇವೆ ಸಲ್ಲಿಸಿರುವ ಎನ್.ಮಂಜುನಾಥ ಪ್ರಸಾದ್ ಕಾರ್ಯವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿರುವ ಬಹುತೇಕ ಶಾಸಕರು, ಅವರನ್ನೇ ಮುಂದುವರಿಸುವಂತೆ ಸಿಎಂ ಬಳಿ ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ.
ಸಮರ್ಥ ಆಯುಕ್ತರು ಬೇಕಷ್ಟೇ: ಈ ನಡುವೆ “ಸರ್ಕಾರದ ಹಂತದಲ್ಲಾಗುವ ತೀರ್ಮಾನಗಳ ಬಗ್ಗೆ ನಾವು ಮಾತನಾಡುವುದಿಲ್ಲ. ಆದರೆ ಪಾಲಿಕೆಯಲ್ಲಿರುವ ಬಗೆಹರಿಯದ ನೂರಾರು ಸವಾಲುಗಳನ್ನು ಸಮರ್ಪಕವಾಗಿ ನಿಭಾಯಿಸುವ ಆಯುಕ್ತರು ಬೇಕು. ನೂತನ ಆಯುಕ್ತರು ಬೇಗ ಅಧಿಕಾರ ವಹಿಸಿಕೊಳ್ಳಬೇಕು.
ಇಲ್ಲದಿದ್ದರೆ ಹಾಲಿ ಆಯುಕ್ತರನ್ನೇ ಮುಂದುವರಿಸಬೇಕು’ ಎಂದು ಕೆಲ ಪಾಲಿಕೆ ಸದಸ್ಯರು ಒತ್ತಾಯಿಸಿದ್ದಾರೆ ಎನ್ನಲಾಗಿದೆ. ಮಹತ್ವದ ಹುದ್ದೆಗಳಿಗೆ ವರ್ಗಾವಣೆ ಆದೇಶ ಹೊರಬಿದ್ದ ಕೆಲ ನಿಮಿಷಗಳಲ್ಲೇ ಧಿಕಾರಿಗಳು ಅಧಿಕಾರ ಸ್ವೀಕರಿಸುತ್ತಾರೆ. ಆದರೆ, ಇಲ್ಲಿ ಅಂತಹ ಉತ್ಸಾಹ ಕಾಣದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.