ಬೆಂಗಳೂರು: ವಿಧಾನಸಭೆ ಚುನಾವಣೆ ಮತದಾನಕ್ಕೆ ಇನ್ನು ಕೆಲವೇ ದಿನ ಬಾಕಿ ಇರುವಂತೆ ದಿಢೀರ್ ಬೆಳವಣಿಗೆಯಲ್ಲಿ ಬೆಂಗಳೂರು ನಗರ ಜಿಲ್ಲಾ ಚುನಾವಣಾಧಿಕಾರಿಯೂ ಆಗಿದ್ದ ಬಿಬಿಎಂಪಿ ಆಯುಕ್ತ ಡಾ. ಎನ್. ಮಂಜುನಾಥ್ ಪ್ರಸಾದ್ ಅವರನ್ನು ಚುನಾವಣಾ ಆಯೋಗದ ನಿರ್ದೇಶನದಂತೆ ಸರ್ಕಾರ ಎತ್ತಂಗಡಿ ಮಾಡಿದ್ದು, ಅವರ ಸ್ಥಾನಕ್ಕೆ ಕೃಷಿ ಇಲಾಖೆ ಕಾರ್ಯದರ್ಶಿಯಾಗಿದ್ದ ಎಂ.ಮಹೇಶ್ವರ ರಾವ್ ಅವರನ್ನು ನೇಮಕ ಮಾಡಿದೆ.
ಈ ಕುರಿತು ಗುರುವಾರ ಬೆಳಗ್ಗೆ ಆದೇಶ ಹೊರಡಿಸಿರುವ ಸರ್ಕಾರ, ತಕ್ಷಣದಿಂದಲೇ ಅಧಿಕಾರ ಸ್ವೀಕರಿಸಬೇಕು ಮತ್ತು 24 ಗಂಟೆಯೊಳಗೆ ಚುನಾವಣಾ ಕರ್ತವ್ಯಗಳನ್ನು ಆರಂಭಿಸಬೇಕು ಎಂದು ಮಹೇಶ್ವರರಾವ್ ಅವರಿಗೆ ನಿರ್ದೇಶನ ನೀಡಿದೆ. ಆದರೆ, ಮಂಜುನಾಥ್ ಪ್ರಸಾದ್ ಅವರಿಗೆ ಯಾವುದೇ ಸ್ಥಳ ಗೊತ್ತುಪಡಿಸಿಲ್ಲ.
ಚುನಾವಣಾ ಪೂರ್ವಸಿದ್ಧತೆ ಹಾಗೂ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿ ಆಗಿರುವ ಲೋಪಗಳೇ ಮಂಜುನಾಥ್ ಅವರ ದಿಢೀರ್ ಎತ್ತಂಗಡಿಗೆ ಕಾರಣ ಎಂದು ಹೇಳಲಾಗುತ್ತಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವ ವಾಣಿಜ್ಯ ಜಾಹಿರಾತು ಫಲಕಗಳ ಬಳಕೆಗೆ ಅನುಮತಿ ನೀಡಲು ನಿರಾಕರಿಸುತ್ತಿರುವ ಬಿಬಿಎಂಪಿ ಆಯುಕ್ತರು ತಾರತಮ್ಯ ಮಾಡುತ್ತಿದ್ದಾರೆ ಎಂದು ಬಿಜೆಪಿ ಕೇಂದ್ರ ಚುನಾವಣಾ ಆಯೋಗಕ್ಕೆ ಮೇ 2ರಂದು ದೂರು ಕೊಟ್ಟಿತ್ತು.
ಅದರ ಮಾರನೇ ದಿನವೇ ಆಯೋಗದ ನಿರ್ದೇಶನದಂತೆ ಅವರನ್ನು ವರ್ಗಾವಣೆಗೊಳಿಸಲಾಗಿದೆ. ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ ಹಿರಿಯ ಉಪ ಆಯುಕ್ತ ಉಮೇಶ್ ಸಿನ್ಹಾ ರಾಜ್ಯಕ್ಕೆ ಭೇಟಿ ಕೊಟ್ಟು ಚುನಾವಣಾ ಸಿದ್ಧತೆಗಳನ್ನು ಪರಿಶೀಲನೆ ನಡೆಸಿದ ವೇಳೆ ಶಾಂತಿನಗರ, ದಾಸರಹಳ್ಳಿ, ಯಶವಂತಪುರ,
ಯಲಹಂಕ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ 7 ಸಾವಿರಕ್ಕೂ ಹೆಚ್ಚು ನಕಲಿ ಮತದಾರರನ್ನು ಮತದಾರರ ಪಟ್ಟಿಗೆ ಸೇರಿಸಿದ ಪ್ರಕರಣ ಬೆಳಕಿಗೆ ಬಂದಿತ್ತು. ಅಲ್ಲದೆ, ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡ ಸಿಬ್ಬಂದಿ ಪೈಕಿ 1,500 ಮಂದಿ ಮೊದಲ ಹಂತದ ತರಬೇತಿಗೆ ಗೈರು ಹಾಜರಾದ ವಿಷಯ ಗಂಭೀರವಾಗಿ ಚರ್ಚೆಗೆ ಬಂದಿತ್ತು ಎಂದು ಮುಖ್ಯ ಚುನಾವಣಾಧಿಕಾರಿ ಕಚೇರಿಯ ಮೂಲಗಳು ತಿಳಿಸಿವೆ.
ಏನಿದು ಜಾಹೀರಾತು ಫಲಕಗಳಲ್ಲಿ ತಾರತಮ್ಯ?: ನಗರದಲ್ಲಿರುವ ವಾಣಿಜ್ಯ ಜಾಹೀರಾತು ಫಲಕಗಳಲ್ಲಿ ಜಾಹೀರಾತು ಪ್ರಕಟಿಸಲು ಅನುಮತಿ ನೀಡುವಂತೆ ರಾಜಕೀಯ ಪಕ್ಷಗಳು ಕೋರಿದ್ದವು. ಆದರೆ, ನಗರದಲ್ಲಿ 2,650 ಅನಧಿಕೃತ ಜಾಹೀರಾತು ಫಲಕಗಳಿರುವುದರಿಂದ ಅನುಮತಿ ನೀಡದಿರಲು ಬಿಬಿಎಂಪಿ ಆಯುಕ್ತರೂ ಆಗಿರುವ ಜಿಲ್ಲಾ ಚುನಾವಣಾಧಿಕಾರಿ ಮಂಜುನಾಥ್ ಪ್ರಸಾದ್ ನಿರ್ಧರಿಸಿದ್ದರು.
ಈ ಕುರಿತು ವಿವಿಧ ರಾಜಕೀಯ ಪಕ್ಷಗಳು ಮುಖ್ಯ ಚುನಾವಣಾಧಿಕಾರಿಗಳಿಗೆ ದೂರು ನೀಡಿದ್ದವು. ಅದರಂತೆ ಸಾರ್ವಜನಿಕ ಮುಕ್ತ ಪ್ರದೇಶಗಳ ಸಂರಕ್ಷಣೆ ಕಾಯ್ದೆ 1981, ಕೆಎಂಸಿ ಹಾಗೂ ಜಾಹೀರಾತು ಉಪವಿಧಿಗಳಂತೆ ಅಗತ್ಯ ಕ್ರಮಕೈಗೊಳ್ಳುವಂತೆ ಮುಖ್ಯ ಚುನಾವಣಾಧಿಕಾರಿಗಳು ಆಯುಕ್ತರಿಗೆ ಸೂಚಿಸಿದ್ದರು. ಇದಾದ ಬಳಿಕವೂ ಆಯುಕ್ತರು ವಾಣಿಜ್ಯ ಜಾಹೀರಾತು ಫಲಕಗಳ ಬಳಕೆ ಅನುಮತಿ ನೀಡಿಲ್ಲ ಹಾಗೂ ತಾರತಮ್ಯ ಎಸಗಿದ್ದು, ಅವರ ವಿರುದ್ಧ ಕ್ರಮಕೈಗೊಳ್ಳುವಂತೆ ಬಿಜೆಪಿ ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡಿತ್ತು.