Advertisement

ಕೇರಳ ಮಾದರಿಯಲ್ಲಿ ಗ್ರಾ.ಪಂ ಅಧ್ಯಕ್ಷ,ಸದಸ್ಯರ ಗೌರವ ಧನ ಹೆಚ್ಚಳಕ್ಕೆ ಮಂಜುನಾಥ ಭಂಡಾರಿ ಆಗ್ರಹ

09:24 PM Feb 15, 2024 | Team Udayavani |

ಬೆಂಗಳೂರು: ಗ್ರಾಮ ಪಂಚಾಯತ್‌ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರನ್ನು ರಾಜ್ಯ ಶಿಷ್ಟಾಚಾರದ ವ್ಯಾಪ್ತಿಗೆ ತರಬೇಕು. ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ನಡೆಯುವ ಸರಕಾರದ ಕಾರ್ಯಕ್ರಮಗಳಿಗೆ ಆಹ್ವಾನಿಸಬೇಕು. ಆಹ್ವಾನ ಪತ್ರಿಕೆ ಮತ್ತು ಶಿಲಾಫ‌ಲಕಗಳಲ್ಲಿ ಅವರ ಹೆಸರು ಮುದ್ರಿಸಬೇಕು. ಜತೆಗೆ ರಾಜ್ಯದ ಗ್ರಾಮ ಪಂಚಾಯತ್‌ ಸದಸ್ಯರ ಮಾಸಿಕ ಗೌರವಧನವನ್ನು ಕೇರಳ ಮಾದರಿಯಲ್ಲಿ ಜಾರಿಗೊಳಿಸಬೇಕೆಂದು ಕಾಂಗ್ರೆಸ್‌ನ ಮಂಜುನಾಥ್‌ ಭಂಡಾರಿ ಆಗ್ರಹಿಸಿದರು.

Advertisement

ಸದನದಲ್ಲಿ ನಿಯಮ-330ರ ಅಡಿಯಲ್ಲಿ ವಿಷಯ ಪ್ರಸ್ತಾವಿಸಿದ ಅವರು, ಗ್ರಾಮ ಪಂಚಾಯತ್‌ ಸದಸ್ಯರ ಸಮಸ್ಯೆಗಳನ್ನು ಎಳೆ ಎಳೆಯಾಗಿ ಸದನದ ಮುಂದಿಟ್ಟರು.

ಗ್ರಾಮ ಪಂಚಾಯತ್‌ ಸದಸ್ಯರು ತಾಲೂಕು ಮತ್ತು ಜಿಲ್ಲಾ ಕೇಂದ್ರಗಳಿಗೆ ಜನಪರ ಕೆಲಸಗಳಿಗಾಗಿ ಓಡಾಡಲು ಉಚಿತ ಬಸ್‌ ಪಾಸ್‌ ವ್ಯವಸ್ಥೆ ಮಾಡಬೇಕು. ಜತೆಗೆ ಆರೋಗ್ಯ ವಿಮೆ ವ್ಯವಸ್ಥೆ ಮಾಡಬೇಕು. ವಿಧಾನಸೌಧ ಹಾಗೂ ಇತರ ಸರಕಾರಿ ಕಚೇರಿಗಳಲ್ಲಿ ಟೋಲ್‌ಗ‌ಳಲ್ಲಿ ಮುಕ್ತ ಪ್ರವೇಶಕ್ಕೆ ಅವಕಾಶ ಮಾಡಿಕೊಡಬೇಕು. ಜತೆಗೆ ಗ್ರಾಮ ಪಂಚಾಯತ್‌ ಸ್ಥಾಯಿ ಸಮಿತಿಗಳು ಸಕ್ರಿಯವಾಗಿ ಕಾರ್ಯನಿರ್ವಹಿಸುವಂತಾಗಲು ಎಲ್ಲ ಇಲಾಖೆಗಳ ಗ್ರಾ. ಪಂ.ಹಂತದ ಅಧಿಕಾರಿಗಳು ಭಾಗವಹಿಸುವುದನ್ನು ಖಾತ್ರಿಗೊಳಿಸಿ ಕೆಡಿಪಿ ಸಭೆಗಳನ್ನು ಶಾಸನಬದ್ಧಗೊಳಿಸಬೇಕು ಎಂದು ಭಂಡಾರಿ ಆಗ್ರಹಿಸಿದರು.

ಗ್ರಾಮ ಪಂಚಾಯತ್‌ಗಳು ಸ್ಥಳೀಯ ಸ್ವಯಂ ಸರಕಾರಗಳಾಗಿ ಕಾರ್ಯನಿರ್ವಹಿಸುವಂತಾಗಲು ಗ್ರಾಮ ಪಂಚಾಯತ್‌ ಅಧ್ಯಕ್ಷರು, ಕಾರ್ಯನಿರ್ವಾಹಕ ಮುಖ್ಯಸ್ಥನಾಗಿ ಕಾರ್ಯ ನಿರ್ವಹಿಸುವಂತಾಗಬೇಕು. ಪಿಡಿಒ ಮುಖ್ಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುವಂತಾಗಲು ಗ್ರಾ.ಪಂ. ಕಚೇರಿ ನಿರ್ವಹಣೆ ಕೈಪಿಡಿ ರಚಿಸಬೇಕು. ಗ್ರಾಮ ಪಂಚಾಯತ್‌ ಸ್ಥಾಯಿ ಸಮಿತಿಗಳು ಸಕ್ರಿಯವಾಗಿ ಕೆಲಸ ಮಾಡಲು ಸರಕಾರ ನಿಯಮ ರೂಪಿಸಬೇಕೆಂದು ಅವರು ಆಗ್ರಹಿಸಿದರು.

ಶಾಸನಬದ್ಧ ಅನುದಾನದಲ್ಲಿ ಅಧಿನಿಯಮದಲ್ಲಿರುವಂತೆ ಶೇ.20ರಷ್ಟು ಅನಿರ್ಬಂಧಿತ ಅನುದಾನವಾಗಿ ನೀಡಬೇಕು. ಪಂಚಾಯತ್‌ಗಳಿಗೆ ನೀಡಿರುವ 15ನೇ ಹಣಕಾಸು ಆಯೋಗದ ಅನುದಾನ ಬಳಕೆಯಲ್ಲಿ ರಾಜ್ಯ ಸರಕಾರದ ಹಸ್ತಕ್ಷೇಪ ನಿಲ್ಲಬೇಕು. ಕರ್ನಾಟಕ ಗ್ರಾಮ ಸ್ವರಾಜ್‌ ಮತ್ತು ಪಂಚಾಯತ್‌ ರಾಜ್‌ ನಿಯಮಗಳು 2020 ಅನ್ನು ರದ್ದುಗೊಳಿಸಬೇಕು. ಜತೆಗೆ ಗ್ರಾ.ಪಂ.. ನೌಕರರನ್ನು ಅಧಿನಿಯಮದ ಅನುಸಾರ ನೇಮಕ ಮಾಡಿಕೊಳ್ಳುವ ಅಧಿಕಾರವನ್ನು ಪಂಚಾಯತ್‌ಗಳಿಗೆ ನೀಡಬೇಕು ಎಂದು ಮನವಿ ಮಾಡಿದರು

Advertisement
Advertisement

Udayavani is now on Telegram. Click here to join our channel and stay updated with the latest news.

Next