Advertisement

ಫಾಸ್ಟ್‌ಫ‌ುಡ್‌ ತಾತ ನನಗಿಟ್ಟ ಹೆಸರೇನು ಗೊತ್ತಾ?

04:44 PM Apr 22, 2017 | |

ಮೊದಲ ಬಾರಿ ಬೆಂಗಳೂರು ರೈಲ್ವೆ ಸ್ಟೇಷನ್‌ಗೆ ಬಂದು ಇಳಿದೆ… ಹೊರಗೆ ಹೇಗೆ ಹೋಗಬೇಕೆಂಬುದೇ ತಿಳಿಯುತ್ತಿಲ್ಲ… ಯಾರನ್ನೂ ಕೇಳಲಾರದಷ್ಟು ಸಂಕೋಚ ಬೇರೆ… ನನ್ನೊಂದಿಗೆ ಇಳಿದ ಗುಂಪಿನೊಂದಿಗೆ ನಾನೂ ಹೆಜ್ಜೆ ಹಾಕಲಾರಂಭಿಸಿದೆ. ಅವರ ವೇಗದ ನಡಿಗೆಗೆ ಹೊಂದಿಕೊಳ್ಳಲು ಕೂಡ ಕಷ್ಟ ಆಗುತಿತ್ತು… ಬೆಂಗಳೂರು ತುಂಬಾ ಸ್ಪೀಡ್‌ ಅಂತ ಕೇಳಿದ್ದೆ.. ಸ್ಪೀಡ್‌ ಅಂದರೆ ಇದೇನಾ? ಅಂತ ಯೋಚಿಸುತ್ತಾ ಅವರ ಸ್ಪೀಡಿಗೆ ಹೊಂದಿಕೊಳ್ಳಲು ಪ್ರಯತಿಸುತ್ತಿದ್ದೆ. ಅವರೆಲ್ಲರೂ underpass  ಒಳಗೆ ಎಂಟ್ರಿ ಕೊಟ್ಟರು. ನಾನು ಹೋಗುವುದೋ ಬೇಡವೋ ತಿಳಿಯದೆ ಹಾಗೇ ಸುಮ್ಮನೆ ನಿಂತೆ. ಹಿಂದಿನಿಂದ ಬಂದ ಮತ್ತೂಂದು ಗುಂಪು ನನ್ನನ್ನು ಅಲ್ಲಿ ನಿಲ್ಲಲು ಬಿಡದೆ ಅವರ ಜೊತೆ ತಳ್ಳಿಕೊಂಡು ಹೋಯ್ತು. ಇಷ್ಟು ಸ್ಪೀಡ್‌ ಆಗಿ ಇವರೆಲ್ಲ ಹೋಗುವುದಾದರೂ ಎಲ್ಲಿಗೆ? ಎಂಬ ಪ್ರಶ್ನೆಗೆ ನನಗೆ ಉತ್ತರ ಸಿಕ್ಕಿದ್ದು ನಾನು ಸೀರಿಯಲ್‌ಗೆ ಸೇರಿಕೊಂಡು ಮಂಡ್ಯದಿಂದ ಬೆಂಗಳೂರಿಗೆ ಅಪ್‌ ಅಂಡ್‌ ಡೌನ್‌ ಮಾಡಲು ಶುರು ಮಾಡಿದಾಗ! ಆಗ, ನಾನು ಕೂಡ ಬೆಂಗಳೂರಿನ ಸ್ಪೀಡ್‌ಗೆ ಹೊಂದಿಕೊಂಡುಬಿಟ್ಟಿದ್ದೆ. 

Advertisement

ಬೆಂಗಳೂರಿಗಿಂತ ಸ್ಪೀಡ್‌ ಇದ್ದಿದ್ದು ನಮ್ಮ ಟಿವಿ ಸೀರಿಯಲ್ಸ್‌. ದಿನಕ್ಕೆ ಇಷ್ಟು ಸೀನ್ಸ್‌ ಅಂತ ಬರೆಯಲೇ ಬೇಕಿತ್ತು. ಮೆಗಾ ಧಾರಾವಾಹಿಯ ಮುಂದೆ ಮಹಾನಗರಿಯ ಸ್ಪೀಡ್‌ ಸ್ವಲ್ಪಕಮ್ಮಿನೇ ಅನ್ನಿಸಿತ್ತು. ದಿನಾ ಬೆಳಿಗ್ಗೆ 10 ಗಂಟೆಗೆ ಆಫೀಸ್‌ ಸೇರಿಕೊಂಡು ತಲೆಬಗ್ಗಿಸಿ ಬರೆಯಲು ಕುಳಿತರೆ, ತಿಂಡಿಧಿ ಊಟ ಎಲ್ಲ ತಿಂದ್ವಾ ಅನ್ನೋ ಕನ್ಫ್ಯೂಷನ್‌ ಎಷ್ಟೋ ಸಾರಿ ಆಗುತ್ತಿತ್ತು. ಮತ್ತೆ ನಾನು ವಾಪಸ್‌ ಹೋಗುತ್ತಿದ್ದಿದ್ದು ರಾತ್ರಿ 11.30 ಟ್ರೈನಿಗೆ. ಆಗ ನನಗೆ ಬೆಂಗಳೂರು ಅಂದರೆ ಪುಶ್‌ ಪುಲ್‌ ಟ್ರೈನ್‌ ಹಾಗು ಟಿವಿ ಸೀರಿಯಲ್‌ ಆಫೀಸ್‌ ಅಷ್ಟೇ ಆಗಿತ್ತು. ಓಡಾಟ ಕಷ್ಟವಾಗಿ ಬೆಂಗಳೂರಿನ ಗೆಳೆಯರ ರೂಮಿನಲ್ಲಿ ಸ್ವಲ್ಪ ಜಾಗ ಹುಡುಕಿಕೊಂಡೆ. ಅದು ಬರೋಬ್ಬರಿ 12 ಜನರಿದ್ದ ರೂಮ್‌ ಒಂದು ದೊಡ್ಡ ಹಾಲ್‌ ಇತ್ತು. ಒಂದು ಬಾತ್‌ರೂಮ್‌ ಹಾಗೂ ಅಡುಗೆ ಮನೆ ಇತ್ತು. ಅವರಲ್ಲಿ ನಂಗೆ ಪರಿಚಯ ಇದ್ದ ಗೆಳೆಯರು 3 ಜನ ಅಷ್ಟೇ. ಎಲ್ಲರೂ ಬೇರೆ ಬೇರೆ ಕೆಲಸದವರು. ಬೇರೆ ಬೇರೆ ಟೈಮಿಂಗ್ಸ್‌. ಯಾರು ಯಾವಾಗ ಬರುತ್ತಾರೆ ಎಂಬುದೇ ತಿಳಿಯುತ್ತಿರಲಿಲ್ಲ. 

ಒಮ್ಮೆ ರೂಮ… ಸೇರಿಕೊಂಡ ಮೇಲೆ ರಾತ್ರಿ ಊಟದ ಚಿಂತೆ ಶುರುವಾಯ್ತು. ಸಿಟಿ ಬಸ್‌ ಹಿಡಿದು ರೂಮ… ಇರುವ ಏರಿಯಾಗೆ ಬರೋವಷ್ಟರಲ್ಲೇ ರಾತ್ರಿ 12 ಆಗ್ತಾ ಇತ್ತು. ಹೋಟೆಲ… ಎಲ್ಲ ಮುಚ್ಚಿ ರೋಡ್‌ ಸೈಡ್‌ ಗಾಡಿಗಳಲ್ಲಿ ಮಾತ್ರ ಊಟ ಸಿಗುತಿತ್ತು. ಆಫೀಸ್‌ ಬಿಡುತ್ತಾ ಇದ್ದಿದ್ದು ರಾತ್ರಿ 11ಕ್ಕೆ. ಆ ಏರಿಯಾದಲ್ಲೇ  ಊಟ ಮಾಡಿ ಬಿಡೋಣ ಅಂದುಕೊಂಡರೆ ಲಾಸ್ಟ್‌  ಬಸ್‌ ಮಿಸ್‌ ಆಗೋ ಭಯ ಇತ್ತು. ರೋಡ್‌ ಸೈಡ್‌ ತಿನ್ನೋದು ಅವಮಾನ ಅನ್ನೋದಕ್ಕಿಂತ ಅದೇನು ಹಾಕಿ ಕೊಡುತ್ತಾನೋ ಅನ್ನೋ ಅನುಮಾನದೊಂದಿಗೆ ಡೈಲಿ ತಿನ್ನುತಿದ್ದೆ. ಈಗ ಫ‌ುಡ್‌ ಸ್ಟ್ರೀಟ್‌ ಅಂತಾನೇ ಇದೆ. ಅಲ್ಲಿ ಹೋಗಿ ತಿನ್ನೋದು ಈಗ ಬೆಂಗಳೂರಿಗರ ಒಂದು ಫ್ಯಾಶನ್‌ ಆಗಿದೆ. ಆಗ ನನಗೆ ಅದು ಪ್ಯಾಷನ್‌ ಅಲ್ಲ. ಬೇರೆ ಏನು ಗತಿ ಇಲ್ಲದ situation!  

ಅಲ್ಲಿ ತುಂಬಾ ವಯಸ್ಸಾಗಿದ್ದ ತಾತ ಒಬ್ಬ ಎಗ್‌ ಫ್ರೈಡ್‌ ರೈಸ್‌ ಮಾಡಿ ಕೊಡುತ್ತಿದ್ದ. ಆಮ್ಲೆಟ್‌ ಹಾಕಿ ಕೊಡುತ್ತಿದ್ದ. ಒಬ್ಬ ಅಸಿಸ್ಟೆಂಟ್‌ನನ್ನೂ ಇಟ್ಟುಕೊಳ್ಳದೆ ಎಲ್ಲವನ್ನೂ ತಾನೇ ಹ್ಯಾಂಡಲ್‌  ಮಾಡುತ್ತಿದ್ದ. ತಿಂದು ದುಡ್ಡು ಕೊಡದೆ ಹೋದರೂ ಆತ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ನಾವು ನಾವೇ ತಿಂದದ್ದನ್ನ ನೆನಪು ಮಾಡಿ ದುಡ್ಡು ಕೊಡಬೇಕಿತ್ತು. ದಿನಾ ರಾತ್ರಿ ನಾನು ಅಲ್ಲಿಗೆ ಹೋಗುತ್ತಿದ್ದುದರಿಂದ ನನ್ನ ಮುಖ ಪರಿಚಯ ಆತನಿಗೆ ಚೆನ್ನಾಗಿಯೇ ಇತ್ತು. ಹೋದಕೂಡಲೇ ಆತ ಏನು ಬೇಕು ಅಂತ ಕೇಳದೆ ತಾನಾಗಿಯೇ ಕೊಟ್ಟು ಬಿಡುತ್ತಿದ್ದ. ಜನ ಜಾಸ್ತಿ ಇದ್ದಾಗ ನಾನು ಕೂಡ ಆತನಿಗೆ ಜನರ ದುಡ್ಡು ಈಸ್ಕೊಂಡು ಚಿಲ್ಲರೆ ಕೊಡುತ್ತ ಹೆಲ್ಪ ಮಾಡುತ್ತಿದ್ದೆ. ಪೊಲೀಸ್‌ ಬೀಟ್‌ ಬಂದಾಗ ಆತ ನನ್‌ ಕೈಲೇ ಮಾಮೂಲಿ ಕೊಟ್ಟು ತಲುಪಿಸಲು ಕಳಿಸುತ್ತಿದ್ದ. ಆ ಮುದುಕನ ಹತ್ತಿರಾನೂ ಮಾಮೂಲಿಗೆ ಕೈ ಚಾಚಬೇಕಾ? ಅಂತ ಪೊಲೀಸರಿಗೆ ಕೇಳಬೇಕೆನಿಸುತ್ತಿತ್ತು. ಎಲ್ಲವನ್ನೂ ಹಾಗೇ ನುಂಗಿಕೊಂಡು ಮಾಮೂಲಿ ಕೊಟ್ಟು ಬರುತ್ತಿ¨ªೆ. 

ನಿಜಕ್ಕೂ ಹೇಳಬೇಕೆಂದರೆ ಆ ಮುದುಕ ನನ್ನಂಥ ಎಷ್ಟೋ ಜನರಿಗೆ ಅನ್ನದಾತನಾಗಿದ್ದ. ಕೂಲಿ ಕಾರ್ಮಿಕರು, ಆಟೋ ಡ್ರೈವರ್‌ಗಳು, ಗಾರ್ಮೆಂಟ್ಸ್‌ ಉದ್ಯೋಗಿಗಳು, ಸ್ಟೂಡೆಂಟ್‌ಗಳು, ಎಲ್ಲರಿಗೂ ಅವನ ತಳ್ಳೋ ಗಾಡಿ ಎಂಪೈರ್‌ ಹೋಟೆಲ್‌ ಇದ್ದ ಹಾಗೆ. ಬೆಂಗಳೂರಿನಲ್ಲಿ ಏನಾದರೂ ಸಾಧಿಸಬೇಕು ಎಂದು ಫೈರ್‌ ಇಟ್ಟುಕೊಂಡು ಬಂದಿದ್ದ ನನ್ನಂಥ ಹುಡುಗರಿಗೆ ನಿಜಕ್ಕೂ ಅವನೊಬ್ಬ ರೋಲ್‌ ಮಾಡೆಲ್‌. ಆ ವಯಸ್ಸಿನಲ್ಲೂ ದುಡಿಯುತ್ತಿದ್ದ ಕಾಯಕ ಯೋಗಿ ಆತ. ಆತನ  ಹಿನ್ನೆಲೆ ಬಗ್ಗೆ ನಾನು ಯಾವತ್ತೂ ವಿಚಾರಿಸಿರಲಿಲ್ಲ.ಆತ ಕೂಡ ನನ್ನ ಹಿನ್ನೆಲೆ ಬಗ್ಗೆ ಕೇಳಿರಲಿಲ್ಲ. ನಾನು ಬರೋದು ಲೇಟ್‌ ಆದರೆ ಎಗ್‌ ರೈಸ್‌ ಇಟ್ಟಿರಲಿ ಎಂಬ ಕಾರಣಕ್ಕೆ ಆತನ  ಮೊಬೈಲ್‌ ನಂಬರ್‌ ಈಸ್ಕೊಂಡಿದ್ದೆ. ನನ್ನ ಮೊಬೈಲ್‌ ನಂಬರ್‌ ಕೂಡ ಕೊಟ್ಟಿದ್ದೆ. 

Advertisement

ಈ ರೀತಿಯ ಹೆಸರಿಲ್ಲದ ಸಂಬಂಧವೊಂದು ಬೆಂಗಳೂರಿನಲ್ಲಷ್ಟೇ ಬೆಳೆಯಲು ಸಾಧ್ಯ. ಒಂದು  ದಿನ ರಾತ್ರಿ ಆಫೀಸ್‌ನಲ್ಲಿ ಡೈಲಾಗ್‌ ಬರೆಯುತ್ತಿದ್ದಾಗ ಆ ಮುದುಕನ ನಂಬರಿಂದ ಕಾಲ್‌ ಬಂತು. ಎಗ್‌ ರೈಸ್‌ ಖಾಲಿಯಾಗಿರಬೇಕು, ಅದನ್ನೇ ಹೇಳಲು ತಾತ ಕಾಲ್‌ ಮಾಡಿರಬೇಕು ಎಂದು ರಿಸೀವ್‌ ಮಾಡಿ “ಹೇಳಿ ತಾತ’ ಅಂದೆ. ಆ ಕಡೆಯಿಂದ ಪೊಲೀಸ್‌ ಆಫೀಸರ್‌ ಒಬ್ಬ ಮಾತನಾಡಿ “ನಿಮಗೆ ಏನಾಗಬೇಕು ಇವರು’ ಅಂದ. “ಯಾಕ್‌ ಸಾರ್‌?’ ಅಂದೆ. “ಬನ್ನಿ ಇಲ್ಲಿಗೆ. ಆಮೇಲೆಲ್ಲಾ ಹೇಳ್ತೀನಿ’ ಅಂದರು. ಪೊಲೀಸ್‌ ಫೋನ್‌ ಮಾಡೋವಂಥ ಕೆಲಸ ಈ ತಾತ ಏನ್‌ ಮಾಡಿದನಪ್ಪಾ ಅನ್ನೋ ಆತಂಕ, ಭಯದÇÉೇ ಅಲ್ಲಿಗೆ ಬಸ್‌ ಹಿಡ್ಕೊಂಡ್‌ ಹೊರಟೆ. ಅಲ್ಲಿಗೆ ಹೋಗಿ ನೋಡಿದರೆ ತಾತ ತೀರಿಕೊಂಡಿದ್ದರು. ಆಮ್ಲೆಟ್‌ ಹಾಕಿಕೊಡುತ್ತಲೇ ಕುಸಿದು ಬಿದ್ದವರು ಏಳಲೇ ಇಲ್ಲ. 

“ನಿಮಗೆ ಏನಾಗ್ಬೇಕು ಇವ್ರು?’ ಕೇಳಿದರು ಪೊಲೀಸ್‌. “ಏನು ಇಲ್ಲ. ತಾತನಿಗೆ ನಾನು ಒಬ್ಬ ಗಿರಾಕಿ ಅಷ್ಟೇ’ ಅಂತ ಅಂದೆ. “ನಿಮ್‌ ನಂಬರ್‌ ಇವರ  ಮೊಬೈಲ್‌ನಲ್ಲಿ ಸೇವ್‌ ಆಗಿತ್ತು. ಅದಕ್ಕೆ ನಿಮಗೆ ಕಾಲ್‌ ಮಾಡುದ್ವಿ’ ಅಂದ ಆತ. ದಿನಾ ನಾನೇ ಮಾಮೂಲಿ ಕೊಡುತ್ತಿದ್ದದ್ದಕ್ಕೋ ಏನೋ, “ತಗೊಳ್ಳಿ ತಾತನ ಮೊಬೈಲು. ನೀವೇ ಇಟ್ಕೊಳಿ’ ಅಂತ ನನ್ನ ಕೈಗೆ ಕೊಟ್ಟ. “ನಂಗ್‌ ಬೇಡ ಸಾರ್‌’ ಅಂತ ವಾಪಸ್‌ ಕೊಟ್ಟೆ. ಮೊಬೈಲ್‌ ವಾಪಸ್‌ ಕೊಡುವಾಗ ತಾತ ನನ್‌ ನಂಬರ್‌ನ ಏನಂತ ಸೇವ್‌ ಮಾಡ್ಕೊಂಡಿರಬೋದು ಅನ್ನೋ ಕುತೂಹಲದಿಂದ ಚೆಕ್‌ ಮಾಡಿ ನೋಡೆª. ತಾತ ನನ್‌ ಮೊಬೈಲ್‌ ನಂಬರನ್ನ ಸೇವ್‌ ಮಾಡಿಕೊಂಡಿದ್ದ ಹೆಸರು ನೋಡಿ ಆ ಕ್ಷಣದಲ್ಲೂ ನಂಗೆ ಸಣ್ಣ ನಗು ಬಂತು. ಆತ ಸೇವ್‌ ಮಾಡಿ ಇಟ್ಟುಕೊಂಡಿದ್ದ ನನ್ನ ಹೆಸರು “ಎಗ್‌ ರೈಸ್‌’! 

 ಮಂಜು ಮಾಂಡವ್ಯ. ಚಿತ್ರ ನಿರ್ದೇಶಕ

Advertisement

Udayavani is now on Telegram. Click here to join our channel and stay updated with the latest news.

Next