ಕನ್ನಡದಲ್ಲಿ ಈಗಾಗಲೇ ಯಶಸ್ವಿ ನಟರ ಹೆಸರಿನ ಚಿತ್ರಗಳು ಬಂದಿವೆ. ಅವುಗಳು ಯಶಸ್ಸೂ ಕಂಡಿವೆ. “ರಾಜಕುಮಾರ’, “ಅಂಬರೀಶ’, “ವಿಷ್ಣುವರ್ಧನ’ ಈ ಹೆಸರಿನ ಚಿತ್ರಗಳು ಬಂದು ಸುದ್ದಿ ಮಾಡಿರುವುದು ಹೊಸ ವಿಷಯವೇನಲ್ಲ. ಈಗ ನಟರೊಬ್ಬರ ಮೂಲ ಹೆಸರು ಇಟ್ಟುಕೊಂಡು ಚಿತ್ರವೊಂದನ್ನು ಮಾಡಲು ಯೋಚಿಸಲಾಗಿದೆ. ಆ ಹೆಸರು ಬೇರಾವುದೂ ಅಲ್ಲ. ಅದು “ಸಂಪತ್‌ಕುಮಾರ್’.
ಈ ಹೆಸರು ಕೇಳಿದಾಕ್ಷಣ, ಎಲ್ಲರಿಗೂ ಡಾ.ವಿಷ್ಣುವರ್ಧನ್ ಅವರು ನೆನಪಾಗುತ್ತಾರೆ. ಹೌದು, ಇದು ವಿಷ್ಣುವರ್ಧನ್ ಅವರ ಮೂಲ ಹೆಸರು. ಸಂಪತ್‌ಕುಮಾರ್ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಅವರು ಗುರುತಿಸಿಕೊಂಡಿದ್ದು ವಿಷ್ಣುವರ್ಧನ್ ಹೆಸರಲ್ಲಿ. ಈಗಾಗಲೇ “ವಿಷ್ಣುವರ್ಧನ್’ ಹೆಸರಿನ ಚಿತ್ರ ಭರ್ಜರಿ ಸದ್ದು ಮಾಡಿದ್ದು ಗೊತ್ತೇ ಇದೆ. ಈಗ “ಸಂಪತ್‌ಕುಮಾರ್’ ಶೀರ್ಷಿಕೆ ಸುದ್ದಿಯಾಗುತ್ತಿದೆ.
ಅಂದಹಾಗೆ, ನಿರ್ಮಾಪಕ ಕೆ.ಮಂಜು ಅವರು ತಮ್ಮ ಬ್ಯಾನರ್‌ನಲ್ಲಿ “ಸಂಪತ್‌ಕುಮಾರ್’ ಎಂದು ನೋಂದಣಿ ಮಾಡಿಸಿದ್ದಾರೆ. ಕೆ.ಮಂಜು ಅವರು ಡಾ.ವಿಷ್ಣುವರ್ಧನ್ ಅವರ ಪಕ್ಕಾ ಅಭಿಮಾನಿ ಅನ್ನೋದು ಎಲ್ಲರಿಗೂ ಗೊತ್ತಿದೆ. ಈಗ “ಸಂಪತ್‌ಕುಮಾರ್’ಹೆಸರನ್ನು ರಿಜಿಸ್ಟರ್ ಮಾಡಿಸಿದ್ದು, ಮುಂದಿನ ದಿನಗಳಲ್ಲಿ ಚಿತ್ರ ಮಾಡುವ ಯೋಚನೆ ಮಾಡಿದ್ದಾರಂತೆ ಕೆ.ಮಂಜು.
ಈ ಹಿಂದೆ ಕೆ.ಮಂಜು ವಿಷ್ಣುವರ್ಧನ್ ಅವರು ಅಭಿನಯಿಸಿರುವ “ಜಮೀನ್ದಾರ’, “ಹೃದಯವಂತ’,”ನೀನೆಲ್ಲೋ ನಾನಲ್ಲೆ’, “ಮಾತಾಡ್ ಮಾತಾಡು ಮಲ್ಲಿಗೆ’, “ಬಳ್ಳಾರಿ ನಾಗ’ ಚಿತ್ರಗಳನ್ನು ನಿರ್ಮಿಸಿದ್ದಾರೆ. ಇದೀಗ “ಸಂಪತ್‌ಕುಮಾರ್’ ಚಿತ್ರದ ಹೆಸರು ರಿಜಿಸ್ಟರ್ ಮಾಡಿಸಿದ್ದಾರೆ. ಈ ಕುರಿತು “ಉದಯವಾಣಿ’ ಜೊತೆ ಮಾತನಾಡಿದ ಕೆ.ಮಂಜು, “ನನ್ನ ಬ್ಯಾನರ್‌ನಲ್ಲಿ “ಸಂಪತ್‌ಕುಮಾರ್’ ಶೀರ್ಷಿಕೆ ನೋಂದಾಯಿಸಿದ್ದೇನೆ. ಸದ್ಯಕ್ಕೆ ಹೆಸರಷ್ಟೇ ನೋಂದಣಿಯಾಗಿದೆ.
ಮುಂದಿನ ದಿನಗಳಲ್ಲಿ ಆ ಚಿತ್ರವನ್ನು ನಿರ್ಮಾಣ ಮಾಡಲಿದ್ದೇನೆ. ಆ ಚಿತ್ರದಲ್ಲಿ ನನ್ನ ಪುತ್ರ ಶ್ರೇಯಸ್‌ಗಾಗಿ ಮಾಡುವ ಯೋಚನೆ ಇದೆ. ಈಗ “ಪಡ್ಡೆಹುಲಿ’ ಚಿತ್ರದಲ್ಲಿ ಶ್ರೇಯಸ್ ನಟಿಸಿದ್ದು, ಆ ಚಿತ್ರದ ಪಾತ್ರದ ಹೆಸರು ಸಹ ಸಂಪತ್‌ಕುಮಾರ್ ಎಂದು ಇಡಲಾಗಿದೆ. ಆ ಹೆಸರನ್ನೇ ಇಟ್ಟುಕೊಂಡು ಚಿತ್ರ ಮಾಡಲು ಯೋಚಿಸಿದ್ದಾಗಿ ಹೇಳುತ್ತಾರೆ’ ಕೆ.ಮಂಜು. ಸದ್ಯಕ್ಕೆ ಶೀರ್ಷಿಕೆಯಷ್ಟೇ ಪಕ್ಕಾ ಮಾಡಿಕೊಂಡಿದ್ದು, ಚಿತ್ರವನ್ನು ಯಾವಾಗ ಶುರುಮಾಡುತ್ತಾರೆ ಎಂಬುದಕ್ಕೆ ಉತ್ತರವಿಲ್ಲ. “ಪಡ್ಡೆಹುಲಿ’ ಬಿಡುಗಡೆ ಬಳಿಕ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಸಿಗಲಿದೆ.