ಕೊಳಲಿಂದ ಮಧುರ ಗಾನ ಆಲಿಸಬಹುದು. ಆದರೆ ಅದರ ತಯಾರಿಕೆ ಅಷ್ಟು ಸುಲಭದ್ದಲ್ಲ. ಕೊಳಲಲ್ಲಿ ಮೇಲುಸ್ವರ, ಕೆಳಸ್ವರಗಳಿವೆ. ಬಾನ್ಸುರಿ ಕೆಳಸ್ವರದ ಕೊಳಲು. ಸ್ವರಗಳು ಏರಿದಂತೆ ಕೊಳಲು ತೂಕ ಕಳೆದುಕೊಳ್ಳುತ್ತಿರುತ್ತದೆ. ಟಾಪ್ ಶೃತಿಯ (ಎ.ಶೃತಿ ಕೊಳಲು) ಕೊಳಲು ಸಣ್ಣದಾಗಿರುತ್ತದೆ.
ಶಿರಸಿಯಲ್ಲಿ ಮಂಜನಾಥ ವೆಂಕಟರಮಣ ಹೆಗಡೆ ಅಂತ ಇದ್ದಾರೆ. ಇವರ ಕೈಯಲ್ಲಿ ಪಳಗಿದ ಕೊಳಲು ಹರಿಪ್ರಸಾದ್ ಚೌರಾಸಿಯ ಒಳಗೊಂಡಂತೆ ವೆಂಕಟೇಶ್ ಗೋಡಿRಂಡಿ ಸಕುಟುಂಬ ಪರಿವಾರದ ತನಕ ತಲುಪಿದೆ. ಮಂಜುನಾಥ ಹೆಗಡೆ ಅವರು ಮೂಲತಃ ಕೃಷಿಕರು. ಅಡಿಕೆ, ಬಾಳೆ, ಭತ್ತವನ್ನು ಬೆಳೆದುಕೊಂಡು, ಆಗಾಗ ಸಂಗೀತ ಆಲಿಸಿಕೊಂಡು ಮಧ್ಯೆ ಮಧ್ಯೆ ಕೊಳಲು ಮಾಡುವ ಹವ್ಯಾಸಕ್ಕೆ ಬಿದ್ದವರು. ಇದನ್ನು ಕಂಡ ವೆಂಕಟೇಶ್‌ಗೋಡ್ಖೀಂಡಿ ಬೆನ್ನುತಟ್ಟಿದರ ಫಲವಾಗಿ, ಬಿಡುವಿನ ವೇಳೆಯನ್ನು ಪೂರ್ತಿ ಕೊಳಲ ತಯಾರಿಕೆಗೆಂದೇ ಎತ್ತಿಟ್ಟಿದ್ದಾರೆ. ಸುಮಾರು 40 ವರ್ಷಗಳಿಂದ ಕೊಳಲ ತಯಾರಿ ಇವರ ಪಾಲಿಗೆ ಹವ್ಯಾಸ ಮತ್ತು ಅಭ್ಯಾಸ ಆಗಿದೆ.
ಪುರುಸೊತ್ತು ಸಿಕ್ಕಾಗೆಲ್ಲಾ ಶಿರಸಿಯ ಸುತ್ತಮುತ್ತಲಿನ ಕಾಡಿಗೆ ನುಗ್ಗುತ್ತಾರೆ. ಅಲ್ಲಿ ತಂಗಾಳಿಯಲ್ಲಿ ಬೀಸುವ ಬಿದಿರ ಕೊಳಲಿಂದ ಹುಟ್ಟುವ ಶಬ್ದದಲ್ಲಿ ಸಂಗೀತ ಹುಡುಕುತ್ತಾರೆ. “ಬಿದಿರಲ್ಲಿ ಬಿಳಿವಾಟೆ, ಕರೆವಾಟೆ ಅಂತಿದೆ. ಬಿಳಿವಾಟೆ ಕೊಳಲಿಗೆ ಹೇಳಿ ಮಾಡಿಸಿದ ಬಿದಿರು. ಕರೆವಾಟೆ ಕೊಳಲಿಗೆ ಆಗೋಲ್ಲ. ಏಕೆಂದರೆ ಅದು ಸೀಳು ಬಿಡುತ್ತದೆ. ಆದರೆ ನೋಡಲು ಎರಡೂ ಒಂದೇ ರೀತಿ ಇರುತ್ತವೆ. ಹಾಗಾಗಿ, ಯಾವ ಬಿದಿರು ಹೇಗೆ ಅನ್ನೋದನ್ನು ಕಣ್ಣಲ್ಲೇ ಶೃತಿ ಮಾಡಿಕೊಳ್ಳಬೇಕು. ಇದು ಸುಲಭ ಸಾಧ್ಯವಾದ ಕೆಲಸವಲ್ಲ’ ಎನ್ನುತ್ತಾರೆ ಮಂಜುನಾಥ ವೆಂಕಟರಮಣ ಹೆಗಡೆ.
ಸುಲಭದ್ದಲ್ಲ
ಕೊಳಲಿಂದ ಮಧುರ ದನಿಯನ್ನು ಆಲಿಸಬಹುದು. ಆದರೆ ಅದರ ತಯಾರಿಕೆ ಅಷ್ಟು ಸುಲಭದ್ದಲ್ಲ. ಕೊಳಲಲ್ಲಿ ಮೇಲುಸ್ವರ, ಕೆಳಸ್ವರಗಳಿವೆ. ಬಾನ್ಸುರಿ ಕೆಳಸ್ವರದ ಕೊಳಲು. ಸ್ವರಗಳು ಏರಿದಂತೆ ಕೊಳಲು ತೂಕ ಕಳೆದುಕೊಳ್ಳುತ್ತಿರುತ್ತದೆ. ಟಾಪ್ ಶೃತಿಯ (ಎ ಶೃತಿ ಕೊಳಲು) ಕೊಳಲು ಸಣ್ಣದಾಗಿರುತ್ತದೆ. ಅಂದರೆ 11 ಇಂಚು ಉದ್ದ , 4 ಇಂಚು ಅಗಲವಿರುವ ಸಣ್ಣ ಕೊಳಲಿನಿಂದ ಶುರುವಾಗಿ, 36 ರಿಂದ 40 ಇಂಚು ಉದ್ದ, 1.2 ಇಂಚು ಅಗಲದ (ಬಾನ್ಸುರಿ . ಸಿ. ಬೇಸ್ ಶೃತಿ)ಯ ತನಕ 22 ಬಗೆಯ ಕೊಳಲುಗಳು ತಯಾರಾಗುತ್ತವೆ.
ಕೊಳಲನ್ನು ತಯಾರು ಮಾಡುವುದು ಕೇವಲ ಅರ್ಧಗಂಟೆ ಕೆಲಸ. ಇದರ ಹಿಂದಿನ ಸಿದ್ಧತೆ ಇದೆಯಲ್ಲಾ ಅದು ಹೆಚ್ಚಾ ಕಮ್ಮಿ 20 ದಿನಕ್ಕೂ ಮೀರಿದ್ದು. ಬಿದಿರು ತಂದು ವಲೇì ಎಂಬ ದೇಸಿ ಔಷಧದಲ್ಲಿ ಮೂರು ದಿನ ನೆನೆಯಲು ಹಾಕಬೇಕು. ಈ ಔಷಧದಲ್ಲಿ ವಿಷದ ಅಂಶ ಇರದ ಕಾರಣ, ಕೊಳಲು ನುಡಿಸುವವರಿಗೆ ಯಾವುದೇ ತೊಂದರೆ ಆಗೋದಿಲ್ಲ. ಹಾಗೆಯೇ, ಬಿದಿರನ್ನು ಎರಡು, ಮೂರು ತಿಂಗಳು ಸುಡು ಬಿಸಿಲಲ್ಲಿ ಒಣಗಿ ಹಾಕಬೇಕು. ಒಳಗಿರುವ ನೀರಿನ ಅಂಶ ಸಂಪೂರ್ಣವಾಗಿ ಹೋದ ನಂತರ ಕೆಲಸ ಶುರುವಾಗುತ್ತದೆ. ತಂದ ಬಿದಿರಿನಲ್ಲೆಲ್ಲಾ ಕೊಳಲಾಗುವುದಿಲ್ಲ. ಶೇ.10ರಿಂದ 20ರಷ್ಟು ಬಿದಿರು ಕೈ ಬಿಡುವ ಸಾಧ್ಯತೆಗಳೇ ಹೆಚ್ಚು. ಎಷ್ಟೋ ಕೊಳ ಮನೆ (ರಂಧ್ರ)ಗಳನ್ನು ಕೊರೆಯುವಾಗ ಸೀಳು ಬಿಟ್ಟು ಹಾಳಾಗಬಹುದು. ಹಾಗೇನಾದರೂ ಆದರೆ, ತಿಂಗಳಿಡೀ ಮಾಡಿದ ಕೆಲಸ, ಹೊಳೇಲಿ ಹುಣಸೇ ಹಣ್ಣು ತೇಯ್ದಂತೆ ಆಗುತ್ತದೆ ಅಷ್ಟೇ. ಆಗ ಏನೂ ಮಾಡಲು ಸಾಧ್ಯವಿಲ್ಲ. ಅಂದಹಾಗೇ, ಕೊಳಲುಗಳಿಗೆ ರಂದ್ರ (ಮನೆ)ಗಳನ್ನು ಕೊರೆಯುವುದು ಶೃತಿಯ ಆಧಾರದಮೇಲೆ.
ಹೀಗೆ ಕೊಳಲ ಹಿಂದೆ ದೊಡ್ಡ ಕಥನವೇ ಇದೆ.
ಕಟ್ಟೆ