ಅಸೌಖ್ಯದಿಂದ ಬಳಲುತ್ತಿದ್ದ ಅವರು ಕಾಸರಗೋಡಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಬೆಳಗ್ಗೆ 8.30ಕ್ಕೆ ಮೃತ ದೇಹವನ್ನು ಆಸ್ಪತ್ರೆಯಿಂದ ಮನೆಗೆ ತಂದು ಸಾರ್ವಜನಿಕ ದರ್ಶನಕ್ಕೆ ಇಡಲಾಯಿತು. ಸಹಸ್ರಕ್ಕೂ ಅಧಿಕ ಮಂದಿ ಅಭಿಮಾನಿಗಳು, ಪಕ್ಷದ ಕಾರ್ಯಕರ್ತರು ಅಂತಿಮ ನಮನ ಸಲ್ಲಿಸಿದರು. ಅಪರಾಹ್ನ 2.30ಕ್ಕೆ ಮೃತದೇಹವನ್ನು ಉಪ್ಪಳದಲ್ಲಿ ಸಾರ್ವಜನಿಕ ದರ್ಶನಕ್ಕಿರಿಸಿ ಬಳಿಕ ನಾಯಮ್ಮಾರ್ ಮೂಲೆಯ ಮನೆಗೆ ತರಲಾಯಿತು. ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ಸಂಘ-ಸಂಸ್ಥೆಗಳ ಪ್ರತಿನಿಧಿಗಳು, ಅಧಿಕಾರಿಗಳು ಅಂತಿಮ ದರ್ಶನ ಪಡೆದರು.
Advertisement
ವೇತನ ಪಡೆಯದ ಶಾಸಕ: ಶಾಸಕ ಅಬ್ದುಲ್ ರಝಾಕ್ ಸಾಮಾಜಿಕ ಕಳಕಳಿಯಿಂದ ಹೆಸರು ಗಳಿಸಿದ್ದರು. 2 ಬಾರಿ ಶಾಸಕರಾಗಿದ್ದಾಗಲೂ ಸರಕಾರದ ಸಂಬಳವಾಗಲೀ ಇತರ ಅನುಕೂಲಗಳನ್ನಾಗಲೀ ಪಡೆಯದೆ ಸಮಾಜದ ಮೆಚ್ಚುಗೆಗೆ ಪಾತ್ರರಾಗಿದ್ದರು. ಬಡವರ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದ ಅವರು ನೆರವು ಯಾಚಿಸಿ ತನ್ನ ಬಳಿಗೆ ಬಂದ ಯಾರನ್ನೂ ಬರಿಗೈಯಲ್ಲಿ ಕಳುಹಿಸುತ್ತಿರಲಿಲ್ಲ.