Advertisement

ಅಂತಿಮ ಹಂತದ ಕಾಮಗಾರಿ; ಫೆಬ್ರವರಿಯಲ್ಲಿ ಲೋಕಾರ್ಪಣೆ

06:00 AM Oct 06, 2018 | Team Udayavani |

ಕಾಸರಗೋಡು: ಹಲವು ವರ್ಷಗಳ ಬೇಡಿಕೆಯ ತರುವಾಯ ಕಾಮಗಾರಿ ಆರಂಭಗೊಂಡಿರುವ ಮಹತ್ವಾಕಾಂಕ್ಷೆಯ ಮಂಜೇಶ್ವರ ಮೀನುಗಾರಿಕಾ ಬಂದರು ಕಾಮಗಾರಿ ಅಂತಿಮ ಹಂತಕ್ಕೆ ತಲುಪಿದ್ದು, ಮುಂದಿನ ವರ್ಷ ಫೆಬ್ರವರಿ ತಿಂಗಳಲ್ಲಿ ಲೋಕಾರ್ಪಣೆಗೊಳ್ಳುವ ಸಾಧ್ಯತೆಯಿದೆ.

Advertisement

ಕಾಸರಗೋಡು ಜಿಲ್ಲೆಯ ಮೂರನೇ ಮೀನುಗಾರಿಕಾ ಬಂದರು ಆಗಿರುವ ಮಂಜೇಶ್ವರ ಮೀನುಗಾರಿಕಾ ಬಂದರು ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ ಎಂದು ಮೀನುಗಾರಿಕಾ ಬಂದರು ಅಧಿಕಾರಿಗಳು ತಿಳಿಸಿದ್ದಾರೆ. 

ಪ್ರಸ್ತುತ ಉತ್ತರ ಭಾಗದ ಬೋಟು ಲಂಗರು ಹಾಕುವ ಸ್ಥಳ 530 ಮೀಟರ್‌ ನೀಳದಲ್ಲಿದ್ದು, ಅದನ್ನು ಇನ್ನೂ 200 ಮೀಟರ್‌ನಷ್ಟು ವಿಸ್ತರಿಸಲು ತೀರ್ಮಾನಿಸಲಾಗಿದೆ. ಕಾಸರಗೋಡು ಪ್ಯಾಕೇಜ್‌ನಡಿ 14.7 ಕೋಟಿ ರೂ. ಯ ಆಡಳಿತಾನುಮತಿ ಲಭಿಸಿದೆ. ಇದಕ್ಕಾಗಿ ಕೆಲವೇ ದಿನಗಳಲ್ಲಿ ಟೆಂಡರ್‌ ಪ್ರಕ್ರಿಯೆ ಆರಂಭಿಸಲಾಗುವುದು. ಬಂದರಿಗೆ ಹೊಂದಿಕೊಂಡು ನಿರ್ಮಾಣಗೊಳ್ಳಲಿರುವ ಅಳಿವೆಬಾಗಿಲು ಸೇತುವೆಗೆ 16.7 ಕೋಟಿ ರೂ. ವೆಚ್ಚ ಅಂದಾಜಿಸಲಾಗಿದ್ದು, ಇದಕ್ಕೆ ಆಡಳಿತಾನುಮತಿ ಲಭಿಸಿದೆ.
 
ಈ ಮೊತ್ತದ ಅಂದಾಜು ಪಟ್ಟಿಯನ್ನು ಕಾಸರಗೋಡು ಅಭಿವೃದ್ಧಿ ಯೋಜನೆಯ ತಾಂತ್ರಿಕ ಅನುಮತಿಗಾಗಿ ಸಲ್ಲಿಸಲಾಗಿದ್ದು, ವಿಳಂಬವಿಲ್ಲದೆ ಈ ಮೊತ್ತ  ಮಂಜೂರುಗೊಳ್ಳಲಿದೆ ಎಂದು ನಿರೀಕ್ಷಿಸಲಾಗಿದೆ. ಉತ್ತರ ಭಾಗದ ಬೋಟು ಲಂಗರು ಹಾಕುವ ಸ್ಥಳ 530 ಮೀಟರ್‌, ದಕ್ಷಿಣ ಭಾಗದ ಬೋಟು ಲಂಗರು ಹಾಕುವ ಸ್ಥಳ 490 ಮೀಟರ್‌, ವಾರ್ಫ್‌ 100 ಮೀಟರ್‌ ವಿಸ್ತರಿಸಬಹುದಾಗಿದೆ. ಹರಾಜು ಸ್ಥಳ, ಲೋಡಿಂಗ್‌ ಏರಿಯಾ, ರಿಕ್ಲಮೇಶನ್‌ ಡ್ರಜ್ಜಿಂಗ್‌ 71000 ಕ್ಯೂಬಿಕ್‌ ಅಡಿ, ಕ್ಯಾಂಟೀನ್‌, ನೆಟ್‌ ವೆಂಡಿಂಗ್‌ ಶೆಡ್‌, ವರ್ಕ್‌ಶಾಪ್‌, ಗೇರ್‌ ಶೆಡ್‌, ಅಂಗಡಿ ಕೊಠಡಿಗಳು, ವಿಶ್ರಾಂತಿ ಕೇಂದ್ರ, ಶೌಚಾಲಯಗಳು, ಗ್ರೀನ್‌ ಬೆಲ್ಟ್ ಪಾರ್ಕಿಂಗ್‌ ಏರಿಯಾ ಕಾಮಗಾರಿ ಪೂರ್ಣಗೊಂಡಿದೆ. ಆವರಣ ಗೋಡೆ ನಿರ್ಮಾಣ ಮತ್ತು ಅಪ್ರೋಚ್‌ ರಸ್ತೆಯ ಕಾಮಗಾರಿ ಪ್ರಗತಿ ಹಂತದಲ್ಲಿದೆ.2014 ಫೆಬ್ರವರಿ 20ರಂದು ಮುಖ್ಯಮಂತ್ರಿ ಯಾಗಿದ್ದ ಉಮ್ಮನ್‌ಚಾಂಡಿ ಮಂಜೇಶ್ವರ ಮೀನುಗಾರಿಕಾ ಬಂದರು ನಿರ್ಮಾಣ ಕಾಮಗಾರಿಯನ್ನು ಉದ್ಘಾಟಿಸಿದ್ದರು.
 
79.8 ಕೋ.ರೂ. ನಿರ್ಮಾಣ ವೆಚ್ಚ
48.8 ಕೋಟಿ ರೂ. ಮೀನುಗಾರಿಕೆ ಬಂದರ್‌ನ ನಿರ್ಮಾಣ ವೆಚ್ಚವಾಗಿದೆ. ಅಳಿವೆಬಾಗಿಲು ಸೇತುವೆ, ಬೋಟು ಲಂಗರು ಹಾಕುವ ಸ್ಥಳದ ವಿಸ್ತರಣೆ ಸಹಿತ ಒಟು 79.8 ಕೋಟಿ ರೂ. ನಿರ್ಮಾಣ ವೆಚ್ಚ ತಗಲಲಿದೆ. ಶುದ್ಧ ನೀರು ವಿತರಣೆ, ಗೇಟ್‌, ಗೇಟ್‌ ಹೌಸ್‌, ವಿದ್ಯುದೀಕರಣ ಮೊದಲಾದವುಗಳ ಟೆಂಡರ್‌ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ನಿರ್ಮಾಣ ಕಾಮಗಾರಿ ಆರಂಭಿಸಲಾಗುವುದು. ಪ್ರವಾಹ ಸಂದರ್ಭದಲ್ಲಿ ಮೀನುಗಾರಿಕಾ ಬಂದರಿನಲ್ಲಿ ಸಣ್ಣ ಪ್ರಮಾಣದಲ್ಲಿ ಹೂಳು ತುಂಬಿಕೊಂಡಿದ್ದು ಅದನ್ನು ತೆರವುಗೊಳಿಸಲು ಒಂದೂವರೆ ಕೋಟಿ ರೂ. ಅಂದಾಜು ಪಟ್ಟಿ ತಯಾರಿಸಿ ಸಲ್ಲಿಸಲಾಗಿದೆ.

300 ದೋಣಿಗಳಿಗೆ ಮೀನುಗಾರಿಕೆ ಸೌಕರ್ಯ
ಮಂಜೇಶ್ವರ ಮೀನುಗಾರಿಕಾ ಬಂದರು ನಿರ್ಮಾಣ ಯೋಜನಾ ವೆಚ್ಚದ ಶೇ. 75 ರಷ್ಟು ಕೇಂದ್ರ ನಿಧಿಯಿಂದ ಹಾಗೂ ಶೇ. 25ರಷ್ಟನ್ನು ರಾಜ್ಯ ಸರಕಾರದ ಅನುದಾನದಿಂದ ವಿನಿಯೋಗಿಸಲಾಗುವುದು. ಮೀನುಗಾರಿಕಾ ಬಂದರು ಕಾರ್ಯಾಚರಿಸಲು ಆರಂಭಿಸು ವುದರೊಂದಿಗೆ 4,000 ಕಾರ್ಮಿಕರಿಗೆ ನೇರವಾಗಿ ಉದ್ಯೋಗ ಲಭಿಸಲಿದೆ. 300 ಬೋಟ್‌ಗಳಿಗೆ ಮೀನುಗಾರಿಕಾ ಸೌಕರ್ಯ ಲಭಿಸಲಿದೆ. ಕಾಂಞಂಗಾಡ್‌ನಿಂದ ಮಂಗಳೂರಿನ ಪಣಂಬೂರಿನ ವರೆಗಿನ ಕರಾವಳಿ ವಲಯದ ಮೀನು ಕಾರ್ಮಿಕರು ಈ ಬಂದರಿನ ಪ್ರಯೋಜನ ಪಡೆಯಲಿದ್ದಾರೆ. ಪುಣೆ ಕೇಂದ್ರವಾಗಿ ಕಾರ್ಯಾಚರಿಸುತ್ತಿರುವ ಸಿಡಬ್ಲೂÂಸಿಆರ್‌ಎಸ್‌ ಬಂದರು ನಿರ್ಮಾಣ ಸಂಬಂಧ ಅಧ್ಯಯನ ನಡೆಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next