Advertisement

ಈ ನಕ್ಷತ್ರಾಕಾರದ ಕೋಟೆ ನೀವು ನೋಡಿದ್ದೀರಾ ? ಇಲ್ಲವಾದರೆ ಒಮ್ಮೆ ಭೇಟಿ ನೀಡಿ…

04:12 PM Nov 05, 2022 | ಸುಧೀರ್ |

ಕೋಟೆಗಳಿಗೆ ಹೆಸರುವಾಸಿಯೇ ನಮ್ಮ ಭಾರತ… ಹಿಂದಿನ ಕಾಲದಲ್ಲಿ ರಾಜರುಗಳು ತಮ್ಮ ಸಾಮ್ರಾಜ್ಯವನ್ನು ವಿಸ್ತರಿಸಲು ಹಾಗೂ ವೈರಿಪಡೆಗಳಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಕೋಟೆಗಳನ್ನು ನಿರ್ಮಾಣ ಮಾಡಿದ್ದಾರೆ. ಅದೇ ರೀತಿ ನಮ್ಮ ಕರ್ನಾಟಕದಲ್ಲೂ ಹಲವಾರು ಕೋಟೆಗಳು ಕಾಣಸಿಗುತ್ತವೆ ಅದರಲ್ಲಿ ಇಂದು ನಾವು ಹಾಸನ ಜಿಲ್ಲೆಯ ಸಕಲೇಶಪುರದಲ್ಲಿರುವ ಮಂಜರಾಬಾದ್ ಕೋಟೆಯ ಬಗ್ಗೆ ತಿಳಿದುಕೊಳ್ಳೋಣ…

Advertisement

ಸಕಲೇಶಪುರ ಎಂದೊಡನೆ ಎಲ್ಲರ ಮನಸ್ಸಿನಲ್ಲಿ ಬರುವುದು ಮಳೆಗಾಲ, ಅಲ್ಲಿನ ತಂಪಾದ ವಾತಾವರಣ, ಬೆಟ್ಟ ಗುಡ್ಡಗಳಲ್ಲಿ ಹಬ್ಬಿಕೊಂಡ ಕಾಫಿ ತೋಟ, ಹಚ್ಚ ಹಸುರಿನ ಗುಡ್ಡ, ಇಬ್ಬನಿಯಿಂದ ಆವರಿಸಿದ ರಸ್ತೆಗಳು, ಇವೆಲ್ಲದರ ಸೌಂದರ್ಯ ಸವಿಯಬೇಕೆಂದರೆ ಮಳೆಗಾಲದ ಸಮಯದಲ್ಲಿ ಸಕಲೇಶಪುರಕ್ಕೆ ಭೇಟಿ ನೀಡಲೇಬೇಕು.

ಅದೆಲ್ಲಾ ಒಂದು ಭಾಗವಾದರೆ ಇನ್ನು ಮಳೆಗಾಲ ಮುಗಿದ ಕೂಡಲೇ ಸಕಲೇಶಪುರದಲ್ಲಿರುವ ಮಂಜರಾಬಾದ್ ಕೋಟೆಗೆ ಭೇಟಿ ನೀಡಬೇಕು, ಕಾರಣ ಇಷ್ಟೇ ಬೇಸಿಗೆ ಕಾಲದಲ್ಲಿ ಕೋಟೆಗೆ ಭೇಟಿ ನೀಡಿದರೆ ಕೆಂಪು ಬಣ್ಣದಲ್ಲಿ ಕಾಣುವ ಕೋಟೆಯ ಕಲ್ಲುಗಳು, ಮಳೆಗಾಲದಲ್ಲಿ ಕೆಂಪು ಕಲ್ಲುಗಳು ಪಾಚಿ ಹಿಡಿದು ಹಚ್ಚ ಹಸುರಿನಿಂದ ಕಂಗೊಳಿಸುತ್ತದೆ, ಜೊತೆಗೆ ಕೋಟೆಯ ಸೌಂದರ್ಯವೂ ಇಮ್ಮಡಿಗೊಳ್ಳುವುದರಲ್ಲಿ ಎರಡು ಮಾತಿಲ್ಲ..

ಸಕಲೇಶಪುರದಿಂದ ಸುಮಾರು ಎಂಟು ಕಿಲೋಮೀಟರ್ ದೂರ ಶಿರಾಡಿ ಘಾಟಿ ಮಾರ್ಗವಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸಿದರೆ ಮಂಜರಾಬಾದ್ ಕೋಟೆ ಕಾಣ ಸಿಗುತ್ತದೆ. ಹೆದ್ದಾರಿ ಬದಿಯಲ್ಲಿ ವಾಹನ ನಿಲ್ಲಿಸಿ ಸುಮಾರು 150 ಮೀಟರ್ ನಡೆದರೆ ಕೋಟೆಗೆ ಹತ್ತಲು ಮೆಟ್ಟಿಲುಗಳು ಸಿಗುತ್ತದೆ ಅಲ್ಲಿಂದ ಸುಮಾರು 250 ಮೆಟ್ಟಿಲುಗಳನ್ನು ಹತ್ತಿ ಸಾಗಿದರೆ ಟಿಪ್ಪು ನಿರ್ಮಿಸಿದ ನಕ್ಷತ್ರಾಕಾರದ ಕೋಟೆಯ ದ್ವಾರ ಸಿಗುತ್ತದೆ. ಇಪ್ಪತ್ತರಿಂದ ಮೂವತ್ತು ಅಡಿಗಳಷ್ಟು ಎತ್ತರದ ಗೋಡೆಗಳಿಂದ ನಿರ್ಮಿಸಲಾದ ಕೋಟೆ ನೋಡಲು ನಯನ ಮನೋಹರವಾಗಿದೆ.

Advertisement

ಟಿಪ್ಪು ನಿರ್ಮಿಸಿದ ಕೋಟೆ
1792ರಲ್ಲಿ ಟಿಪ್ಪು ಈ ಕೋಟೆಯನ್ನು ನಿರ್ಮಾಣ ಮಾಡಿದ್ದನಂತೆ, ಈ ಕೋಟೆಯನ್ನು ಪೂರ್ಣಗೊಳಿಸಲು ಸುಮಾರು ಎಂಟು ವರ್ಷಗಳನ್ನೇ ತೆಗೆದುಕೊಂಡಿದ್ದಲ್ಲದೆ, ಈ ಕೋಟೆಯಲ್ಲಿ ಯುದ್ಧಕ್ಕೆ ಬೇಕಾದ ಮದ್ದುಗುಂಡುಗಳನ್ನು ಸಂಗ್ರಹಿಸಿ ಇಡಲಾಗಿತ್ತಂತೆ, ಅಲ್ಲದೆ ಬ್ರಿಟಿಷರ ಸೇನೆಯ ಮೇಲೆ ನಿಗಾ ಇಡಲು ಈ ಕೋಟೆಯನ್ನು ಕಟ್ಟಿದ್ದನೆಂದೂ ಹೇಳಲಾಗುತ್ತಿದೆ.

ನಕ್ಷತ್ರಾಕಾರದ ಕೋಟೆ
ಈ ಕೋಟೆಯು ಅಷ್ಟ ಭುಜಗಳನ್ನು ಹೊಂದಿದ್ದು ನಕ್ಷತ್ರಾಕಾರದಲ್ಲಿ ನಿರ್ಮಾಣ ಮಾಡಲಾಗಿದೆ, ಪ್ರತಿ ಒಂದೊಂದು ಬದಿಯಿಂದಲೂ ನಿಂತು ನೋಡುವಾಗ ಕೋಟೆಯ ಸುತ್ತಲಿನ ಪ್ರದೇಶಗಳು ಸಮರ್ಪಕವಾಗಿ ಕಾಣುವಂತೆ ನಿರ್ಮಾಣ ಮಾಡಲಾಗಿದೆ ಅಲ್ಲದೆ ಈ ಕೋಟೆ ಸುಮಾರು ಐದು ಎಕರೆ ವಿಸ್ತಾರವಾದ ಪ್ರದೇಶದಲ್ಲಿ ನಿರ್ಮಾಣಗೊಂಡಿದೆ.

ನಿಗೂಢ ಸುರಂಗ ಮಾರ್ಗ 
ಈ ಕೋಟೆಯ ಒಳಗೆ ಎರಡು ಸುರಂಗ ಮಾರ್ಗಗಳಿದ್ದು ಅದರಲ್ಲಿ ಒಂದು ಶ್ರೀರಂಗಪಟ್ಟಣಕ್ಕೆ ಸಂಪರ್ಕ ಹೊಂದಿತ್ತು ಎನ್ನಲಾಗಿದೆ, ಇದೇ ಸುರಂಗ ಮಾರ್ಗದ ಮೂಲಕ ಸೇನೆ ಸಂಚಾರ ಮಾಡುತ್ತಿತ್ತು ಎನ್ನಲಾಗಿದೆ. ಕೋಟೆಯ ನಡುವೆ ಆಳವಾದ ಬಾವಿಯೊಂದಿದ್ದು ಅದರ ಪಕ್ಕದಲ್ಲೇ ಎರಡು ನೆಲಮಾಳಿಗೆಗಳನ್ನು ನಿರ್ಮಾಣ ಮಾಡಲಾಗಿದೆ, ಇದು ಬೇಸಿಗೆಯ ಸಮಯದಲ್ಲಿ ವಾತಾವರಣ ತಂಪಾಗಿರಿಸಲು ರಚನೆ ಮಾಡಲಾಗಿದೆಯಂತೆ, ಅದರ ಪಕ್ಕದಲ್ಲೇ ಎರಡು ಕೊಠಡಿಗಳನ್ನು ನಿರ್ಮಿಸಲಾಗಿದ್ದು ಇದರಲ್ಲಿ ಯುದ್ಧಕ್ಕೆ ಬೇಕಾದ ಮದ್ದು ಗುಂಡುಗಳನ್ನು ಸಂಗ್ರಹಿಸಿ ಇಡಲಾಗುತ್ತಿತ್ತಂತೆ.

ಕೋಟೆಯ ಸೌಂದರ್ಯಕ್ಕೆ ಧಕ್ಕೆ ತರದಿರಿ :
ಈ ಕೋಟೆಯ ವೀಕ್ಷಣೆಗೆ ಬರುವವರು ಕೋಟೆಯ ಸೌಂದರ್ಯಕ್ಕೆ ಧಕ್ಕೆ ಬರದಂತೆ ನೋಡಿಕೊಳ್ಳುವುದು ಕೂಡಾ ಪ್ರವಾಸಿಗರ ಜವಾಬ್ದಾರಿ, ಕೋಟೆಯ ಗೋಡೆಗಳ ಮೇಲೆ ವಿಚಿತ್ರ ಬರಹಗಳನ್ನು ಬರೆಯುವುದು, ತಿಂಡಿ ತಿನಿಸುಗಳ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಎಲ್ಲೆಂದರಲ್ಲಿ ಎಸೆಯುವುದು. ಕೋಟೆಯ ಗೋಡೆಗಳ ಮೇಲೆ ಹತ್ತಿ ಅಪಾಯ ತಂದೊಡ್ಡುವ ರೀತಿಯಲ್ಲಿ ಫೋಟೋ ತೆಗೆಯುವುದು, ಒಟ್ಟಾರೆಯಾಗಿ ಕೋಟೆಯ ಸೌಂದರ್ಯಕ್ಕೆ ಧಕ್ಕೆ ಬಾರದ ರೀತಿಯಲ್ಲಿ ಕೋಟೆಯನ್ನು ವೀಕ್ಷಣೆ ಮಾಡಿದರೆ ತುಂಬಾ ಉತ್ತಮ.

ಭೇಟಿ ನೀಡುವ ಸಮಯ :
ಮಂಜರಾಬಾದ್ ಕೋಟೆಗೆ ಪ್ರತಿದಿನ ಬೆಳಿಗ್ಗೆ 8 ಗಂಟೆಯಿಂದ ಸಾಯಂಕಾಲ 6 ಗಂಟೆಯವರೆಗೆ ವೀಕ್ಷಿಸಲು ಅವಕಾಶವಿದೆ, ಇಲ್ಲಿ ಯಾವುದೇ ಪ್ರವೇಶ ಶುಲ್ಕವಿಲ್ಲ.

* ಸುಧೀರ್ ಆಚಾರ್ಯ

Advertisement

Udayavani is now on Telegram. Click here to join our channel and stay updated with the latest news.

Next