ನವದೆಹಲಿ: ದೆಹಲಿಯ ಹೊಸ ಅಬಕಾರಿ ನೀತಿ ಪ್ರಕರಣದಲ್ಲಿ ಅಕ್ರಮ ಎಸಗಿದ ಆರೋಪದಲ್ಲಿ ಜಾರಿ ನಿರ್ದೇಶನಾಲಯದಿಂದ ವಿಚಾರಣೆ ಎದುರಿಸುತ್ತಿರುವ ದೆಹಲಿಯ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾಗೆ ದೆಹಲಿಯ ರೂಸ್ ಅವೆನ್ಯೂ ನ್ಯಾಯಾಲಯವು ಜೂನ್ 2 ರವರೆಗೆ ನ್ಯಾಯಾಂಗ ಬಂಧನ ವಿಸ್ತರಣೆ ಮಾಡಿದೆ.
ಸರ್ಕಾರದ ಅಬಕಾರಿ ನೀತಿಯ ರಚನೆ ಮತ್ತು ಅನುಷ್ಠಾನದಲ್ಲಿನ ಅಕ್ರಮಗಳು ನಡೆದಿದ್ದು, ಇದಕ್ಕೆ ಸಂಬಂಧಿಸಿದ ಪ್ರಕರಣದ ತನಿಖೆಯಲ್ಲಿ ಸಿಸೋಡಿಯಾ ಅವರನ್ನು ಸಿಬಿಐ ಮತ್ತು ಇಡಿ ಬಂಧಿಸಿದೆ.
ದೆಹಲಿ ಹೈಕೋರ್ಟ್ ಸಿಸೋಡಿಯಾ ಅವರ ಮಧ್ಯಂತರ ಜಾಮೀನು ಅರ್ಜಿಗಳ ಆದೇಶವನ್ನು ಕಾಯ್ದಿರಿಸಿದೆ. ಪತ್ನಿಯ ಅನಾರೋಗ್ಯದ ಹಿನ್ನೆಲೆಯಲ್ಲಿ ಮಧ್ಯಂತರ ಜಾಮೀನು ನೀಡುವಂತೆ ಕೋರಿದ್ದರು.
ಸಿಸೋಡಿಯಾ ಮತ್ತು ಕೇಂದ್ರೀಯ ತನಿಖಾ ದಳ (ಸಿಬಿಐ) ಪರ ವಕೀಲರ ವಾದವನ್ನು ಆಲಿಸಿದ ನ್ಯಾಯಮೂರ್ತಿ ದಿನೇಶ್ ಕುಮಾರ್ ಶರ್ಮಾ ಅವರು ಆದೇಶವನ್ನು ಕಾಯ್ದಿರಿಸಿದ್ದಾರೆ.
ಅಬಕಾರಿ ನೀತಿ ಪ್ರಕರಣ ಸಂಬಂಧಿಸಿದಂತೆ ಮನೀಶ್ ಸಿಸೋಡಿಯಾ ಅವರ ಜಾಮೀನು ಅರ್ಜಿಯನ್ನು ದೆಹಲಿ ನ್ಯಾಯಾಲಯ ವಜಾಗೊಳಿಸಿತ್ತು.
ರದ್ದಾದ ದೆಹಲಿ ಅಬಕಾರಿ ನೀತಿ 2021-22 ರ ರಚನೆ ಮತ್ತು ಕಾರ್ಯಗತಗೊಳಿಸುವಿಕೆಯಲ್ಲಿ ಭ್ರಷ್ಟಾಚಾರದ ಆರೋಪದ ಮೇಲೆ ಮತ್ತು ಹಾಗೆ ಗಳಿಸಿದ ಹಣವನ್ನು ಲಾಂಡರಿಂಗ್ ಮಾಡಿದ ಆರೋಪದ ಮೇಲೆ ಸಿಬಿಐ ಮತ್ತು ಇಡಿ ಸಿಸೋಡಿಯಾ ಅವರನ್ನು ಬಂಧಿಸಿದ್ದವು.