ಟಾಸ್ ಗೆದ್ದ ಭಾರತ ಮೊದಲು ಫೀಲ್ಡಿಂಗ್ ಆರಿಸಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ತಂಡ ನಿಗದಿತ 19 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 152 ರನ್ ಗಳಿಸಿ ಭಾರತಕ್ಕೆ 153 ರನ್ ಗುರಿ ನೀಡಿತು. ಭಾರತ ತಂಡ 17.3 ಓವರ್‌ಗಳಲ್ಲಿ ಕೇವಲ 4 ವಿಕೆಟ್ ಕಳೆದುಕೊಂಡು 153 ರನ್ ಗಳಿಸುವ ಮೂಲಕ ಗೆಲುವಿನ ನಗೆ ಬೀರಿತು.
Advertisement
ಮಳೆಯಿಂದಾಗಿ 19 ಓವರ್‌ಗಳಿಗೆ ಸೀಮಿತಗೊಂಡ ಪಂದ್ಯದಲ್ಲಿ ಶ್ರೀಲಂಕಾ 9 ವಿಕೆಟಿಗೆ 152 ರನ್ ಗಳಿಸಿ ಭಾರತಕ್ಕೆ ಸವಾಲೊಡಿತ್ತು. ಸಂಜೆ ಸುರಿದ ಮಳೆಯಿಂದಾಗಿ ಪಂದ್ಯದ ಆರಂಭ 95 ನಿಮಿಷಗಳಷ್ಟು ವಿಳಂಬಗೊಂಡಿತ್ತು. ಟಾಸ್ ಗೆದ್ದ ರೋಹಿತ್ ಶರ್ಮ ಲಂಕೆಯನ್ನು ಮೊದಲು ಬ್ಯಾಟಿಂಗಿಗೆ ಇಳಿಸಿದರು. ದನುಷ್ಕ ಗುಣತಿಲಕ-ಕುಸಲ್ ಮೆಂಡಿಸ್ ಜೋಡಿಯ ಆಟ ಅಬ್ಬರದಿಂದಲೇ ಕೂಡಿತ್ತು. ಮೊದಲ ವಿಕೆಟಿಗೆ ಕೇವಲ 2.1 ಓವರ್‌ಗಳಲ್ಲಿ 25 ರನ್ ಒಟ್ಟುಗೂಡಿತು. ಆಗ 8 ಎಸೆತಗಳಿಂದ 17 ರನ್ ಬಾರಿಸಿದ ಗುಣತಿಲಕ ಅವರನ್ನು ಕೆಡವಿದ ಶಾರ್ದೂಲ್ ಠಾಕೂರ್ ಭಾರತಕ್ಕೆ ಮೊದಲ ಯಶಸ್ಸು ತಂದಿತ್ತರು. 9 ರನ್ ಅಂತರದಲ್ಲಿ ವಾಷಿಂಗ್ಟನ್ ಸುಂದರ್ ದೊಡ್ಡ ಬೇಟೆಯಾಡಿದರು. ಕುಸಲ್ ಪೆರೆರ ಅವರನ್ನು ಮೂರೇ ರನ್ನಿಗೆ ಬೌಲ್ಡ್ ಮಾಡಿದರು. ಆದರೆ ಆರಂಭಕಾರ ಕುಸಲ್ ಮೆಂಡಿಸ್ ಇನ್ನೊಂದು ತುದಿಯಲ್ಲಿ ಸಿಡಿಯುತ್ತಲೇ ಇದ್ದರು. ಅವರಿಗೆ ಉಪುಲ್ ತರಂಗ ಉತ್ತಮ ಬೆಂಬಲವಿತ್ತರು. 3ನೇ ವಿಕೆಟಿಗೆ 62 ರನ್ ಹರಿದು ಬಂತು. 55 ರನ್ ಮಾಡಿದ ಕುಸಲ್ ಮೆಂಡಿಸ್ ಲಂಕಾ ಸರದಿಯ ಸರ್ವಾಧಿಕ ಸ್ಕೋರರ್ (38 ಎಸೆತ, 3 ಬೌಂಡರಿ, 3 ಸಿಕ್ಸರ್).