ಹೊಸದಿಲ್ಲಿ: ವಿದರ್ಭ ವಿರುದ್ಧದ ಸೆಮಿ ಫೈನಲ್ ಪಂದ್ಯದಲ್ಲಿ ಕೊನೆಯ ಓವರ್ ನಲ್ಲಿ ರೋಚಕ ಜಯ ಸಾಧಿಸಿದ ಮನೀಶ್ ಪಾಂಡೆ ನೇತೃತ್ವದ ಕರ್ನಾಟಕ ತಂಡ ಫೈನಲ್ ಪ್ರವೇಶಿಸಿದೆ.
ದಿಲ್ಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಕರ್ನಾಟಕ ತಂಡವು ನಾಲ್ಕು ರನ್ ಗಳ ರೋಚಕ ಜಯ ಸಾಧಿಸಿತು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ಕರ್ನಾಟಕ ತಂಡ 20 ಓವರ್ ನಲ್ಲಿ ಏಳು ವಿಕೆಟ್ ನಷ್ಟಕ್ಕೆ 176 ರನ್ ಕಲೆಹಾಕಿದರೆ, ಗುರಿ ಬೆನ್ನತ್ತಿದ್ದ ವಿದರ್ಭ ಆರು ವಿಕೆಟ್ ಕಳೆದುಕೊಂಡು 172 ರನ್ ಗಳಿಸಲು ಮಾತ್ರ ಶಕ್ತವಾಯಿತು.
ಕರ್ನಾಟಕ ತಂಡಕ್ಕೆ ರೋಹನ್ ಕದಂ ಮತ್ತು ಭಡ್ತಿ ಪಡೆದು ಬಂದ ಮನೀಷ್ ಪಾಂಡೆ ಉತ್ತಮ ಆರಂಭ ಒದಗಿಸಿದರು. ಇವರಿಬ್ಬರು ಮೊದಲ ವಿಕೆಟ್ ಗೆ 132 ರನ್ ಕಲೆ ಹಾಕಿದರು. ರೋಹನ್ 56 ಎಸೆತಗಳಲ್ಲಿ 87 ರನ್ ಗಳಿಸಿದರೆ, ನಾಯಕ ಪಾಂಡೆ 54 ರನ್ ಗಳಿಸಿದರು. ಅಭಿನವ್ ಮನೋಹರ್ 27 ರನ್ ಕೊಡುಗೆ ನೀಡಿದರು.
ಇದನ್ನೂ ಓದಿ:ರಾಕಿ ಭಾಯ್ ಗೆ ಟಕ್ಕರ್ ನೀಡಲು ಬಂದ ಅಮಿರ್: ಒಂದೇ ದಿನ ಕೆಜಿಎಫ್2- ಲಾಲ್ ಸಿಂಗ್ ಚಡ್ಡಾ ರಿಲೀಸ್
ವಿದರ್ಭಕ್ಕೂ ಅಥರ್ವ ಮತ್ತು ಗಣೇಶ್ ಸತೀಶ್ 43 ರನ್ ಗಳ ಆರಂಭ ನೀಡಿದರು. ಅಥರ್ವ 32 ರನ್ ಗಳಿಸಿದರೆ, ಗಣೇಶ್ ಸತೀಶ್ 31 ರನ್ ಗಳಿಸಿದರು. ಶುಭಮ್ ದುಬೆ 24, ಕೊನೆಯಲ್ಲಿ ಅಪೂರ್ವ ವಾಂಖಡೆ 27 ಮತ್ತು ಅಕ್ಷಯ್ ಕರ್ನೆವಾರ್ 22 ರನ್ ಗಳಿಸಿದರು.
ಕೊನೆಯ ಓವರ್ ನಲ್ಲಿ 14 ರನ್ ಅವಶ್ಯಕತೆಯಿತ್ತು. ವಿದ್ಯಾಧರ್ ಪಾಟಿಲ್ ರ ಮೊದಲ ಎಸೆತದಲ್ಲಿ ಅಕ್ಷಯ್ ಔಟಾಗಿದ್ದು, ಕರ್ನಾಟಕ ತಂಡಕ್ಕೆ ವರವಾಯಿತು. ವಿದರ್ಭ ತಂಡ ಕೊನೆಗೆ 172 ರನ್ ಗಳಿಸಲು ಮಾತ್ರ ಶಕ್ತವಾಯಿತು.
ಸೋಮವಾರ ಕರ್ನಾಟಕ ಮತ್ತು ತಮಿಳುನಾಡು ತಂಡಗಳ ನಡುವೆ ಫೈನಲ್ ಪಂದ್ಯ ನಡೆಯಲಿದೆ.