ಇಂಫಾಲ: ಮಣಿಪುರದ ಇಂಫಾಲ ಪಶ್ಚಿಮ ಜಿಲ್ಲೆಯಲ್ಲಿ ಗುರುವಾರ ಶಾಲೆಯೊಂದರ ಹೊರಗೆ ಅಪರಿಚಿತ ಬಂದೂಕುಧಾರಿಗಳು ಮಹಿಳೆಯ ಮೇಲೆ ಗುಂಡು ಹಾರಿಸಿ, ಹತ್ಯೆಗೈದಿದ್ದಾರೆ.
ಲ್ಯಾಂಫೆಲ್ ಪೊಲೀಸ್ ಠಾಣೆ ವ್ಯಾಪ್ತಿಯ ಕ್ವಾಕೀತೇಲ್ ಮಾಯೈ ಕೊಯಿಬಿ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಎರಡು ತಿಂಗಳ ಅನಂತರ 1ರಿಂದ 8ನೇ ತರಗತಿಯ ಶಾಲೆಗಳು ಪುನರಾರಂಭಗೊಂಡ ಮಾರನೆಯ ದಿನವೇ ಈ ಘಟನೆ ಜರಗಿದೆ.
“ಯಾವುದೋ ಕೆಲಸದ ನಿಮಿತ್ತ ಮಹಿಳೆಯು ಶಾಲೆಯ ಸಮೀಪ ಬಂದಿದ್ದರು. ಈ ವೇಳೆ ಘಟನೆ ಜರಗಿದೆ. ಶಾಲೆಗೂ ಮಹಿಳೆಗೂ ಯಾವುದೇ ಸಂಬಂಧವಿಲ್ಲ,” ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನೊಂದೆಡೆ ಜಿಲ್ಲೆಯ ಕಾಂಗ್ಪೋಕ್ಪಿ ಜಿಲ್ಲೆಯ ಫೈಲೆಂಗ್ ಗ್ರಾಮದಲ್ಲಿ ಶಸ್ತ್ರಸಜ್ಜಿತ ಉಗ್ರರು ಗ್ರಾಮಸ್ಥರ ಮೇಲೆ ದಾಳಿ ನಡೆಸಲು ಯತ್ನಿಸಿದರು. ಈ ವೇಳೆ ಭದ್ರತಾ ಪಡೆಗಳು ಮತ್ತು ಉಗ್ರರ ನಡುವೆ ಗುಂಡಿನ ಚಕಮಕಿ ನಡೆಯಿತು. ಸಮೀಪದಲ್ಲಿ ಇದ್ದ ಮತ್ತಷ್ಟು ಭದ್ರತಾ ಸಿಬಂದಿ ಘಟನಾ ಸ್ಥಳಕ್ಕೆ ಧಾವಿಸಲು ಮುಂದಾದರು. ಆದರೆ ಭದ್ರತಾ ಪಡೆಗಳು ಕಾರ್ಯಾಚರಣೆ ಸ್ಥಳ ವನ್ನು ತಲುಪದಂತೆ ಸುಮಾರು 1,000- 1,500 ಮಹಿಳೆಯರು ರಸ್ತೆ ತಡೆ ನಡೆಸಿ ದರು. ಆದರೂ ಸ್ಥಳದಲ್ಲಿ ನಿಯೋಜಿತರಾಗಿದ್ದ ಅಸ್ಸಾಂ ರೈಫಲ್ಸ್ ಸಿಬಂದಿ ಪರಿಸ್ಥಿತಿಯನ್ನು ಹತೋಟಿಗೆ ತಂದರು ಎಂದು ಮೂಲಗಳು ತಿಳಿಸಿವೆ.
ಸಭೆ ಬಹಿಷ್ಕಾರ: ಮಣಿಪುರ ಪರಿಸ್ಥಿತಿ ಕುರಿತು ಚರ್ಚಿಸಲು ಅವಕಾಶ ನಿರಾಕರಿಸಿದ ಅಧ್ಯಕ್ಷರ ನಡೆಯನ್ನು ಖಂಡಿಸಿ ಗೃಹ ಸಚಿವಾಲಯದ ಸಂಸದೀಯ ಸ್ಥಾಯೀ ಸಮಿತಿಯ ಮೂವರು ಸದಸ್ಯರು ಗುರುವಾರ ಸಭೆಯನ್ನು ಬಹಿಷ್ಕರಿಸಿ ಹೊರ ನಡೆದರು. ತಮಿಳುನಾಡು, ತೆಲಂಗಾಣ, ಆಂಧ್ರ ಪ್ರದೇಶದಲ್ಲಿ ಕಾರಾಗೃಹಗಳ ಸುಧಾರಣೆ ಕುರಿತು ಚರ್ಚಿಸಲು ಸಭೆ ಕರೆಯಲಾಗಿತ್ತು. ಈ ವೇಳೆ “ಮಣಿಪುರದ ಸದ್ಯದ ಪರಿಸ್ಥಿತಿ ಕುರಿತು ಚರ್ಚೆಯಾಗಬೇಕು’ ಎಂದು ಟಿಎಂಸಿಯ ಡೆರೆಕ್ ಒಬ್ರಿಯಾನ್, ಕಾಂಗ್ರೆಸ್‌ನ ದಿಗ್ವಿಜಯ್ ಸಿಂಗ್ ಮತ್ತು ಪ್ರದೀಪ್ ಭಟ್ಟಾ ಚಾರ್ಯ ಜಂಟಿಯಾಗಿ ಸಲ್ಲಿಸಿದ ಮನ ವಿಗೆ ಸಮಿತಿಯ ಅಧ್ಯಕ್ಷ ಬ್ರಿಜ್‌ಲಾಲ್ ಅವರಿಂದ ಯಾವುದೇ ಪ್ರತಿಕ್ರಿಯೆ ಸಿಗಲಿಲ್ಲ ಎಂದು ಮೂಲಗಳು ತಿಳಿಸಿವೆ.