Advertisement

Manipur video: ದುಷ್ಕರ್ಮಿಗಳ ಮರಣದಂಡನೆ ಖಾತ್ರಿ ಎಂದ ಸಿಎಂ ಬಿರೇನ್ ಸಿಂಗ್

04:16 PM Jul 20, 2023 | Team Udayavani |

ಇಂಫಾಲ: ಮಣಿಪುರದಲ್ಲಿ ಇಬ್ಬರು ಮಹಿಳೆಯರನ್ನು ವಿವಸ್ತ್ರಗೊಳಿಸಿ ಸಾರ್ವಜನಿಕವಾಗಿ ಮೆರವಣಿಗೆ ನಡೆಸಿದ ಹೇಯ ಘಟನೆಯ ವಿಡಿಯೋ ವೈರಲ್ ಆದ ಬೆನ್ನಲ್ಲೇ ಸಿಎಂ ಬಿರೇನ್ ಸಿಂಗ್ ಗುರುವಾರ ಪ್ರತಿಕ್ರಿಯೆ ನೀಡಿದ್ದು, ಘಟನೆಯ ಬಗ್ಗೆ ಸಂಪೂರ್ಣ ತನಿಖೆ ನಡೆಯುತ್ತಿದ್ದು, ಸಂಭವನೀಯ ಮರಣದಂಡನೆ ಸೇರಿದಂತೆ ಕಠಿಣ ಕ್ರಮವನ್ನು ಅನುಸರಿಸಲಾಗುವುದು ಎಂದು ಹೇಳಿದ್ದಾರೆ.

Advertisement

”ಸಮಾಜದಲ್ಲಿ ಇಂತಹ ಹೇಯ ಕೃತ್ಯಗಳಿಗೆ ಯಾವುದೇ ಸ್ಥಾನವಿಲ್ಲ. ನಿನ್ನೆ ಕಾಣಿಸಿಕೊಂಡ ವಿಡಿಯೋದಲ್ಲಿ ತೋರಿಸಿರುವಂತೆ, ಆಳವಾದ ಅಗೌರವ ಮತ್ತು ಅಮಾನವೀಯ ಕೃತ್ಯಕ್ಕೆ ಒಳಗಾದ ಇಬ್ಬರು ಮಹಿಳೆಯರಿಗಾಗಿ ನನ್ನ ಹೃದಯ ಆಗಾಧ ನೋವು ಅನುಭವಿಸುತ್ತಿದೆ. ವಿಡಿಯೋ ಹೊರಬಿದ್ದ ತತ್ ಕ್ಷಣ ಘಟನೆಯ ಸ್ವಯಂ ಪ್ರೇರಿತ ಅರಿವನ್ನು ಪಡೆದುಕೊಂಡು ಪೊಲೀಸರು ಕ್ರಮಕ್ಕೆ ಮುಂದಾಗಿದ್ದಾರೆ ಮತ್ತು ಇಂದು ಬೆಳಗ್ಗೆ ಮೊದಲ ಆರೋಪಿಯ ಬಂಧನವನ್ನು ಮಾಡಿದ್ದಾರೆ” ಎಂದು ತಿಳಿಸಿದ್ದಾರೆ.

ಹಿಂಸಾಚಾರದಿಂದ ನಲುಗಿ ಹೋಗಿರುವ ಮಣಿಪುರದಲ್ಲಿ ಮೇ 4 ರಂದು ಘಟನೆ ನಡೆದ ಘಟನೆಯ ವಿಡಿಯೋ ವೈರಲ್ ಆದ ಬೆನ್ನಲ್ಲೇ ಇನ್ನಷ್ಟು ಆತಂಕ ಎದುರಾಗಿದ್ದು ಎಲ್ಲೆಡೆ ವ್ಯಾಪಕ ಕಟ್ಟೆಚ್ಚರ ವಹಿಸಲಾಗಿದೆ. ವಿಡಿಯೋದಲ್ಲಿ ಅಸಹಾಯಕ ಮಹಿಳೆಯರು ನಿರಂತರ ಕಿರುಕುಳಕ್ಕೆ ಒಳಗಾಗಿರುವುದು ಕಂಡು ಬಂದಿದ್ದು ದೇಶದೆಲ್ಲೆಡೆ ಆಕ್ರೋಶ ವ್ಯಕ್ತವಾಗಿದೆ.

ಅಪರಿಚಿತ ಶಸ್ತ್ರಸಜ್ಜಿತ ದುಷ್ಕರ್ಮಿಗಳ ವಿರುದ್ಧ ತೌಬಲ್ ಜಿಲ್ಲೆಯ ನಾಂಗ್‌ಪೋಕ್ ಸೆಕ್ಮೈ ಪೊಲೀಸ್ ಠಾಣೆಯಲ್ಲಿ ಅಪಹರಣ, ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next