ಇಂಫಾಲ: ಸೇನಾ ಡ್ರೋನ್‌ಗಳು, ಹೆಲಿಕಾಪ್ಟರ್‌ಗಳ ಹದ್ದಿನ ಕಣ್ಣಿನ ನಡುವೆಯೇ ಗಲಭೆಪೀಡಿತ ಮಣಿಪುರದಲ್ಲಿ ಪರಿಸ್ಥಿತಿ ನಿಧಾನವಾಗಿ ಸಹಜ ಸ್ಥಿತಿಗೆ ಬರುತ್ತಿದೆ.
ರಾಜ್ಯದ ಹಲವು ಭಾಗಗಳಲ್ಲಿ ರವಿವಾರ ಬೆಳಗ್ಗೆ 7ರಿಂದ 10ರ ವರೆಗೆ ಕರ್ಫ್ಯೂ ಸಡಿಲಿಸಲಾಗಿದ್ದು, ನಾಗರಿಕರು ಆಹಾರ ವಸ್ತುಗಳು, ಔಷಧಗಳು ಸಹಿತ ಆವಶ್ಯಕ ವಸ್ತುಗಳ ಖರೀದಿಗಾಗಿ ಮಾರುಕಟ್ಟೆಗಳಿಗೆ ಧಾವಿಸಿದ್ದಾರೆ. ಅತೀ ಹೆಚ್ಚು ಹಿಂಸಾಚಾರಕ್ಕೆ ಸಾಕ್ಷಿಯಾಗಿರುವ ಚುರಾಚಾಂದ್‌ಪುರ ಪಟ್ಟಣದಲ್ಲಿ ಸೇನೆ ಮತ್ತು ಅಸ್ಸಾಂ ರೈಫಲ್ಸ್ ಸಿಬಂದಿ ಪಥಸಂಚಲನ ನಡೆಸಿದೆ. ಮಣಿಪುರದಲ್ಲಿ ಒಟ್ಟಾರೆ 10 ಸಾವಿರಕ್ಕೂ ಅಧಿಕ ಯೋಧರು, ಅರೆಸೇನಾ ಪಡೆ ಸಿಬಂದಿ, ಕೇಂದ್ರ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದ್ದು, ಯಾವುದೇ ಅಹಿತಕರ ಘಟನೆಗಳು ಮರುಕಳಿಸದಂತೆ ಕಟ್ಟೆಚ್ಚರ ವಹಿಸಲಾಗಿದೆ.
ಸಿಎಂ ನೇತೃತ್ವದಲ್ಲಿ ಸಭೆ: ಮಣಿಪುರ ಮುಖ್ಯಮಂತ್ರಿ ಎನ್.ಬಿರೇನ್ ಸಿಂಗ್ ಅವರ ನೇತೃತ್ವದಲ್ಲಿ ರವಿವಾರ ಸರ್ವಪಕ್ಷಗಳ ಸಭೆ ನಡೆದಿದೆ. ರಾಜ್ಯಾದ್ಯಂತ ಶಾಂತಿ ಕಾಪಾಡುವ ಕುರಿತು ಸಭೆಯಲ್ಲಿ ಚರ್ಚಿಸಲಾಗಿದೆ. ಪ್ರತಿಯೊಂದು ವಿಧಾನಸಭಾ ಕ್ಷೇತ್ರಗಳಲ್ಲಿ ಶಾಂತಿ ಸಮಿತಿಗಳನ್ನು ರಚಿಸಿ, ಬೇರುಮಟ್ಟದಲ್ಲೇ ಶಾಂತಿ ಪುನಃಸ್ಥಾಪನೆಗೆ ಕ್ರಮಕೈಗೊಳ್ಳಲಾಗುವುದು ಎಂದು ಸಿಂಗ್ ಹೇಳಿದ್ದಾರೆ. ಸರ್ವಪಕ್ಷಗಳ ಸಭೆಯಲ್ಲಿ ಕಾಂಗ್ರೆಸ್, ಸಿಪಿಐ, ಜೆಡಿಯು, ಎನ್‌ಪಿಎಫ್, ಶಿವಸೇನೆ, ಟಿಎಂಸಿ, ಬಿಎಸ್‌ಪಿ, ಆಪ್, ಎಂಪಿಪಿ, ಎಐಎಫ್ಬಿ, ಮಾಜಿ ಸಿಎಂ ಇಬೋಬಿ ಸಿಂಗ್ ಸಹಿತ ಹಲವು ಪಕ್ಷಗಳ ನಾಯಕರು ಪಾಲ್ಗೊಂಡಿದ್ದರು.
23 ಸಾವಿರ ಮಂದಿಯ ರಕ್ಷಣೆ: ಬಹುಸಂಖ್ಯಾಕ ಮೈತೇಯಿ ಸಮುದಾಯಕ್ಕೆ ಪರಿಶಿಷ್ಟ ಪಂಗಡ ಸ್ಥಾನಮಾನ ನೀಡುವ ವಿಚಾರದಲ್ಲಿ ಈ ಸಮುದಾಯ ಮತ್ತು ಬುಡಕಟ್ಟು ಜನಾಂಗದ ನಡುವೆ ಉಂಟಾದ ಹಿಂಸಾಚಾರಕ್ಕೆ ಮೂರೇ ದಿನಗಳಲ್ಲಿ 56 ಮಂದಿ ಸಾವಿಗೀಡಾಗಿದ್ದಾರೆ. ಈವರೆಗೆ ಸುಮಾರು 23 ಸಾವಿರ ನಾಗರಿಕರನ್ನು ರಕ್ಷಿಸಿ, ಸೇನೆಯ ಪರಿಹಾರ ಶಿಬಿರಗಳಿಗೆ ಸ್ಥಳಾಂತರಿಸಲಾಗಿದೆ ಎಂದು ರಕ್ಷಣ ಮೂಲಗಳು ತಿಳಿಸಿವೆ. ಇದೇ ವೇಳೆ, ಈಶಾನ್ಯ ರಾಜ್ಯದಲ್ಲಿ ಸಿಲುಕಿಕೊಂಡಿರುವ ಮಲಯಾಳಿಗಳನ್ನು ಕೂಡಲೇ ರಕ್ಷಿಸುವಂತೆ ಕೋರಿ ಕೇರಳದ ಕಾಂಗ್ರೆಸ್ ನಾಯಕ ವಿ.ಡಿ.ಸತೀಶನ್ ಅವರು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ. ಇನ್ನೊಂದೆಡೆ ಮಣಿಪುರದಲ್ಲಿ ಸಿಲುಕಿದ್ದ ಸಿಕ್ಕಿಂನ 128 ವಿದ್ಯಾರ್ಥಿಗಳನ್ನು ರವಿವಾರ ರಕ್ಷಿಸಿ, ತವರು ರಾಜ್ಯಕ್ಕೆ ಸುರಕ್ಷಿತವಾಗಿ ಕರೆತರಲಾಗಿದೆ. ಆಂಧ್ರಪ್ರದೇಶ ಸರಕಾರವು ವಿಶೇಷ ವಿಮಾನದ ವ್ಯವಸ್ಥೆ ಮಾಡಿ ಮಣಿಪುರದಲ್ಲಿದ್ದ ವಿದ್ಯಾರ್ಥಿಗಳನ್ನು ರಾಜ್ಯಕ್ಕೆ ಕರೆತಂದಿದೆ. ಮಹಾರಾಷ್ಟ್ರ ಸರಕಾರ ಕೂಡ ವಿದ್ಯಾರ್ಥಿಗಳನ್ನು ರಕ್ಷಿಸಲು ವಿಶೇಷ ವಿಮಾನವನ್ನು ಇಂಫಾಲ್‌ಗೆ ಕಳುಹಿಸಿದೆ.