ಹೊಸದಿಲ್ಲಿ: ಮಣಿಪುರದಲ್ಲಿ ನಡೆದ ಜನಾಂಗೀಯ ಹಿಂಸಾಚಾರದ ಸಂತ್ರಸ್ತರ ಪರಿಹಾರ ಮತ್ತು ಪುನರ್ವಸತಿ ಮೇಲ್ವಿಚಾರಣೆಗಾಗಿ ರಚಿಸಲಾದ ನ್ಯಾಯಮೂರ್ತಿ ಗೀತಾ ಮಿತ್ತಲ್ ಸಮಿತಿಯ ಅಧಿಕಾರಾವಧಿಯನ್ನು ಸುಪ್ರೀಂ ಕೋರ್ಟ್ ಸೋಮವಾರ(ಆಗಸ್ಟ್ ೫) ಆರು ತಿಂಗಳು ವಿಸ್ತರಿಸಿದೆ.
ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್, ನ್ಯಾಯಮೂರ್ತಿ ಜೆ.ಬಿ. ಪರ್ದಿವಾಲಾ ಮತ್ತು ನ್ಯಾಯಮೂರ್ತಿ ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠವು ಜುಲೈ 15 ಕ್ಕೆ ಸಮಿತಿಯ ಅಧಿಕಾರಾವಧಿ ಕೊನೆಗೊಂಡಿದೆ ಎಂದು ತಿಳಿಸಿದ ನಂತರ ಅವಧಿಯನ್ನು ಆರು ತಿಂಗಳ ಕಾಲ ವಿಸ್ತರಿಸಿತು.
ಕಳೆದ ವರ್ಷ ಆಗಸ್ಟ್ 7 ರಂದು, ಪೀಠವು ಸಂತ್ರಸ್ತರ ಪರಿಹಾರ ಮತ್ತು ಪುನರ್ವಸತಿ ಮತ್ತು ಅವರಿಗೆ ಪರಿಹಾರವನ್ನು ಮೇಲ್ವಿಚಾರಣೆ ಮಾಡಲು ಮೂವರು ಮಾಜಿ ಮಹಿಳಾ ಹೈಕೋರ್ಟ್ ನ್ಯಾಯಾಧೀಶರ ಸಮಿತಿಯನ್ನು ಸ್ಥಾಪಿಸಲು ಆದೇಶಿಸಿ ಅಪರಾಧ ಪ್ರಕರಣಗಳ ತನಿಖೆಯನ್ನು ಮೇಲ್ವಿಚಾರಣೆ ಮಾಡಲು ಮಹಾರಾಷ್ಟ್ರದ ಮಾಜಿ ಪೊಲೀಸ್ ಮುಖ್ಯಸ್ಥ ದತ್ತಾತ್ರೇ ಪಡಸಾಲಗಿಕರ್ ಅವರನ್ನು ಕೇಳಿತ್ತು.
ಜನಾಂಗೀಯ ಕಲಹಕ್ಕೆ ಸಂಬಂಧಿಸಿದ ಪ್ರಕರಣಗಳ ಮೇಲ್ವಿಚಾರಣೆ ನಡೆಸುತ್ತಿರುವ ಉನ್ನತ ನ್ಯಾಯಾಲಯಕ್ಕೆ ತನ್ನ ವರದಿಗಳನ್ನು ನೇರವಾಗಿ ಸಲ್ಲಿಸಲು ಸಮಿತಿಗೆ ಅಧಿಕಾರ ನೀಡಲಾಗಿದೆ.
ಮೇ 3, 2023 ರಂದು ಬಹುಸಂಖ್ಯಾತ ಮೈತೇಯ್ ಸಮುದಾಯದ ಎಸ್ ಟಿ ಮೀಸಲು ಬೇಡಿಕೆಯನ್ನು ವಿರೋಧಿಸಿ ಮೆರವಣಿಗೆ’ ಆಯೋಜಿಸಿದ ವೇಳೆ ಜನಾಂಗೀಯ ಹಿಂಸಾಚಾರ ಪ್ರಾರಂಭವಾಗಿ 200 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು. ನೂರಾರು ಮಂದಿ ವ್ಯಾಪಕ ಹಿಂಸಾಚಾರದಲ್ಲಿ ಗಾಯಗೊಂಡಿದ್ದರು. ಸಾವಿರಾರು ಜನರು ಸ್ಥಳಾಂತರಗೊಂಡಿದ್ದರು.