Advertisement

Manipur ಗಲಭೆ: ವಿದೇಶಿ ಉಗ್ರರ ಕೈವಾಡ ಆತಂಕಕಾರಿ ಬೆಳವಣಿಗೆ

11:30 PM Oct 01, 2023 | Team Udayavani |

ಕಳೆದ ಐದು ತಿಂಗಳುಗಳಿಂದ ದೇಶದ ಈಶಾನ್ಯ ರಾಜ್ಯವಾದ ಮಣಿಪುರದಲ್ಲಿ ನಡೆಯುತ್ತಿರುವ ಜನಾಂಗೀಯ ಸಂಘರ್ಷದ ಹಿಂದೆ ಅಂತಾರಾಷ್ಟ್ರೀಯ ಭಯೋತ್ಪಾದಕರ ಷಡ್ಯಂತ್ರ ಅಡಗಿರುವುದು ರಾಷ್ಟ್ರೀಯ ತನಿಖಾ ಸಂಸ್ಥೆಯ ತನಿಖೆಯ ವೇಳೆ ಬಯಲಿಗೆ ಬಂದಿದೆ. ಮ್ಯಾನ್ಮಾರ್‌ ಮತ್ತು ಬಾಂಗ್ಲಾದೇಶ ಮೂಲದ ಭಯೋತ್ಪಾದಕ ಸಂಘಟನೆಗಳು ಸ್ಥಳೀಯ ಉಗ್ರಗಾಮಿ ಸಂಘಟನೆಗಳಿಗೆ ಪ್ರಚೋದನೆ ಮತ್ತು ನೆರವು ನೀಡುತ್ತಿರುವುದನ್ನು ಬಂಧಿತ ಇಬ್ಬರು ಆರೋಪಿಗಳು ಎನ್‌ಐಎ ತನಿಖೆ ವೇಳೆ ಬಾಯ್ಬಿಟ್ಟಿದ್ದಾರೆ. ದೇಶದಲ್ಲಿನ ಶಾಂತಿಯನ್ನು ಕದಡುವ ಪ್ರಯತ್ನದ ಭಾಗವಾಗಿ ಮಣಿಪುರದಲ್ಲಿ ಎದ್ದಿರುವ ಜನಾಂಗೀಯ ಸಂಘರ್ಷವನ್ನು ಬಳಸಿಕೊಂಡಿರುವ ಈ ವಿದೇಶಿ ಭಯೋತ್ಪಾದಕ ಸಂಘಟನೆಗಳು ಅಲ್ಲಿನ ಉಗ್ರಗಾಮಿ ಮತ್ತು ಪ್ರತ್ಯೇಕತಾವಾದಿ ಸಂಘಟನೆಗಳಿಗೆ ಶಸ್ತ್ರಾಸ್ತ್ರ ಮತ್ತು ಆರ್ಥಿಕ ನೆರವನ್ನು ನೀಡುತ್ತಿರುವ ಬಗೆಗೂ ಎನ್‌ಐಎ ಅಧಿಕಾರಿಗಳು ಮಾಹಿತಿಗಳನ್ನು ಕಲೆಹಾಕಿದ್ದಾರೆ. ಇದು ಮಣಿಪುರ ಗಲಭೆಯ ಮತ್ತೂಂದು ಮುಖವನ್ನು ತೆರೆದಿಟ್ಟಿದ್ದು, ಜನರನ್ನು ಮತ್ತಷ್ಟು ಆತಂಕಕ್ಕೀಡು ಮಾಡಿದೆ.

Advertisement

ಮೀಸಲಾತಿ ಕುರಿತಂತೆ ರಾಜ್ಯದ ಬಹುಸಂಖ್ಯಾಕ ಮೈತೇಯಿ ಹಾಗೂ ಬುಡಕಟ್ಟು ಸಮುದಾಯಗಳಾದ ನಾಗಾ ಮತ್ತು ಕುಕಿ ನಡುವೆ ಕಳೆದ ಐದು ತಿಂಗಳುಗಳಿಂದೀಚೆಗೆ ಭಾರೀ ಹಿಂಸಾಚಾರ ನಡೆಯುತ್ತಲೇ ಬಂದಿದ್ದು ಈವರೆಗೆ 180ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. ಜುಲೈಯಲ್ಲಿ ನಾಪತ್ತೆಯಾಗಿದ್ದ ಮೈತೇಯಿ ಸಮುದಾಯಕ್ಕೆ ಸೇರಿದ ಇಬ್ಬರು ವಿದ್ಯಾರ್ಥಿಗಳ ಮೃತದೇಹಗಳ ವೀಡಿಯೋ ಕಳೆದ ವಾರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಬಳಿಕ ಮಣಿಪುರದಲ್ಲಿ ಮತ್ತೆ ಹಿಂಸಾಚಾರ ಭುಗಿಲೆದ್ದಿತ್ತು. ಹಿಂಸಾನಿರತ ಗುಂಪುಗಳು ಜಿಲ್ಲಾಧಿಕಾರಿ ಕಚೇರಿ ಮೇಲೆ ದಾಳಿ ನಡೆಸಿದ್ದೇ ಅಲ್ಲದೆ ಮುಖ್ಯಮಂತ್ರಿ ಅವರ ನಿವಾಸದ ಮೇಲೂ ದಾಳಿ ನಡೆಸಲು ಯತ್ನಿಸಿದ್ದರಾದರೂ ಭದ್ರತಾ ಪಡೆಗಳ ಸಕಾಲಿಕ ಕ್ರಮದಿಂದಾಗಿ ಭಾರೀ ಅನಾಹುತ ತಪ್ಪಿತ್ತು. ಹಿಂಸಾಚಾರ ತೀವ್ರಗೊಳ್ಳುತ್ತಿದ್ದಂತೆಯೇ ರಾಜ್ಯವನ್ನು ಪ್ರಕ್ಷುಬ್ಧ ಪ್ರದೇಶವೆಂದು ಘೋಷಿಸಿ, ಕಠಿನ ನಿರ್ಬಂಧಗಳನ್ನು ಹೇರಲಾಗಿದೆ. ಸದ್ಯ ಮಣಿಪುರದಲ್ಲಿ ಪರಿಸ್ಥಿತಿ ಉದ್ವಿಗ್ನತೆಯಿಂದ ಕೂಡಿದ್ದು ಬೂದಿ ಮುಚ್ಚಿದ ಕೆಂಡದಂತಿದೆ. ರಾಜ್ಯದಲ್ಲಿ ಜನಾಂಗೀಯ ಸಂಘರ್ಷ ಆರಂಭಗೊಂಡಾಗಿನಿಂದ ಇಂತಹುದೇ ಪರಿಸ್ಥಿತಿ ಇದ್ದು ಪದೇಪದೆ ಹಿಂಸಾಚಾರ ಭುಗಿಲೇಳುವ ಮೂಲಕ ಇಡೀ ರಾಜ್ಯದ ಜನರು ಭಯಗ್ರಸ್ತರಾಗಿ ದಿನದೂಡುವಂತಾಗಿದೆ.

ಕೇಂದ್ರ ಮತ್ತು ರಾಜ್ಯ ಸರಕಾರಗಳು ಗಲಭೆಪೀಡಿತ ಪ್ರದೇಶಗಳಲ್ಲಿ ಭಾರೀ ಸಂಖ್ಯೆಯಲ್ಲಿ ಭದ್ರತಾ ಪಡೆಗಳನ್ನು ನಿಯೋಜಿಸಿರುವ ಜತೆಯಲ್ಲಿ ರಾಜ್ಯಾದ್ಯಂತ ನಿಗಾ ಇರಿಸಿದೆ. ಇದರ ಹೊರತಾಗಿಯೂ ರಾಜ್ಯದಲ್ಲಿ ಶಾಂತಿಯನ್ನು ಪುನಃಸ್ಥಾಪಿಸಲು ಸಾಧ್ಯವಾಗದಿರುವುದು ಕಳವಳಕ್ಕೆ ಕಾರಣವಾಗಿದೆ. ಈಗ ಬಂಧಿತ ಇಬ್ಬರು ಆರೋಪಿಗಳು ಇಡೀ ಗಲಭೆಯ ಹಿಂದೆ ವಿದೇಶದಲ್ಲಿನ ಭಯೋತ್ಪಾದಕ ಸಂಘಟನೆಗಳ ಕೈವಾಡ ಇರುವ ಬಗೆಗೆ ಬಾಯ್ಬಿಟ್ಟಿರುವುದು ಪರಿಸ್ಥಿತಿ ಕೈಮೀರಿರುವುದನ್ನು ಸಾಬೀತುಪಡಿಸಿದೆ.

ಇನ್ನಾದರೂ ಕೇಂದ್ರ ಮತ್ತು ರಾಜ್ಯ ಸರಕಾರ ರಾಜ್ಯದಲ್ಲಿನ ಎಲ್ಲ ಸಮುದಾಯಗಳ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು ರಾಜ್ಯದಲ್ಲಿ ಶಾಂತಿ, ಕಾನೂನು ಮತ್ತು ಸುವ್ಯವಸ್ಥೆ ಮರುಸ್ಥಾಪಿಸಲು ಮುಂದಾಗಬೇಕು. ಭಯೋತ್ಪಾದಕರ ಹುಟ್ಟಡಗಿಸುವುದೇ ಅಲ್ಲದೆ ರಾಜ್ಯದ ನಾಗರಿಕರು ಅದರಲ್ಲೂ ಯುವಜನರು ಹಾದಿ ತಪ್ಪದಂತೆ ಎಚ್ಚರ ವಹಿಸಬೇಕು.

Advertisement

Udayavani is now on Telegram. Click here to join our channel and stay updated with the latest news.

Next