Advertisement

Manipur: ನದಿ ಕೊರೆತಕ್ಕೆ ತತ್ತರಿಸಿದ ಮಣಿಪುರ; ಜಮೀನು ನೀರು ಪಾಲು

05:21 PM Jul 29, 2024 | Team Udayavani |

ಕಟಪಾಡಿ: ಮಣಿಪುರ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಮಣಿಪುರ ವೆಸ್ಟ್‌ ಬಳಿ ತೀವ್ರಗೊಂಡ ನದಿ ಕೊರೆತದಿಂದ ರೈತರ ಕೃಷಿ ಜಮೀನು, ತೋಟ, ರೈತರ ಪಂಪ್‌ಶೆಡ್‌ ನೀರು ಪಾಲಾಗುತ್ತಿದೆ.

Advertisement

ಮಣಿಪುರ ಗ್ರಾಮದಲ್ಲಿ ಹೊಳೆಯ ತಟದ ನಿವಾಸಿಗಳು ಕೃಷಿಯಿಂದಲೇ ಕುಟುಂಬದ ಜೀವನ ನಿರ್ವಹಣೆ ಮಾಡುತ್ತಿದ್ದಾರೆ. ಪ್ರತಿ ವರ್ಷವೂ ಚಕುಷ್ಮತಿ ಹೊಳೆಯ ನೆರೆಯಿಂದ ಕೃಷಿಗೆ ಹಾನಿಯಾಗುತ್ತದೆ. ಈ ಬಾರಿ ಹೊಳೆಯಕೊರೆತದಿಂದಾಗಿ ಕೃಷಿ ಭೂಮಿ ಕೂಡಾ ಹೊಳೆಯ ಒಡಲು ಸೇರುತ್ತಿದೆ. ಫಲವನ್ನು ಕೊಡುತ್ತಿರುವ ಬೃಹತ್‌ ಗಾತ್ರದ ತೆಂಗಿನ ಮರಗಳು ಹೊಳೆಯನೀರಿನ ಹರಿವಿನ ರಭಸಕ್ಕೆ ಮಣ್ಣು ಕುಸಿದು ನದಿ ಪಾಲಾಗುತ್ತಿದೆ. ಈ ಬಗ್ಗೆ ಕೆಲವು ವರ್ಷಗಳಿಂದ ಮನವಿಯನ್ನು ನೀಡಿದ್ದ ರೂಫಲಿತಾಂಶ ಮಾತ್ರ ಶೂನ್ಯವಾಗಿದೆ. ಪಂಪುಶೆಡ್‌ ಬಿರುಕು ಈ ಬಾರಿಯ ಪುನರ್ವಸು ಮಳೆಗೆ ಫಲ ಭರಿತ 2 ದೊಡ್ಡ ತೆಂಗಿನ ಮರ ಹೊಳೆ ಪಾಲಾಗಿದ್ದು, ಕೃಷಿಕ ಚಂದ್ರಶೇಖರ ಅವರ ಕೃಷಿ ವಿದ್ಯುತ್‌ ಪಂಪುಶೆಡ್‌ ಬಿರುಕು ಬಿಟ್ಟಿದ್ದು, ಪಂಚಾಂಗದ ಸನಿಹದವರೆಗೆ ಜಮೀನು ನದಿ ಪಾಲಾಗಿದೆ. ಇನ್ನು ಶೆಡ್‌ ಹೊಳೆ ಪಾಲಾಗಲು ಕ್ಷಣ ಗಣನೆ ನಡೆಸುತ್ತಿದೆ.

20 ಸೆಂಟ್ಸಲ್ಲಿ ಉಳಿದದ್ದು ಒಂದೇ ಸೆಂಟ್‌!
ನಮ್ಮ ಜಮೀನಿನ ಪಂಪ್‌ ಶೆಡ್‌, ಫಲ ಭರಿತ ತೆಂಗಿನ ಮರಗಳೂ ನದಿಯ ತೆಕ್ಕೆಗೆ ಸೇರಿದೆ. ಹಿರಿಯರ ಕಾಲದಿಂದಲೂ ಜೀವನ ಸಾಗಿಸುತ್ತಿದ್ದ ಕೃಷಿ – ತೋಟ ಪ್ರದೇಶವು ಹೊಳೆ ಪಾಲಾಗುತ್ತಿರುವುದು ಬೇಸರ ತರುತ್ತಿದೆ. 20 ಸೆಂಟ್ಸ್‌ ಇದ್ದ ಕೃಷಿ ಜಮೀನು ಹೊಳೆಯ ಪಾಲಾಗಿ ಈಗ ಸುಮಾರು ಒಂದು ಸೆಂಟ್ಸ್‌ ಮಾತ್ರ ಉಳಿದಿದೆ. ಇದಕ್ಕೆ ಪರಿಹಾರವೂ ಸಿಗುತ್ತಿಲ್ಲ.

– ಚಂದ್ರಶೇಖರ್‌,ಮಣಿಪುರ

ಮನವಿ ನಿಷ್ಪ್ರಯೋಜಕ

Advertisement

ತಡೆ ಗೋಡೆ ನಿರ್ಮಿಸಿ, ಜಮೀನು ರಕ್ಷಿಸಿ ಈ ಭಾಗದಲ್ಲಿ ಹರಿಯುತ್ತಿರುವ ಚಕುಷ್ಮತಿ ಹೊಳೆಯು ಅವಾಂತರ ಸೃಷ್ಟಿಸುತ್ತಿದೆ. ಮನವಿ ಸಲ್ಲಿಸಿದರೂ ನಿಷ್ಪ್ರಯೋಜಕವಾಗಿದೆ. ಅಧಿಕಾರಿಗಳು ಎಚ್ಚೆತ್ತು ಕೂಡಲೇ ನದಿ ದಂಡೆ -ತಡೆಗೋಡೆ ನಿರ್ಮಿಸಿ ನಮ್ಮ ಕೃಷಿ ಜಮೀನುಗೆ ರಕ್ಷಣೆ ನೀಡಲಿ.

–  ಸಂತೋಷ್‌ ಕೋಟ್ಯಾನ್‌, ಮಣಿಪುರ

ನದಿ ದಂಡೆ ನಿರ್ಮಾಣ

ಸಣ್ಣ ನೀರಾವರಿ ಇಲಾಖೆಯಿಂದ ಅನುದಾನ ಬಿಡುಗಡೆಗೊಂಡಿಲ್ಲ. ಈಗಾಗಲೇ ಸಲ್ಲಿಸಲಾಗಿರುವ ಪ್ರಸ್ತಾವನೆಯನ್ನು ಫಾಲೋ ಅಪ್‌ ಮಾಡಿ ರೈತರ ಕೃಷಿ ಜಮೀನುವಿಗೆ ಸೂಕ್ತ ರಕ್ಷಣೆ ನೀಡುವಲ್ಲಿ ನದಿ ದಂಡೆ ನಿರ್ಮಾಣ ಯೋಜನೆ ಅನುಷ್ಠಾನಕ್ಕೆ ಪ್ರಾಮಾಣಿಕ ಪ್ರಯತ್ನ ನಡೆಸುತ್ತೇನೆ.

– ಗುರ್ಮೆ ಸುರೇಶ್‌ ಶೆಟ್ಟಿ, ಶಾಸಕರು, ಕಾಪು

ಅನುದಾನ ಬಿಡುಗಡೆಗೊಂಡಿಲ್ಲ
ಯಾವುದೇ ಅನುದಾನ ಇದುವರೆಗೆ ಬಿಡುಗಡೆಗೊಂಡಿಲ್ಲ. ಈ ಬಗ್ಗೆ ಸೂಕ್ತವಾಗಿ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲಾಗುತ್ತದೆ.

– ಸುಧಾಕರ್‌ ಶೆಟ್ಟಿ, ಎಂಜಿನಿಯರ್‌, ಸಣ್ಣ ನೀರಾವರಿ ಇಲಾಖೆ

10 ಎಕರೆ ಭೂಮಿ ಅಪಾಯದಲ್ಲಿ
ನದಿ ಕೊರೆತದಿಂದ ಈಗಾಗಲೇ ಒಂದು ಎಕರೆಗೂ ಮಿಕ್ಕಿದ ಕೃಷಿ ಭೂಮಿ ಹೊಳೆಪಾಲಾಗಿದೆ. ನಿವೃತ್ತ ಅಧ್ಯಾಪಕ ಭೋಜ ಶೆಟ್ಟಿ ಮನೆಯಿಂದ ಆರಂಭಗೊಂಡು ದಿ|ಪ್ರೇಮ ಶೆಟ್ಟಿ, ಅಂಬಾ ಶೆಡ್ತಿ, ಕೊರಗ ಶೆಟ್ಟಿ, ಸಂತೋಷ್‌ ಕೋಟ್ಯಾನ್‌, ದಿ|ರತಿ ಶಡ್ತಿ, ದಿ|ಕುಟ್ಟಿ ಪೂಜಾರಿ, ಉಷಾ ಹಾಗೂ ಚಂದ್ರಶೇಖರ್‌ ರವರ ಕೃಷಿ ಭೂಮಿಯನ್ನು ಕಬಳಿಸುತ್ತಾ ನದಿಸಾಗುತ್ತಿದೆ. ಮುಂದಿನ ದಿನಗಳಲ್ಲಿ ಸುಮಾರು 10 ಎಕರೆಗೂ ಅಧಿಕ ಕೃಷಿ ಜಮೀನು ಹೊಳೆಯ ಪಾಲಾಗುವ ಅಪಾಯ ಕಂಡು ಬಂದಿದೆ. ಈ ಬಗ್ಗೆ ಸಂಬಂಧಪಟ್ಟ ಇಲಾಖಾಧಿಕಾರಿಗಳು, ಜನಪ್ರತಿನಿಧಿಗಳು ನದಿ ದಂಡೆ – ತಡೆಗೋಡೆ ನಿರ್ಮಾಣ ಮಾಡಿ ಕೃಷಿ ಭೂಮಿ ರಕ್ಷಿಸಲು ಕೃಷಿಕರು ಒಕ್ಕೊರಲಿನಿಂದ ಆಗ್ರಹಿಸುತ್ತಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next