ನವದೆಹಲಿ: ಟೋಕಿಯೊ ಒಲಿಂಪಿಕ್ಸ್ ನ ಮಹಿಳೆಯರ ವಿಭಾಗದ ವೇಟ್ ಲಿಫ್ಟಿಂಗ್ ನಲ್ಲಿ ಬೆಳ್ಳಿ ಪದಕ ಗೆದ್ದ ಮೀರಾಬಾಯಿ ಚಾನು ಅವರು ಸೋಮವಾರ ತವರಿಗೆ ವಾಪಸ್ ಆಗಿದ್ದು, ಸೋಮವಾರ ಸಂಜೆ ದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ. ಚಾನು ದೆಹಲಿ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿದ್ದಂತೆಯೇ ಭಾರತ್ ಮಾತಾ ಕೀ ಜೈ ಎಂದು ಘೋಷಣೆ ಕೂಗಿ ಹರ್ಷವನ್ನು ವ್ಯಕ್ತಪಡಿಸಿರುವುದಾಗಿ ವರದಿ ತಿಳಿಸಿದೆ.
ದೆಹಲಿ ವಿಮಾನ ನಿಲ್ದಾಣದಿಂದ ಮೀರಾ ಚಾನು ಭದ್ರತಾ ಪಡೆಯ ಬೆಂಗಾವಲಿನೊಂದಿಗೆ ಮಣಿಪುರಕ್ಕೆ ಪ್ರಯಾಣಿಸಿರುವುದಾಗಿ ವರದಿ ವಿವರಿಸಿದೆ. ಟೋಕಿಯೊ ಒಲಿಂಪಿಕ್ಸ್ ನ ಮಹಿಳೆಯರ 48 ಕೆಜಿ ವಿಭಾಗದಲ್ಲಿ ಚಾನು ಬೆಳ್ಳಿಪದಕ ಜಯಿಸಿದ್ದರು.
ಟೋಕಿಯೊ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಪದಕ ಗೆದ್ದ ಮೀರಾಬಾಯಿ ಚಾನು ಅವರನ್ನು ಅಡಿಷನಲ್ ಸೂಪರಿಟೆಂಡೆಂಟ್ ಆಫ್ ಪೊಲೀಸ್ (ಕ್ರೀಡೆ) ಆಗಿ ನೇಮಕ ಮಾಡಲಾಗಿದೆ ಎಂದು ಮಣಿಪುರ್ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಸೋಮವಾರ ಘೋಷಿಸಿದ್ದಾರೆ.
ಈಗಾಗಲೇ ಮಣಿಪುರ್ ಸರ್ಕಾರ ಘೋಷಿಸಿರುವಂತೆ ಮೀರಾ ಚಾನು ಅವರಿಗೆ ಒಂದು ಕೋಟಿ ರೂಪಾಯಿ ನಗದು ಪುರಸ್ಕಾರ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿಂಗ್ ಹೇಳಿದ್ದಾರೆ. ಅಲ್ಲದೇ 2014ರ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಸ್ಪರ್ಧಿಸಿ ಬೆಳ್ಳಿ ಪದಕ ಗೆದ್ದಿದ್ದ ಜುಡೋಕಾ ಲಿಕ್ಮಾಬಮ್ ಸುಶೀಲಾ ದೇವಿ ಅವರನ್ನು ಕಾನ್ಸ್ ಟೇಬಲ್ ಹುದ್ದೆಯಿಂದ ಸಬ್ ಇನ್ಸ್ ಪೆಕ್ಟರ್ ಆಗಿ ಬಡ್ತಿ ನೀಡಲಾಗಿದೆ. ಅಲ್ಲದೇ 25 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಈ ಸಂದರ್ಭದಲ್ಲಿ ಸಿಎಂ ಘೋಷಿಸಿದ್ದಾರೆ.
ರಾಜ್ಯದಲ್ಲಿ ಶೀಘ್ರವಾಗಿ ವಿಶ್ವದರ್ಜೆ ಮಟ್ಟದ ವೇಟ್ ಲಿಫ್ಟಿಂಗ್ ಅಕಾಡೆಮಿಯನ್ನು ಸ್ಥಾಪಿಸುವುದಾಗಿ ಮುಖ್ಯಮಂತ್ರಿ ಸಿಂಗ್ ಹೇಳಿದರು. ಟೋಕಿಯೊ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಗೆದ್ದ ಚಾನು ಅವರನ್ನು ಅಡಿಷನಲ್ ಎಸ್ಪಿಯಾಗಿ ನೇಮಕ ಮಾಡಲಾಗಿದೆ ಎಂದು ತಿಳಿಸಿದರು.