ನವದೆಹಲಿ/ಇಂಫಾಲ: ಮಣಿಪುರ ಗಲಭೆ ಪ್ರಕರಣದ ವಿಚಾರಣೆಯನ್ನು ರಾಜ್ಯದ ಹೊರಗೆ ನಡೆಸಬೇಕು. ಅಲ್ಲದೇ, ಮಹಿಳೆಯರ ಮೇಲಿನ ಸಾಮೂಹಿಕ ಅತ್ಯಾಚಾರ ಸೇರಿದಂತೆ ಒಟ್ಟಾರೆ ಹಿಂಸಾಚಾರದ ಪ್ರಕರಣಗಳ ವಿಚಾರಣೆಯನ್ನು 6 ತಿಂಗಳೊಳಗಾಗಿ ಪೂರ್ಣಗೊಳಿಸಬೇಕು ಎಂದು ಸುಪ್ರೀಂ ಕೋರ್ಟ್‌ಗೆ ಕೇಂದ್ರ ಸರ್ಕಾರ ಮನವಿ ಸಲ್ಲಿಸಿದೆ. ಶುಕ್ರವಾರ ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ ಅವರೇ ಸರ್ವೋಚ್ಚ ನ್ಯಾಯಾಲಯಕ್ಕೆ ಈ ಕುರಿತು ಅಫಿಡವಿಟ್ ಸಲ್ಲಿಸಿದ್ದಾರೆ. ಜತೆಗೆ, ಕೇಂದ್ರ ಸರ್ಕಾರವು ಮಣಿಪುರದ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದೆ ಎಂಬ ಸಂದೇಶವನ್ನೂ ರವಾನಿಸಿದ್ದಾರೆ.
ಮಣಿಪುರದ ಇಬ್ಬರು ಬುಡಕಟ್ಟು ಮಹಿಳೆಯರನ್ನು ನಗ್ನ ಮೆರವಣಿಗೆ ನಡೆಸಿ, ಸಾಮೂಹಿಕ ಅತ್ಯಾಚಾರಗೈದ ಪ್ರಕರಣದ ವಿಡಿಯೋ ಬಹಿರಂಗವಾದ ಬಳಿಕ, ಈ ಪ್ರಕರಣವನ್ನು ಸುಪ್ರೀಂ ಕೋರ್ಟ್ ಸ್ವಯಂಪ್ರೇರಿತವಾಗಿ ವಿಚಾರಣೆಗೆ ಕೈಗೆತ್ತಿಕೊಂಡಿತ್ತು. ಅಲ್ಲದೇ, ಈ ಘಟನೆ ಬಗ್ಗೆ ದೇಶಾದ್ಯಂತ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಕೊನೆಗೆ, ಜು.27ರಂದು ಕೇಂದ್ರ ಗೃಹ ಇಲಾಖೆಯು ಪ್ರಕರಣದ ತನಿಖೆಯ ಹೊಣೆಯನ್ನು ಸಿಬಿಐಗೆ ವಹಿಸಿ ಆದೇಶ ಹೊರಡಿಸಿತ್ತು.
ಬಂಧನವೇ ಆಗಿಲ್ಲ: ಮಣಿಪುರ ಗಲಭೆಗೆ ಸಂಬಂಧಿಸಿದ 6 ಪ್ರಕರಣಗಳ ತನಿಖೆ ಕೈಗೆತ್ತಿಕೊಂಡಿರುವ ಸಿಬಿಐ ಇನ್ನೂ ಯಾವುದೇ ವ್ಯಕ್ತಿಯನ್ನು ಬಂಧಿಸಿಲ್ಲ. ಕಳೆದ ತಿಂಗಳು ರಾಜ್ಯ ಪೊಲೀಸರಿಂದ ಈ ಪ್ರಕರಣಗಳ ಕುರಿತ ಎಫ್ಐಆರ್ ಅನ್ನು ಸಿಬಿಐ ತನ್ನ ಸುಪರ್ದಿಗೆ ಪಡೆದು, ತನಿಖೆ ಆರಂಭಿಸಿತ್ತು. ಕೇಸುಗಳನ್ನು ಮರು ನೋಂದಣಿ ಮಾಡಿಕೊಂಡರೂ, ಇನ್ನೂ ಎಫ್ಐಆರ್ ಅನ್ನು ಸಿಬಿಐ ಬಹಿರಂಗಗೊಳಿಸಿಲ್ಲ ಮಾತ್ರವಲ್ಲದೇ ಯಾರನ್ನೂ ಬಂಧಿಸಿಲ್ಲ. ರಾಜ್ಯದಲ್ಲಿ ಪರಿಸ್ಥಿತಿ ಗಂಭೀರವಾಗಿರುವ ಕಾರಣ ತನಿಖೆಗೆ ಅಡ್ಡಿಯಾಗುತ್ತಿದೆ, ಸಾಕ್ಷಿಗಳ ಪತ್ತೆಯೂ ಕಷ್ಟವಾಗುತ್ತಿದೆ ಎಂದು ತನಿಖಾ ಸಂಸ್ಥೆ ಹೇಳಿದೆ.
ಮತ್ತಷ್ಟು ಬಾಂಬ್ ನಿರೋಧಕ ವಾಹನಗಳು
ಮಣಿಪುರದ ಗಡಿ ಪ್ರದೇಶಗಳಲ್ಲಿ ಎರಡು ಸಮುದಾಯಗಳ ನಡುವೆ ಗುಂಡಿನ ಚಕಮಕಿಯಂಥ ಘಟನೆಗಳು ಮರುಕಳಿಸುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಮೀಸಲು ಪೊಲೀಸ್ ಪಡೆಯು 15ರಿಂದ 20 ನೆಲಬಾಂಬ್-ನಿರೋಧಕ ವಾಹನಗಳನ್ನು ರಾಜ್ಯಕ್ಕೆ ತರಲು ನಿರ್ಧರಿಸಿದೆ. ಕಳೆದ 4 ದಿನಗಳಿಂದ ಗುಂಡಿನ ದಾಳಿಯಂಥ ಹಲವು ಘಟನೆಗಳು ನಡೆದು, ಅನೇಕರು ಗಾಯಗೊಂಡಿದ್ದಾರೆ. ಹೀಗಾಗಿ, ಭದ್ರತಾ ಪಡೆಗಳಿಗೆ ತಮ್ಮ ಕೆಲಸವನ್ನು ಯಾವುದೇ ಅಡೆತಡೆಯಿಲ್ಲದೇ ನಡೆಸಲು ಅನುಕೂಲವಾಗುವಂತೆ ಬಾಂಬ್ ನಿರೋಧಕ ವಾಹನಗಳನ್ನು ತರಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.