ಗುವಾಹಟಿ: ಕಳೆದ ಮೂರು ತಿಂಗಳಿನಿಂದ ಹಿಂಸಾಚಾರ, ಘರ್ಷಣೆಯಿಂದ ಮಣಿಪುರದ ಜನರು ತತ್ತರಿಸಿಹೋಗಿದ್ದು, ಏತನ್ಮಧ್ಯೆ ಮಣಿಪುರದ ಬಿಜೆಪಿ ನೇತೃತ್ವದ ಎನ್ ಡಿಎ ಮೈತ್ರಿಕೂಟಕ್ಕೆ ನೀಡಿದ್ದ ಬೆಂಬಲವನ್ನು ಹಿಂಪಡೆಯುವುದಾಗಿ ಕುಕಿ ಪೀಪಲ್ಸ್ ಅಲೈಯೆನ್ಸ್ (KPA) ಘೋಷಿಸಿದೆ.
ಮಣಿಪುರ ಮುಖ್ಯಮಂತ್ರಿ ಬಿರೇನ್ ಸಿಂಗ್ ನೇತೃತ್ವದ ಸರ್ಕಾರಕ್ಕೆ ನಮ್ಮ ಕೆಪಿಎ ಪಕ್ಷದ ಇಬ್ಬರು ಶಾಸಕರು ನೀಡಿದ್ದ ಬೆಂಬಲವನ್ನು ಹಿಂಪಡೆಯಲು ನಿರ್ಧರಿಸಿರುವುದಾಗಿ ರಾಜ್ಯಪಾಲರಾದ ಅನುಸೂಯಾ ಯೂಕಿ ಅವರಿಗೆ ಇ-ಮೇಲ್ ಮೂಲಕ ಕಳುಹಿಸಿದ ಪತ್ರದಲ್ಲಿ ತಿಳಿಸಿದೆ.
ರಾಜ್ಯದಲ್ಲಿನ ಪ್ರಸ್ತುತ ಹಿಂಸಾಚಾರದ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಪರಿಗಣಿಸಿದ ನಂತರ ಮಣಿಪುರ ಮುಖ್ಯಮಂತ್ರಿ ಎನ್.ಬಿರೇನ್ ಸಿಂಗ್ ನೇತೃತ್ವದ ಸರ್ಕಾರಕ್ಕೆ ಬೆಂಬಲ ನೀಡುವುದರಲ್ಲಿ ಯಾವುದೇ ಅರ್ಥ ಇಲ್ಲ ಎಂಬುದನ್ನು ಮನಗಂಡು, ಈ ನಿಟ್ಟಿನಲ್ಲಿ ಎನ್ ಡಿಎ ಮೈತ್ರಿಗೆ ನೀಡಿದ್ದ ಬೆಂಬಲ ವಾಪಸ್ ಪಡೆಯಲು ನಿರ್ಧರಿಸಿರುವುದಾಗಿ ಕುಕಿ ಪೀಪಲ್ ಅಲೈಯನ್ಸ್ ಅಧ್ಯಕ್ಷ ಟಾಂಗ್ಮಾಂಗ್ ಹವೊಕಿಪ್ ಪತ್ರದಲ್ಲಿ ತಿಳಿಸಿದ್ದಾರೆ.
60 ಸದಸ್ಯಬಲದ ಮಣಿಪುರ ವಿಧಾನಸಭೆಯಲ್ಲಿ ಸೈಕುಲ್ ಕ್ಷೇತ್ರದಿಂದ ಕಿಮ್ನಿಯೊ ಹಾಕಿಪ್ ಹ್ಯಾಂಗ್ ಶಿಂಗ್ ಮತ್ತು ಸಿಂಘಾಟ್ ಕ್ಷೇತ್ರದಿಂದ ಚಿನ್ಲುಂಥಾಗ್ ಶಾಸಕರಾಗಿ ಆಯ್ಕೆಯಾಗಿದ್ದರು. ಭಾರತೀಯ ಜನತಾ ಪಕ್ಷ 32 ಶಾಸಕರನ್ನು ಹೊಂದಿದ್ದು, ನಾಗಾ ಪೀಪಲ್ಸ್ ಫ್ರಂಟ್ ನ ಐವರು ಶಾಸಕರು ಬೆಂಬಲ ನೀಡಿದ್ದಾರೆ.
ಇನ್ನುಳಿದಂತೆ ನ್ಯಾಷನಲ್ ಪೀಪಲ್ಸ್ ಪಕ್ಷದ (ಎನ್ ಪಿಪಿ) ಏಳು ಶಾಸಕರು, ಜೆಡಿಯುನ ಆರು ಹಾಗೂ ಇಬ್ಬರು ಪಕ್ಷೇತರ ಶಾಸಕರಿದ್ದಾರೆ.