Advertisement

ಈಶಾನ್ಯ ಮಣಿಪುರ ಮತ್ತೆ ಅಸ್ಥಿರ

03:45 AM Mar 12, 2017 | Harsha Rao |

ಇಂಫಾಲ್‌: ಮಣಿಪುರದಲ್ಲಿ ಮತ್ತೆ ಅತಂತ್ರ ವಿಧಾನಸಭೆ ನಿರ್ಮಾಣವಾಗಿದ್ದು, ಕಾಂಗ್ರೆಸ್‌ ಹಾಗೂ ಬಿಜೆಪಿ ಎರಡೂ ಬಹುಮತದ ಹತ್ತಿರದಲ್ಲಿವೆ. ಎರಡೂ ಪಕ್ಷಗಳಿಗೆ ಪ್ರಾದೇಶಿಕ ಹಾಗೂ ಚಿಕ್ಕ ಪಕ್ಷಗಳ ಬೆಂಬಲ ಅತ್ಯಗತ್ಯ. 15 ವರ್ಷಗಳ ಕಾಲ ಸ್ಥಿರ ಆಡಳಿತ ಕಂಡಿದ್ದ ಮಣಿಪುರ ಮತ್ತೆ ಅತಂತ್ರ ಸ್ಥಿತಿಗೆ ಜಾರಿದೆ. ರಾಜ್ಯದಲ್ಲಿ ಅತ್ಯಂತ ಹೆಚ್ಚು ವರ್ಷ ಆಡಳಿತ ನಡೆಸಿದ ಹೆಗ್ಗಳಿಕೆ ಹೊಂದಿರುವ ಹಾಲಿ ಮುಖ್ಯಮಂತ್ರಿ ಓಕ್ರಂ ಇಬೋಬಿ ಸಿಂಗ್‌, ಚುನಾವಣಾ ಪೂರ್ವ ಮತ್ತು ನಂತರದ ಎಲ್ಲ ಸಮೀಕ್ಷೆಗಳನ್ನು ಸುಳ್ಳುಗೊಳಿಸಿ, 28 ಸ್ಥಾನಗಳನ್ನು ಗೆಲ್ಲುವ ಮೂಲಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿಸುವಲ್ಲಿ ಯಶಸ್ವಿಯಾಗಿದ್ದಾರೆ.

Advertisement

2012ರ ಚುನಾವಣೆಯಲ್ಲಿ ಶೂನ್ಯ ಗಳಿಸಿದ್ದ ಬಿಜೆಪಿ ಈ ಬಾರಿ 21 ಸ್ಥಾನ ಗಳಿಸಿದೆ. ತನ್ನ ನೇತೃತ್ವದ ಎನ್‌ಡಿಎ ಪಾಳೆಯದಲ್ಲಿರುವ ಎನ್‌ಪಿಎಫ್, ಎನ್‌ಪಿಪಿ, ಎಲ್‌ಜೆಪಿ ಹಾಗೂ ಪಕ್ಷೇತರರ ಬೆಂಬಲ ಪಡೆದು ಸರ್ಕಾರ ರಚಿಸುವ ವಿಶ್ವಾಸವನ್ನೂ ವ್ಯಕ್ತಪಡಿಸಿದೆ. ಕಳೆದ ವಿಧಾನಸಭೆ ಚುನಾವಣೆವರೆಗೂ ಕಾಂಗ್ರೆಸ್‌ನಲ್ಲಿದ್ದ ಪಿ.ಎ.ಸಂಗ್ಮಾ ಈ ಬಾರಿ
ತಮ್ಮದೇ ನ್ಯಾಶನಲ್‌ ಪೀಪಲ್ಸ್‌ ಪಾರ್ಟಿ (ಎನ್‌ಪಿಪಿ) ರಚಿಸುವ ಮೂಲಕ ಕಣಕ್ಕಿಳಿದಿದ್ದರು. ಆದರೆ, ಮೊದಲ
ಚುನಾವಣೆಯಲ್ಲಿಯೇ ನಾಲ್ಕು ಸ್ಥಾನಗಳನ್ನು ಮಾತ್ರ ಗೆದ್ದಿದ್ದರೂ ಸರ್ಕಾರ ರಚನೆಗೆ ಕಿಂಗ್‌ ಮೇಕರ್‌ ಆಗಿ ಹೊರಹೊಮ್ಮಿದ್ದಾರೆ.

ಎನ್‌ಡಿಎ ಅಂಗಪಕ್ಷವಾಗಿರುವ ನಾಗಾ ಪೀಪಲ್ಸ್‌ ಫ್ರಂಟ್‌ (ಎನ್‌ಪಿಎಫ್) ಮತ್ತೆ ನಾಲ್ಕು ಸ್ಥಾನಗಳಲ್ಲಿ ಜಯ ಗಳಿಸಿದೆ. ಈ
ಮೂಲಕ ಸರ್ಕಾರ ರಚಿಸಲು ಬಿಜೆಪಿಗೆ ಪ್ರಮುಖ ಆಧಾರ ಸ್ಥಂಭವಾಗಲಿದೆ. ಕೇಂದ್ರ ಸರ್ಕಾರದಲ್ಲಿ ಮಂತ್ರಿಯಾಗಿರುವ
ರಾಮ್‌ ವಿಲಾಸ್‌ ಪಾಸ್ವಾನ್‌ ನೇತೃತ್ವದ ಎಲ್‌ಜೆಪಿ ಕಳೆದ ಬಾರಿಯಂತೆ ಒಂದು ಸ್ಥಾನದಲ್ಲಿ ವಿಜಯಪತಾಕೆ ಹಾರಿಸಿದೆ.
ಬಿಜೆಪಿ ಸರ್ಕಾರ ರಚಿಸಲು ಮುಂದಾದರೆ ಅನಿವಾರ್ಯ ಮಿತ್ರ ಪಕ್ಷವಾಗಿದೆ.

ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಕೇವಲ ಒಂದು ಕ್ಷೇತ್ರದಲ್ಲಿ ಮಾತ್ರ ಗೆದ್ದಿದೆ. ಈ ಮೂಲಕ ರಾಜ್ಯ
ರಾಜಕೀಯದಲ್ಲಿ ನಗಣ್ಯವಾಗಿದೆ. ಪಕ್ಷಗಳ ಅಬ್ಬರದ ಮಧ್ಯೆಯೂ ಓರ್ವ ಪಕ್ಷೇತರ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. ಬಿಜೆಪಿ ಸರ್ಕಾರ ರಚನೆಗೆ ಮುಂದಾದರೆ ಮಹತ್ವ ಪಡೆಯಲಿದ್ದಾರೆ.
**
ಅತಂತ್ರ ಮಧ್ಯೆ ಮುಂದೇನು?
ಮಣಿಪುರಿಗಳು ಮತ್ತೆ ಅತಂತ್ರ ಆಡಳಿತಕ್ಕೆ ತೀರ್ಪು ನೀಡಿದ್ದಾರೆ. ಪ್ರಮುಖ ಪಕ್ಷಗಳಾದ ಕಾಂಗ್ರೆಸ್‌ ಹಾಗೂ ಬಿಜೆಪಿಗೆ
ಅಧಿಕಾರ ರಚಿಸಲು ಪ್ರಾದೇಶಿಕ ಹಾಗೂ ಚಿಕ್ಕ ಪಕ್ಷಗಳ ಬೆಂಬಲ ಪಡೆಯುವುದು ಅನಿವಾರ್ಯವಾಗಿದೆ. ಸದ್ಯಕ್ಕೆ ಅವರೇ ಕಿಂಗ್‌ ಮೇಕರ್‌ ಆಗಿರಲಿದ್ದಾರೆ.

ಚುನಾವಣೆಯಲ್ಲಿ ಪ್ರಸ್ತುತ 21 ಸ್ಥಾನಗಳನ್ನು ಗೆದ್ದಿರುವ ಬಿಜೆಪಿ ಸರ್ಕಾರ ರಚಿಸುವ ವಿಶ್ವಾಸ ವ್ಯಕ್ತಪಡಿಸಿದೆ. ಈಗಾಗಲೇ
ಬಿಜೆಪಿ ನೇತೃತ್ವದ ಎನ್‌ಡಿಎ ಪಾಳೆಯದಲ್ಲಿರುವ ಎನ್‌ಪಿಎಫ್ (ನಾಗಾ ಪೀಪಲ್ಸ್‌ ಫ್ರಂಟ್‌) ಹಾಗೂ ಎನ್‌ಪಿಪಿ (ನ್ಯಾಶನಲ್‌ ಪೀಪಲ್ಸ್‌ ಪಾರ್ಟಿ) ತಲಾ ನಾಲ್ಕು ಸ್ಥಾನಗಳು ಮತ್ತು ಎಲ್‌ಜೆಪಿ (ಲೋಕ ಜನಶಕ್ತಿ ಪಾರ್ಟಿ) ಒಂದು ಸ್ಥಾನ ಗೆದ್ದಿದ್ದು, ಬಿಜೆಪಿ ಸರ್ಕಾರಕ್ಕೆ ಬೆಂಬಲ ವ್ಯಕ್ತಪಡಿಸುವ ನಿರೀಕ್ಷೆಯಿದೆ. ಒಂದು ಪಕ್ಷೇತರ ಸ್ಥಾನವಿದ್ದು, ಈ ಬೆಂಬಲವನ್ನೂ ಪಡೆಯಲು ಬಿಜೆಪಿ ಯತ್ನಿಸಬಹುದು. ಹೀಗಾದಲ್ಲಿ ಬಹುಮತಕ್ಕೆ ಅಗತ್ಯವಾದ ಮ್ಯಾಜಿಕ್‌ ಸಂಖ್ಯೆ 31 ಸಾಧ್ಯವಾಗಲಿದ್ದು, ಬಿಜೆಪಿ ಅಧಿಕಾರಕ್ಕೇರಲಿದೆ. ಇದೇ ವಿಶ್ವಾಸದಲ್ಲಿರುವ ಪಕ್ಷದ ರಾಷ್ಟ್ರಾಧ್ಯಕ್ಷ ಅಮಿತ್‌ ಶಾ, ಮಣಿಪುರದಲ್ಲಿ ಬಿಜೆಪಿಯೇ ಅಧಿಕಾರ ರಚಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Advertisement

ಕಾಂಗ್ರೆಸ್‌ಗೂ ಇದೆ ಅವಕಾಶ: ಈಗಾಗಲೇ 28 ಸ್ಥಾನಗಳನ್ನು ಗೆದ್ದು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಕಾಂಗ್ರೆಸ್‌ಗೆ ಓಕ್ರಂ ಇಬೋಬಿ ಸಿಂಗ್‌ ಸಮರ್ಥ ನಾಯಕತ್ವವಿದೆ. ಆದರೆ, ಬಹುಮತದ ಮ್ಯಾಜಿಕ್‌ ಸಂಖ್ಯೆ ಸಾಧಿಸಲು
ಇನ್ನೂ 3 ಶಾಸಕರ ಬೆಂಬಲ ಅಗತ್ಯ. ಇದಕ್ಕಾಗಿ ತಮ್ಮ ಬಹುಕಾಲದ ಮಿತ್ರನಾಗಿದ್ದು, ರಾಷ್ಟ್ರಪತಿ ಸ್ಥಾನಕ್ಕೆ ಸ್ಪರ್ಧಿಸಲು
ಯತ್ನಿ ಪಕ್ಷದಿಂದ ಹೊರದಬ್ಬಿಸಿಕೊಂಡಿರುವ ಪಿ.ಎ.ಸಂಗ್ಮಾ ಬೆಂಬಲ ಪಡೆಯಬೇಕಾಗುತ್ತದೆ. ಸಂಗ್ಮಾ ನೇತೃತ್ವದ ಎನ್‌ಪಿಪಿ 4 ಸ್ಥಾನಗಳನ್ನು ಗೆದ್ದಿದ್ದು, ಪ್ರಮುಖ ಸ್ಥಾನದ ಷರತ್ತು ವಿಧಿಸಿ ಬೆಂಬಲ ನೀಡಬಹುದು. ಆಗ ಕಾಂಗ್ರೆಸ್‌ ಮತ್ತೆ
ಅಧಿಕಾರಕ್ಕೇರುವ ಅವಕಾಶವಿದೆ.

Advertisement

Udayavani is now on Telegram. Click here to join our channel and stay updated with the latest news.