Advertisement

Manipal: ಮಣ್ಣಪಳ್ಳ ಕೆರೆಯೊಡಲಿಗೆ ತ್ಯಾಜ್ಯ;ಡಸ್ಟ್‌ಬಿನ್‌ ಅಳವಡಿಕೆ ಮಾಡಿದ್ದರೂ ಉಪಯೋಗ ಶೂನ್ಯ

04:56 PM Oct 08, 2024 | Team Udayavani |

ಮಣಿಪಾಲ: ನಗರ ವ್ಯಾಪ್ತಿ ಜನರಿಗೆ ಸುಂದರ ವಿಹಾರ ತಾಣವಾಗಿರುವ ಮಣ್ಣಪಳ್ಳ ಕೆರೆ ಕಲುಷಿತಗೊಳ್ಳುವ ಮುನ್ನ ಎಚ್ಚೆತ್ತುಕೊಳ್ಳಬೇಕಿದೆ. ಇಲ್ಲವಾದರೆ ಕೆಲವೇ ದಿನಗಳಲ್ಲಿ ಇಲ್ಲಿನ ವಾತಾವರಣ ಸಂಪೂಣ ಹಾಳಾಗುವ ಸಾಧ್ಯತೆಯೂ ಇದೆ.
ಮಣಿಪಾಲ,ಉಡುಪಿ ಸುತ್ತಮುತ್ತಲಿನ ಜನಕ್ಕೆ ಇಲ್ಲಿನ ವಾಯು ವಿಹಾರ ಅಚ್ಚುಮೆಚ್ಚು. ಸುಂದರ ಪರಿಸರ ವ್ಯವಸ್ಥೆ ಹೊಂದಿರುವ ಈ ಕೆರೆ ಮುಂದಿನ ದಿನಗಳಲ್ಲಿ ಕಲುಷಿತಗೊಳ್ಳುವ ಆತಂಕ ಎದುರಾಗುತ್ತಿದೆ.

Advertisement

ಈಗಾಗಲೆ ಕೆರೆಯ ಒಡಲಿಗೆ ಅಪಾರ ಪ್ರಮಾಣದ ತ್ಯಾಜ್ಯ ಸೇರುತ್ತಿದೆ. ಬೆಳಗ್ಗೆ, ಸಂಜೆ ನಿತ್ಯ ವಿಹಾರಕ್ಕೆ ಹೋಗುವರು ಹೊರತುಪಡಿಸಿ ಹಗಲು ಹೊತ್ತಿನಲ್ಲಿ ಪ್ರವಾಸಿಗರ ರೀತಿ ಬರುವ ಕೆಲವರು ತಿಂಡಿ, ಪಾನಿಯಗಳನ್ನು ಸೇವಿಸಿ ಅಲ್ಲಲ್ಲಿಯೆ ಬಿಸಾಡುತ್ತಾರೆ. ಕೆರೆಯಲ್ಲಿ ನಿರ್ವಹಣೆ ಸಮಿತಿ ಡಸ್ಟ್‌ಬಿನ್‌ ಅಳವಡಿಕೆ ಮಾಡಿದ್ದರೂ ಇದರ ಉಪಯೋಗ ಮಾಡದೇ ವಾಕಿಂಗ್‌ ಟ್ರ್ಯಾಕ್‌ ಪಕ್ಕದಲ್ಲಿಯೇ ಕಸ ಎಸೆಯಲಾಗುತ್ತಿದೆ.

ಕೆರೆ ಮತ್ತು ಬದಿಯಲ್ಲಿರುವ ತೋಡಿಗೆ ತ್ಯಾಜ್ಯ ಎಸೆಯುತ್ತಾರೆ. ಕಳೆದ ವರ್ಷ ಮಳೆ ಮುಗಿದು ಬೇಸಗೆ ಆರಂಭವಾಗುತ್ತಿದ್ದಂತೆ, ಮಣಿಪಾಲ ಪರಿಸರದ ಕಟ್ಟಡ, ಮನೆಗಳ ಕೊಳಚೆ ನೀರು ಮಣ್ಣಪಳ್ಳ ಒಡಲು ಸೇರುತ್ತಿರುವುದು ಆತಂಕಕಾರಿಯಾಗಿತ್ತು. ಈ ವರ್ಷವು ಇದೆ ಆತಂಕ ಮತ್ತೆ ಕಾಡುತ್ತಿದೆ. ಪ್ರಾಕೃತಿಕವಾಗಿ ನಿರ್ಮಾಣಗೊಂಡ ದೊಡ್ಡ ಕೆರೆಯನ್ನು ಈ ಹಿಂದೆ ನಗರಾಭಿವೃದ್ಧಿ ಪ್ರಾಧಿಕಾರ ಅಭಿವೃದ್ಧಿ ಪಡಿಸಿತ್ತು. ಕೆರೆಯಲ್ಲಿ ವರ್ಷಪೂರ್ತಿ ಇರುವ ನೀರು ಕಣ್ಮನ ಸೆಳೆಯುತ್ತದೆ. ಆದರೆ ಇಲ್ಲಿನ ಸೌಂದರ್ಯವನ್ನು ಹಾಳುಗೆಡಹುವ ಮನಸ್ಥಿತಿ ಕೆಲವರಲ್ಲಿದೆ. ಕೆರೆಯ ನೀರಿನಲ್ಲಿ ಪ್ಲಾಸ್ಟಿಕ್‌ ಕವರ್‌ಗಳನ್ನು ಬಿಸಾಡಿರುವುದು ಎದ್ದು ತೋರುತ್ತದೆ. ಈ ಪರಿಸರದ ಸುತ್ತಮುತ್ತ ಮಧ್ಯರಾತ್ರಿ ಮದ್ಯದ ‘ಪಾರ್ಟಿ’ಯೂ ನಡೆಯುತ್ತಿದ್ದು, ಮದ್ಯ, ಬಿಯರ್‌ ಬಾಟಲಿಗಳು ನೀರಿನಲ್ಲಿ ತೇಲಾಡುತ್ತಿವೆ. ಚಾಕೊಲೆಟ್‌, ಬಿಸ್ಕೆಟ್‌, ಚಾಟ್ಸ್‌ ಮಾಸಾಲ ಪ್ಯಾಕ್ಸ್‌ ತಿಂಡಿಗಳ ರ್ಯಾಪರ್‌ಗಳು ಕೆರೆಯ ಒಡಲನ್ನು ಸೇರುತ್ತಿರುವುದು ಕಳವಳಕಾರಿಯಾಗಿದೆ.

ಜಲಚರಗಳಿಗೆ ಮಾರಕ
ಪ್ಲಾಸ್ಟಿಕ್‌ ತ್ಯಾಜ್ಯ ಸೇರಿ ಕೆರೆ ಕಲುಷಿತವಾಗುವುದರಿಂದ ಕೆರೆಯನ್ನೇ ನಂಬಿದ ಜಲಚರಗಳಿಗೆ ಕಂಟವಾಗುತ್ತಿದೆ. ಈ ವಿಶಾಲ ಮತ್ತು ಬೃಹತ್‌ ಕೆರೆಯಲ್ಲಿ ಹಲವು ವೈವಿಧ್ಯಮಯ ಜಲಚರಗಳಿವೆ. ಇವುಗಳಿಗೆ ಹಾನಿಯಾಗದಂತೆ ಕ್ರಮವಹಿಸಬೇಕಿದೆ. ಪರಿಸರದಲ್ಲಿ ಅಂತರ್ಜಲ ವೃದ್ಧಿಗೂ ಈ ಕೆರೆ ಸಹಕಾರಿಯಾಗಿದ್ದು, ಕೆರೆ ಕಲುಷಿತಗೊಂಡಲ್ಲಿ ಮಣಿಪಾಲ ಅಂತರ್ಜಲವು ಕಲುಷಿತಗೊಳ್ಳುವ ಸಾಧ್ಯತೆ ಹೆಚ್ಚಿದೆ. ಇಲ್ಲಿಗೆ ವಿದೇಶಗಳಿಂದ ವಿವಿಧ ಜಾತಿಯ ಪಕ್ಷಿಗಳು ವಲಸೆ ಬರುತ್ತವೆ. ಜೀವವೈವಿಧ್ಯತೆ ಸಂರಕ್ಷಣೆ ನೆಲೆಯಲ್ಲಿ ಈ ಬಗ್ಗೆ ಕಟ್ಟುನಿಟ್ಟಿನ ಕ್ರಮವಹಿಸಬೇಕಿದೆ.

Advertisement

ಸೂಕ್ತ ಕ್ರಮ
ಮಣ್ಣಪಳ್ಳ ಕೆರೆ ಪರಿಸರದ ಸ್ವತ್ಛತೆಗೆ ನಿರಂತರ ಕ್ರಮವಹಿಸಲಾಗುತ್ತಿದೆ. ಕೆಲವರು ಡಸ್ಟ್‌ಬಿನ್‌ ತ್ಯಾಜ್ಯ ಎಸೆಯದೇ ಕೆರೆಗೆ ಎಸೆಯುತ್ತಾರೆ. ಇದಕ್ಕೆ ಕಡಿವಾಣ ಹಾಕಬೇಕಿದೆ. ಈ ನಿಟ್ಟಿನಲ್ಲಿ ಜಾಗೃತಿಯೂ ಮೂಡಿಸಲಾಗುವುದು. ಮಳೆ ನೀರು ಹರಿಯುವ ತೋಡಿನಲ್ಲಿ ತ್ಯಾಜ್ಯವು ಕೆರೆಗೆ ಸೇರದಂತೆ ಸೂಕ್ತ ಕ್ರಮವಹಿಸಲಾಗುವುದು.
-ಕಲ್ಪನಾ ಸುಧಾಮ, ನಗರಸಭೆ ಸದಸ್ಯರು

ಆಡಳಿತ ವ್ಯವಸ್ಥೆ ಗಮನವಹಿಸಬೇಕು
ಮಣ್ಣಪಳ್ಳ ಕೆರೆಯು ಮಣಿಪಾಲ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅಂತರ್ಜಲ ವೃದ್ದಿಗೆ ಸಹಕಾರಿಯಾಗಿದೆ. ಈ ಕೆರೆಗೆ ಪ್ಲಾಸ್ಟಿಕ್‌, ಬಾಟಲಿ ತ್ಯಾಜ್ಯಗಳನ್ನು ಯಾರು ಎಸೆಯದಂತೆ ಕ್ರಮವಹಿಸಬೇಕು. ಕೆರೆ ಕಲುಷಿತಗೊಳ್ಳದಂತೆ ವ್ಯವಸ್ಥಿತ ರೀತಿಯಲ್ಲಿ ನಿರ್ವಹಣೆ ಮಾಡುವಂತೆ ಆಡಳಿತ ವ್ಯವಸ್ಥೆ ಗಮನವಹಿಸಬೇಕು. ಇದು ಎಂದಿಗೂ ಸ್ವತ್ಛ, ಸುಂದರ ಕೆರೆಯಾಗಿರಬೇಕು.
-ಡಾ| ಉದಯ ಶಂಕರ್‌, ಭೂಗರ್ಭ ಶಾಸ್ತ್ರಜ್ಞರು, ಮಣಿಪಾಲ

Advertisement

Udayavani is now on Telegram. Click here to join our channel and stay updated with the latest news.

Next