ಉಡುಪಿ: ಮಣಿಪಾಲದ ಹಸ್ತ ಶಿಲ್ಪ ಹಾಗೂ ಸಂಸ್ಕೃತಿ ಗ್ರಾಮದ ನಿರ್ಮಾತೃ ಯು.ವಿಜಯ್‌ನಾಥ ಶೆಣೈ ಅವರು ವಾರ್ಧಕ್ಯದಿಂದ ಗುರುವಾರ ಬೆಳಗ್ಗೆ ಇಹಲೋಕ ತ್ಯಜಿಸಿದ್ದಾರೆ. ಅವರಿಗೆ 83 ವರ್ಷ ಪ್ರಾಯವಾಗಿತ್ತು. ನಿವೃತ್ತ ಸಿಂಡಿಕೇಟ್ ಬ್ಯಾಂಕ್ ಉದ್ಯೋಗಿಯಾಗಿದ್ದ
ಶೆಣೈ ಅವರು ಪಾರಂಪರಿಕ ವಾಸ್ತು ವೈಭವಿರುವ ಸಾಂಪ್ರದಾಯಿಕ ಕಟ್ಟಡಗಳನ್ನು ತಂದು ಮಣಿಪಾಲದ ಸಂಸ್ಕೃತಿ ಗ್ರಾಮದಲ್ಲಿ 6 ಎಕರೆ ಪ್ರದೇಶದಲ್ಲಿ ಅದ್ಭುತವೆನಿಸುವ ಹೆರಿಟೇಜ್ ವಿಲೇಜ್ ನಿರ್ಮಾಣ ಮಾಡಿದ್ದರು. ಅನಂತನಗರದಲ್ಲಿ ಅತ್ಯಪರೂಪದ ವಾಸ್ತುವಿನ್ಯಾಸದ ಹಸ್ತಶಿಲ್ಪ ಎಂಬ ಮನೆ, ವಿಶೇಷ ಜಾನಪದ ಕಲಾ ಪ್ರಕಾರ, ಅನೇಕ ಚಿತ್ರ ಗ್ಯಾಲರಿಗಳನ್ನು ಸಂಗ್ರಹಿಸಿದ ಅಪರೂಪದ ಸಾಧಕ ಶೆಣೈ ಅವರಾಗಿದ್ದರು.
ಅಪೂರ್ವ ಕಲಾಸಕ್ತರಾಗಿದ್ದ ಶೆಣೈ ಅವರು ಉಡುಪಿಯಲ್ಲಿ 60 ರ ದಶಕದಲ್ಲಿ ಸಂಗೀತ ಸಭಾ ಎಂಬ ಸಾಂಸ್ಕೃತಿಕ ಸಂಘಟನೆಯನ್ನು ಸ್ಥಾಪಿಸಲು ಕಾರಣೀಭೂತರಾಗಿದ್ದರು.
ಸಂಗೀತಾ ಸಭಾ ಸಂಸ್ಥೆಯು ಪಂಡಿತ್ ಭೀಮ್ ಸೇನ್ ಜೋಷಿ , ಸಿತಾರ್ ಮಾಂತ್ರಿಕ ರವಿಶಂಕರ್ ಮುಂತಾದ ಮಹೋನ್ನತ ಸಂಗೀತ ದಿಗ್ಗಜರ ಕಾರ್ಯಕ್ರಮಗಳನ್ನು ಎರ್ಪಡಿಸಿ ಪ್ರಸಿದ್ಧವಾಗಿತ್ತು.
ಬ್ಯಾಂಕ್ ಉದ್ಯೋಗದಿಂದ ನಿವೃತ್ತರಾದ ಬಳಿಕ ನಶಿಸಿ ಹೋಗುತ್ತಿದ್ದ ಚಾರಿತ್ರಿಕ ,ಪಾರಂಪರಿಕ ವಾಸ್ತು ಶೈಲಿಯ ಮನೆಗಳು ಮತ್ತು ಭಂಡಸಾಲೆಗಳ ಸಂರಕ್ಷಣೆಗಾಗಿ ಹಗಳಿರುಳು ಶ್ರಮಿಸಿದ ಚೇತನ ಶೆಣೈ ಅವರಾಗಿದ್ದರು.
ಇವರ ಶ್ರಮದ ಫಲವಾಗಿ ಮಣಿಪಾಲದ ಸಂಸ್ಕೃತಿ ಗ್ರಾಮದಲ್ಲಿರುವ ಹೆರಿಟೇಜ್ ವಿಲೆಜ್‌ನಲ್ಲಿ 30 ಕ್ಕೂ ಹೆಚ್ಚಿನ ಪಾರಂಪರಿಕ ಮನೆಗಳನ್ನು ನಾವಿಂದು ಕಾಣಬಹುದಾಗಿದೆ. ಡೆಕ್ಕನ್ ನವಾಬರ ಮನೆ, ನವಾಯತರ ಮನೆ, ಕೋಣಿ ಕಾರಂತರ ಮನೆ ,ಜಂಗಮ ಮಠದ ಮನೆ ಅವುಗಳ ಪೈಕಿ ಅತ್ಯಾಕರ್ಷಣೀಯವಾಗಿವೆ.
ಶೆಣೈ ಅವರ ನಿಧನಕ್ಕೆ ಗಣ್ಯರು ತೀವ್ರ ಸಂತಾಪ ಸೂಚಿಸಿದ್ದಾರೆ.
ಇದನ್ನೂ ಓದಿ:
►ಹಿರಿಯರ ವೈಭವದ ಬದುಕು ಸಾರುವ ಮಣಿಪಾಲದ ಹೆರಿಟೇಜ್ ವಿಲೇಜ್: //bit.ly/2mm8vGs