ಮಣಿಪಾಲ: ನನ್ನ ಜೀವನದ ಹಾದಿ ಅನೇಕ ರಮ್ಯ ರೋಚಕ ತಿರುವುಗಳಿಂದ ಕೂಡಿರುವ ಕಾಡಿನ ಪಯಣದಂತೆ. ನನ್ನನ್ನು ಕೈಹಿಡಿದು ಕೊನೆಗೆ ಮಣಿಪಾಲದ ಈ ವೇದಿಕೆ ಮೇಲೆ ನಿಲ್ಲಿಸಿದೆ. ಈ ಯಶಸ್ಸಿನಲ್ಲಿ ಕೈ ಹಿಡಿದು ನಡೆಸಿದ ಅನೇಕ ಮಹಾನುಭಾವರು, ಸಂಸ್ಥೆಗಳು, ದೈವಗಳ ಕೃಪೆಯೂ ಇದೆ. ಅಂತಹ ಪ್ರಾತಃಸ್ಮರಣೀಯರಲ್ಲಿ ನನ್ನ ಬದುಕಿಗೆ ಅರ್ಥವಂತಿಕೆ ತಂದ ಸಂಗತಿಗಳಲ್ಲಿ ಮಣಿ ಪಾಲದ “ಉದಯವಾಣಿ’ ಪಾತ್ರ ಹಿರಿದು ಎಂದು ಹಿರಿಯ ಚಲನಚಿತ್ರ ನಟಿ ಡಾ| ಜಯಮಾಲಾ ರಾಮಚಂದ್ರ ಹೇಳಿದರು.
ಅಕಾಡೆಮಿ ಆಫ್ ಜನರಲ್ ಎಜುಕೇಶನ್, ಮಾಹೆ, ಮಣಿಪಾಲ್ ಎಜುಕೇಶನ್ ಆ್ಯಂಡ್ ಮೆಡಿಕಲ್ ಗ್ರೂಪ್, ಮಣಿಪಾಲ್ ಮೀಡಿಯ ನೆಟ್‌ವರ್ಕ್ ಲಿ. ಡಾ| ಟಿಎಂಎ ಪೈ ಫೌಂಡೇಶನ್ ವತಿಯಿಂದ ಶುಕ್ರವಾರ ಮಣಿಪಾಲ ಗ್ರೀನ್ಸ್‌ನಲ್ಲಿ ನಡೆದ ಹೊಸ ವರ್ಷದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.
ನಾನು ಚಿತ್ರರಂಗಕ್ಕೆ ಬಂದ ದಿನದಿಂದಲೂ ನನ್ನ ಬೆಳವಣಿಗೆಯನ್ನು ಪ್ರೋತ್ಸಾಹಿಸಿದ್ದಲ್ಲದೆ ನನ್ನ ಓರೆಕೋರೆಗ ಳನ್ನು ಉದಯವಾಣಿ ಗುರುತಿಸಿ ತಿದ್ದಿದೆ. ಈ ಋಣವನ್ನು ತೀರಿಸಲು ಸಾಧ್ಯವಿಲ್ಲ ಎನ್ನುವಾಗ ಮತ್ತೆ ಈ ಪ್ರಶಸ್ತಿ ಮೂಲಕ ನನ್ನನ್ನು ಮತ್ತೆ ಮಹಾ ಋಣಭಾರವನ್ನು ಮಣಿಪಾಲದ ಸಂಸ್ಥೆಗಳು ಹೊರಿಸಿವೆ ಎಂಬ ಮಾತು ಉತ್ಪ್ರೇಕ್ಷೆಯಲ್ಲ ಎಂದು ಅವರು ಜಯಮಾಲಾ ಹೇಳಿದರು.
ದಕ್ಷಿಣ ಭಾರತದಲ್ಲಿ ಗಂಡು ಆಳ್ವಿ ಕೆಯ ಕ್ಷೇತ್ರವಾಗಿದ್ದ ಚಲನಚಿತ್ರವಾಣಿಜ್ಯ ಮಂಡಳಿಗೆ ಅಧ್ಯಕ್ಷೆಯಾಗಿ ಆಯ್ಕೆ ಯಾದಾಗ ಕನ್ನಡ ಚಿತ್ರರಂಗದ ಅಮೃತ ಮಹೋತ್ಸವವನ್ನು ಮುನ್ನಡೆಸಬೇಕಾದ ಸವಾಲು ಬಂದಾಗಲೂ ನನಗೆ ಒಳ ಧೈರ್ಯವಾಗಿ ಇದ್ದದ್ದು ಉದಯವಾಣಿ ಬೆಂಬಲ. ಉದಯವಾಣಿಯಿಂದ ಬದು ಕನ್ನು ಕಲಿತ ಸಹಸ್ರಾರು ಮಂದಿಯಲ್ಲಿ ನಾನೂ ಒಬ್ಬಳು ಎಂಬುದು ಹೆಮ್ಮೆಯ ವಿಷಯ ಎಂದರು.
ಇತರ ಪುರಸ್ಕೃತರಾದ ಇಂಡಿಯನ್ ಓವರ್ಸಿಸ್ ಬ್ಯಾಂಕ್ ನಿವೃತ್ತ ಅಧ್ಯಕ್ಷ ಡಾ| ಎಂ. ನರೇಂದ್ರ, ಮಣಿಪಾಲ ಕೆಎಂಸಿ ಮೆಡಿಸಿನ್ ವಿಭಾಗದ ಪ್ರಾಧ್ಯಾಪಕ ಡಾ| ಎಚ್. ಮಂಜುನಾಥ ಹಂದೆ, ಹಿರಿಯ ಕೃಷಿಕ ಬಿ.ಕೆ. ದೇವ ರಾವ್, ಮಂಗಳೂರು ಕೆಎಂಸಿ ನಿವೃತ್ತ ಡೀನ್ ಡಾ| ಎಡ್ಕತೋಡಿ ಸಂಜೀವ ರೈ, ಪ್ರಶಸ್ತಿ ಪ್ರದಾನ ಮಾಡಿದ ಮಾಹೆ ಟ್ರಸ್ಟ್ ಅಧ್ಯಕ್ಷ ಡಾ| ರಂಜನ್ ಪೈ, ಟ್ರಸ್ಟಿ ವಸಂತಿ ಪೈ, ಎಂಎಂಎನ್‌ಎಲ್ ಕಾರ್ಯನಿರ್ವಾಹಕ ಅಧ್ಯಕ್ಷ ಟಿ. ಸತೀಶ್ ಯು. ಪೈ, ಡಾ| ಟಿಎಂಎ ಪೈ ಪ್ರತಿಷ್ಠಾನದ ಅಧ್ಯಕ್ಷ ಟಿ. ಅಶೋಕ್ ಪೈ, ಮಾಹೆ ಸಹಕುಲಾಧಿಪತಿ ಡಾ| ಎಚ್.ಎಸ್. ಬಲ್ಲಾಳ್, ಕುಲಪತಿ ಲೆ| ಜ| ಡಾ| ಎಂ.ಡಿ. ವೆಂಕಟೇಶ್ ಉಪಸ್ಥಿತರಿದ್ದರು.