Advertisement

ಮಣಿಪಾಲ: ನಿಫಾ ತಡೆಗೆ ಪ್ರಶ್ನಾವಳಿ, ತಪಾಸಣೆ

06:00 AM May 27, 2018 | Team Udayavani |

ಉಡುಪಿ: ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಗೆ ಕೇರಳದಿಂದ ಬರುವ ಹಾಗೂ ಇತರ ಕೆಲವು ಅಪರೂಪದ ರೋಗಲಕ್ಷಣಗಳನ್ನು ಹೊಂದಿರಬಹುದಾದ ರೋಗಿಗಳನ್ನು ವಿಶೇಷ ತಪಾಸಣೆಗೊಳ ಪಡಿಸುವ ಉದ್ದೇಶದಿಂದ ಆರಂಭಿಸಲಾದ ಸ್ಕ್ರೀನಿಂಗ್‌ ಸೆಂಟರ್‌ನಲ್ಲಿ ರೋಗಪತ್ತೆ ಪ್ರಕ್ರಿಯೆ ಆರಂಭಗೊಂಡಿದೆ. ನಿಫಾ ಕುರಿತು ವಿಶೇಷ ನಿಗಾ ಇರಿಸಲು ಜನರಲ್‌ ಮೆಡಿಸಿನ್‌ ಮತ್ತು ಕಮ್ಯುನಿಟಿ ಮೆಡಿಸಿನ್‌ ವಿಭಾಗದಿಂದ ಒಟ್ಟು ನಾಲ್ಕು ಮಂದಿ ವೈದ್ಯರನ್ನು ನಿಯೋಜಿಸಲಾಗಿದೆ.

Advertisement

ಆತಂಕ, ಗೊಂದಲಗಳನ್ನು ದೂರ ಮಾಡಲು, ಎಲ್ಲ ರೋಗಿಗಳ ಸುರಕ್ಷತೆಯನ್ನು ಖಾತರಿಪಡಿಸಲು ಹಾಗೂ ಸಕಾಲದಲ್ಲಿ ಅತ್ಯುನ್ನತ ರೀತಿಯ ಚಿಕಿತ್ಸೆ, ನೆರವು ಒದಗಿಸುವುದಕ್ಕಾಗಿ ಕೆಎಂಸಿ ಈ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದು, ರೈಲ್ವೇ ನಿಲ್ದಾಣದಲ್ಲಿಯೂ ಈ ಬಗ್ಗೆ ಸೂಚನಾ ಫ‌ಲಕಗಳನ್ನು ಅಳವಡಿಸಿದೆ ಎಂದು ಕೆಎಂಸಿ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಶ್ನಾವಳಿ
ಪ್ರಾಥಮಿಕ ಹಂತದಲ್ಲಿ ಸ್ಕ್ರೀನಿಂಗ್‌ ಸೆಂಟರ್‌ ಮತ್ತು ಹೆಲ್ಪ್ ಡೆಸ್ಕ್ನ ತಜ್ಞ ಸಿಬಂದಿ ರೋಗಿಗಳಿಗೆ ನಿಗದಿತ ಪ್ರಶ್ನೆಗಳನ್ನು ಕೇಳಿ ಮಾಹಿತಿ ಪಡೆದುಕೊಳ್ಳುತ್ತಾರೆ. ಅನಂತರ ಅಗತ್ಯವಿದ್ದಲ್ಲಿ ಅವರನ್ನು ತಪಾಸಣೆಗಾಗಿ ವೈದ್ಯರ ಬಳಿಗೆ ಕಳುಹಿಸಿಕೊಡಲಾಗುತ್ತದೆ. ತೆಗೆದು ಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆಯೂ ಸೂಕ್ತ ಮಾಹಿತಿ ನೀಡಲಾಗುತ್ತದೆ. ಚಿಕಿತ್ಸೆ ಅವಶ್ಯವಾದರೆ ಐಸೊಲೇಶನ್‌ ವಾರ್ಡ್‌ ಹಾಗೂ ತಜ್ಞರನ್ನು ಸನ್ನದ್ಧಗೊಳಿಸಲಾಗಿದೆ. ಶನಿವಾರ ಮತ್ತು ರವಿವಾರ ಹೆಚ್ಚಿನ ಮಂದಿಯನ್ನು ಪಾಸಣೆಗೊಳಪಡಿಸ
ಲಾಗಿದೆ. 

ಶೇಂದಿ ತೆಗೆಯುವವರಿಗೆ ಮಾಹಿತಿ
ಬಾವಲಿಗಳು ತಾಳೆ ಮರಗಳಲ್ಲಿ ಹೆಚ್ಚಾಗಿ ಇರುವುದರಿಂದ ಶೇಂದಿಗೂ ಅವುಗಳ ಸ್ಪರ್ಶವಾಗುವ, ಅವುಗಳು ಕುಡಿಯುವ ಸಾಧ್ಯತೆ ಇದೆ. ಹೀಗಾಗಿ ಶೇಂದಿ ತೆಗೆಯುವವರಿಗೂ ನಿಫಾ ಕುರಿತು ಜಾಗೃತಿ ಮೂಡಿಸುವ ಕಾರ್ಯ ಮೇ 26ರಂದು ಉಡುಪಿ ಜಿಲ್ಲಾ ಆರೋಗ್ಯ ಇಲಾಖೆಯ ಸರ್ವೇಕ್ಷಣಾ ಘಟಕದಲ್ಲಿ ನಡೆಯಿತು. ಶೇಂದಿ ತೆಗೆಯುವವರ ಸಂಘದ 15 ಮಂದಿಗೆ ಈ ಕುರಿತು ಮಾಹಿತಿ ನೀಡಲಾಯಿತು.

ಶೇಂದಿ ಸುರಕ್ಷಿತ
ಈ ಭಾಗದಲ್ಲಿ ತಾಳೆ ಮತ್ತು ತೆಂಗಿನ ಮರ ಹಾಗೂ ಬೈನೆ ಮರದಿಂದ ಶೇಂದಿ ತೆಗೆಯಲಾಗುತ್ತದೆ. ಆದರೆ ಅದನ್ನು ತೆಗೆಯುವಲ್ಲಿ 3 ಲೇಯರ್‌ಗಳಲ್ಲಿ ಭದ್ರವಾಗಿ ಮುಚ್ಚಲಾಗುತ್ತದೆ. ಬಾವಲಿ ಸಹಿತ ಯಾವುದೇ ಜೀವಿ ಅದನ್ನು ಸ್ಪರ್ಶಿಸಲು ಸಾಧ್ಯವಿಲ್ಲ ಎಂದು ಸಂಘದವರು ತಿಳಿಸಿದರು. ಆದಾಗ್ಯೂ ಸೂಕ್ತ ಮುನ್ನೆಚ್ಚರಿಕೆಗೆ ಸೂಚನೆ ನೀಡಲಾಯಿತು.
ಸುಮಾರು 200ರಷ್ಟು ಆಶಾ ಕಾರ್ಯಕರ್ತರಿಗೂ ತರಬೇತಿ ನೀಡಲಾಗಿದೆ. ಶೀಘ್ರದಲ್ಲಿಯೇ ನರ್ಸಿಂಗ್‌
ವಿದ್ಯಾರ್ಥಿಗಳು, ರಬ್ಬರ್‌ ಟ್ಯಾಪಿಂಗ್‌ ಮಾಡುವವ
ರಿಗೂ ಮಾಹಿತಿ ನೀಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಆಗಸ್ಟ್‌ನಲ್ಲಿಯೇ ಸಿದ್ಧವಾಗಿದ್ದೆವು
ನಿಫಾ ವೈರಸ್‌ ಸೋಂಕನ್ನು ಎದುರಿಸಲು ಕಳೆದ ಆಗಸ್ಟ್‌ನಲ್ಲಿಯೇ ಸಿದ್ಧವಾಗಿದ್ದೆವು. ಮಣಿಪಾಲದ ಎಂಸಿವಿಆರ್‌ನಲ್ಲಿರುವ 41 ಮಂದಿ ಕೂಡ ಈ ಬಗ್ಗೆ ತರಬೇತಿ ಪಡೆದುಕೊಂಡಿದ್ದೆವು. ಈಗ 7 ಮಂದಿ ಕೋಯಿಕೋಡ್‌ನ‌ಲ್ಲಿ ಸೇವೆ ಸಲ್ಲಿಸುತ್ತಿದ್ದೇವೆ ಎಂದು ಡಾ| ಅರುಣ್‌ ಕುಮಾರ್‌ “ಉದಯವಾಣಿ’ಗೆ ತಿಳಿಸಿದ್ದಾರೆ. 

ನಿಯಂತ್ರಣ 48 ದಿನಗಳ ಅನಂತರವಷ್ಟೇ ಘೋಷಣೆ
ನಿಫಾದ ಕೊನೆಯ ಪಾಸಿಟಿವ್‌ ಪ್ರಕರಣ ವರದಿಯಾಗಿ ಅನಂತರದ 48 ದಿನಗಳ ಕಾಲ ಯಾವುದೇ ಪ್ರಕರಣ ವರದಿಯಾಗದಿದ್ದರೆ ಮಾತ್ರ ನಿಫಾ ಸೋಂಕು ಪೂರ್ತಿಯಾಗಿ ನಿಯಂತ್ರಣಕ್ಕೆ ಬಂದಿದೆ ಎಂದು ಘೋಷಿಸಬಹುದು. ಕೇರಳದಲ್ಲಿ ಇದು ಜನಸಮೂಹದಲ್ಲಿ ಹರಡಿಲ್ಲ. ಚಿಕಿತ್ಸೆ ನೀಡುವ ಆಸ್ಪತ್ರೆಗಳಲ್ಲಿ ಹೆಚ್ಚಿನ ಎಚ್ಚರಿಕೆ ವಹಿಸಲು ಸೂಚಿಸಿದ್ದೇನೆ. ಅದರಂತೆಯೇ ಸರಕಾರ ಕ್ರಮ ಕೈಗೊಂಡಿದೆ. ಹಾಗಾಗಿ ಶೀಘ್ರ ಪೂರ್ಣ ನಿಯಂತ್ರಣಕ್ಕೆ ಬರುವ ನಿರೀಕ್ಷೆ ಇದೆ. ಆದರೆ ನಿರ್ದಿಷ್ಟವಾಗಿ ಹೇಳಲಾಗದು. ಮೊದಲ ಪ್ರಕರಣಕ್ಕೆ ಯಾವುದು ಕಾರಣ ಎಂಬುದು ಇನ್ನೂ ಪತ್ತೆಯಾಗಿಲ್ಲ ಎಂದು ಕೇರಳ ಸರಕಾರದ ಜತೆಗೆ ಸೋಂಕು ನಿಯಂತ್ರಣ ಕಾರ್ಯದಲ್ಲಿ ಪ್ರಮುಖವಾಗಿ ತೊಡಗಿಕೊಂಡಿರುವ ಮಣಿಪಾಲದ ಮಣಿಪಾಲ್‌ ಸೆಂಟರ್‌ ಫಾರ್‌ ವೈರಸ್‌ ಸಿಸರ್ಚ್‌ (ಎಂಸಿವಿಆರ್‌) ಮುಖ್ಯಸ್ಥ ಡಾ | ಅರುಣ್‌ ಕುಮಾರ್‌ ಶನಿವಾರ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next