ಮಣಿಪಾಲ: ಮಣಿಪಾಲ ಮೀಡಿಯಾ ನೆಟ್‌ವರ್ಕ್ ಲಿ. ವತಿಯಿಂದ ಹೊರತಂದ “ನಾಡೊಲುಮೆಯ ಬಂಟರು’ ತರಂಗ ವಿಶೇಷ ಸಂಚಿಕೆಯನ್ನು ಬುಧವಾರ ಮಣಿಪಾಲ ಉದಯವಾಣಿ ಕೇಂದ್ರ ಕಚೇರಿಯಲ್ಲಿ ಎಂಎಂಎನ್‌ಎಲ್‌ನ ಚೇರ್‌ಮನ್ ಟಿ. ಸತೀಶ್ ಯು. ಪೈ ಅವರು ಬಿಡುಗಡೆಗೊಳಿಸಿದರು.
ಎಂಎಂಎನ್‌ಎಲ್‌ನ ಆಡಳಿತ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿನೋದ್ ಕುಮಾರ್ ಅವರು ಮಾತನಾಡಿ, ಬಂಟ ಸಮುದಾಯವು ಎಲ್ಲ ಕ್ಷೇತ್ರಗಳಲ್ಲಿ ವಿಶಿಷ್ಟ ಸಾಧನೆ ಮಾಡುವ ಮೂಲಕ ಸಮಾಜಕ್ಕೆ ಮಾದರಿಯಾಗಿದೆ. ತುಳುನಾಡಿನ ಕೃಷಿ ಮತ್ತು ಸಾಂಸ್ಕೃತಿಕ ಹಿನ್ನೆಲೆಯ ಜತೆಗೆ ಎಲ್ಲ ಹಂತಗಳಲ್ಲಿ ಬದುಕಿನ ಸವಾಲು ಸ್ವೀಕರಿಸಿ ವಿವಿಧ ಉದ್ಯಮಗಳಲ್ಲಿ ಯಶಸ್ವಿಯಾಗಿದ್ದಾರೆ ಎಂದು ಶ್ಲಾಘಿಸಿದರು.
ಬಂಟರು ನಡೆದು ಬಂದ ಹಾದಿಯನ್ನು ಎಂದೂ ಮರೆಯದೇ ಸಮಾಜಕ್ಕೆ ತಮ್ಮದೇ ಆದ ರೀತಿಯಲ್ಲಿ ಕೊಡುಗೆ ನೀಡುತ್ತ ಬರುತ್ತಿದ್ದಾರೆ. ಇಡೀ ಸಮಾಜಕ್ಕೆ ಬಂಟ ಸಮುದಾಯ ಕೊಡುಗೆ ಆನನ್ಯ ಎಂದು ಬಣ್ಣಿಸಿ, ಬಂಟರ ಸಂಸ್ಕೃತಿ, ಸಾಧನೆ, ಹಿರಿಮೆ, ಸಾಮಾಜಿಕ ಕೊಡುಗೆಯನ್ನು ಈ ವಿಶೇಷ ಸಂಚಿಕೆ ಒಳಗೊಂಡಿದೆ ಎಂದರು.
ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಮಾತನಾಡಿ, ಬಂಟ ಸಮುದಾಯವು ಹಿರಿಯರ ಅಪೇಕ್ಷೆಯಂತೆ ಎಲ್ಲ ಸಮಾಜವನ್ನು ಪ್ರೀತಿಸಿಕೊಂಡು ಮುನ್ನಡೆಯುತ್ತಿದೆ. ಬಂಟ ಸಮುದಾಯದ ಜನರು ಎಲ್ಲ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಸಮಜದ ಇತರ ವರ್ಗದವರನ್ನು ತಮ್ಮೊಂದಿಗೆ ಕರೆದೊಯ್ಯುತ್ತಿದ್ದಾರೆ. ಅಲ್ಲದೆ ಸಮಾಜಮುಖಿ ಚಿಂತನೆಯೊಂದಿಗೆ ವಿವಿಧ ಕ್ಷೇತ್ರಗಳಿಗೆ ಅಮೂಲ್ಯ ಕೊಡುಗೆ ನೀಡಿದ್ದಾರೆ. ಬಂಟ ಸಮುದಾಯದ ಸಾಧನೆ, ಸಾಮಾಜಿಕ ಕೊಡುಗೆ ವಿಚಾರದಲ್ಲಿ ಉದಯವಾಣಿ ಬಳಗದ ಸಹಕಾರ ಪ್ರಶಂಸನೀಯ. ವಿಶ್ವ ಬಂಟರ ಸಮ್ಮೇಳನದಲ್ಲಿ ಎಲ್ಲ ಸಮಾಜದವರು ಮುಕ್ತವಾಗಿ ಭಾಗವಹಿಸಬೇಕು ಎಂದು ವಿನಂತಿಸಿದರು.
ಜಾಗತಿಕ ಬಂಟರ ಸಂಘಗಳ ಒಕ್ಕೂಟ ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ, ಕೋಶಾಧಿಕಾರಿ ಉಳ್ತೂರು ಮೋಹನದಾಸ ಶೆಟ್ಟಿ, ಪ್ರ. ಕಾರ್ಯದರ್ಶಿ ಇಂದ್ರಾಳಿ ಜಯಕರ ಶೆಟ್ಟಿ ಉಪಸ್ಥಿತರಿದ್ದರು. ಎಂಎಂಎನ್‌ಎಲ್‌ನ ಉಪಾಧ್ಯಕ್ಷ, ಮ್ಯಾಗಜಿನ್ ಹೆಡ್ ರಾಮಚಂದ್ರ ಮಿಜಾರು ಸ್ವಾಗತಿಸಿ, ಪ್ರಸ್ತಾವನೆಗೈದರು. ಮಂಗಳೂರು ಮಾರುಕಟ್ಟೆ ವಿಭಾಗದ ಮುಖ್ಯಸ್ಥ ಸತೀಶ್ ಮಂಜೇಶ್ವರ ವಂದಿಸಿದರು.