Advertisement
ಮಣಿಪಾಲ: ಶಿಕ್ಷಣ, ಆರೋಗ್ಯ, ಬ್ಯಾಂಕಿಂಗ್ ಕ್ಷೇತ್ರದಲ್ಲಿ ಜಗತ್ತಿನ ಗಮನ ಸೆಳೆದಿರುವ ಮಣಿಪಾಲದಲ್ಲಿ ಪ್ರಪಂಚವನ್ನೇ ತನ್ನ ಸೌಂದರ್ಯದಿಂದ ಸೆಳೆಯಬಲ್ಲ ವಿಸ್ಮಯವೊಂದಿದೆ. ಅದುವೇ ಮಣ್ಣಪಳ್ಳ ಕೆರೆ. ಮಣಿಪಾಲಕ್ಕೆ ಈ ಹೆಸರು ಬರಲು ಕಾರಣವಾದ ಮಣ್ಣಪಳ್ಳ ಕೆರೆ ಪ್ರಕೃತಿ ಮತ್ತು ಮನುಷ್ಯ ಜತೆಯಾಗಿ ನಿರ್ಮಿಸಿದ ಸುಂದರ ತಾಣ. ಸುಮಾರು 120 ಎಕರೆ ಪ್ರದೇಶದಲ್ಲಿ ವ್ಯಾಪಿಸಿರುವ ಈ ಸುಂದರ ಸರೋವರ ಮತ್ತು ಪರಿಸರ ಅಪರೂಪದ ಜೀವ ವೈವಿಧ್ಯದ ಆಸರೆಯಾಗಿಯೂ ಗಮನ ಸೆಳೆದಿದೆ.
ಮಣ್ಣಪಳ್ಳ ಕೆರೆ ಕೇವಲ ಜಲ ತಾಣವಲ್ಲ. ಇದರ ಸುತ್ತಲೂ ಒಂದುವರೆ ಕಿ.ಮೀ. ಉದ್ದದ ವಾಕಿಂಗ್ ಟ್ರ್ಯಾಕ್ ಇದೆ. ಕೊಳದ ನಡುವಿನ ದ್ವೀಪಗಳಲ್ಲಿ ನೂರಾರು ಬಗೆಯ ಹಕ್ಕಿಗಳ ಆವಾಸವಿದೆ. ಬೋಟಿಂಗ್, ಬಯಲು ರಂಗಮಂದಿರ, ಆಟದ ಮೈದಾನ, ಮಕ್ಕಳ ಪಾರ್ಕ್ ಇದೆ.
ಆದರೆ…. ಇಷ್ಟೆಲ್ಲ ವೈವಿಧ್ಯಗಳ ಆಗರವಾಗಿದ್ದರೂ ಮೂಲೆಗುಂಪಾಗಿದೆ. ಮಣಿಪಾಲಕ್ಕೆ ಬಂದವರಿಗೆ ಇಲ್ಲೊಂದು ಸುಂದರವಾದ ತಾಣವಿದೆ ಎಂದು ಹೇಳುವ ಯಾವ ವ್ಯವಸ್ಥೆಯೂ ಇಲ್ಲ. ಒಳಗೆ ಹೊಕ್ಕರೆ ಅದರ ಸೌಂದರ್ಯವನ್ನು ಅನುಭವಿಸುವುದಕ್ಕಿಂತ ಹೆಜ್ಜೆ ಹೆಜ್ಜೆಗೂ ಸಮಸ್ಯೆಗಳು ಎದುರಾಗುತ್ತವೆ, ಆತಂಕಗಳು ಕಾಡುತ್ತವೆ. ವಸ್ತುಶಃ ಅನಾಥ ಪ್ರಜ್ಞೆಯಲ್ಲಿರುವ ಮಣ್ಣಪಳ್ಳ ಕೆರೆ ಅಭಿವೃದ್ಧಿ ಹೊಂದಿದಲ್ಲಿ ನಿಜಕ್ಕೂ ಮಣಿಪಾಲಕ್ಕೆ ಒಂದು ದೊಡ್ಡ ಆಸ್ತಿಯಾಗುವುದು ಖಂಡಿತ. ಆ ನಿಟ್ಟಿನಲ್ಲಿ ಎಲ್ಲರೂ ಯೋಚಿಸಬೇಕಾಗಿದೆ.
Related Articles
ಇಂಥ ಪ್ರಾಕೃತಿಕ ಸೌಂದರ್ಯದ ಖನಿಯನ್ನು ಕೈಯಲ್ಲಿಟ್ಟುಕೊಂಡಿದ್ದರೂ ಅದರ ಅಭಿವೃದ್ಧಿ ಮಾಡುವಲ್ಲಿ ಎಡವಿದ್ದೇವೆ. ಇದಕ್ಕೆ ಮುಖ್ಯ ಕಾರಣ, ಅಭಿವೃದ್ಧಿ ಮಾಡಬೇಕಾದವರು ಯಾರು ಎನ್ನುವ ಪ್ರಶ್ನೆಗೆ ಉತ್ತರಿಸಲು ಯಾರೂ ಮುಂದಾಗದೇ ಇರುವುದು!
Advertisement
ಮಣ್ಣಪಳ್ಳ ಕರೆ ಉಡುಪಿ ನಗರಸಭೆ ವ್ಯಾಪ್ತಿಯೊಳಗಿದ್ದರೂ ಸದ್ಯ ಇದರ ನಿರ್ವಹಣೆ ನಗರಾಭಿವೃದ್ಧಿ ಪ್ರಾಧಿಕಾರದ ಅಧೀನದಲ್ಲಿದೆ. ಅಷ್ಟಾಗಿಯೂ ಇದರ ನಿರ್ವಹಣೆಗೆ ಇರುವ ಸಮಿತಿಯ ಅಧ್ಯಕ್ಷರು ಜಿಲ್ಲಾಧಿಕಾರಿಯೇ ಆಗಿದ್ದಾರೆ. ನಗರಾಭಿವೃದ್ಧಿ ಪ್ರಾಧಿಕಾರದಿಂದ ಕೆರೆಯ ಅಭಿವೃದ್ಧಿಗಾಗಿ ಪ್ರಸ್ತಾವನೆಯನ್ನು ಕೇಂದ್ರ ಕಚೇರಿಗೆ ಸಲ್ಲಿಸಿ ತಿಂಗಳುಗಳೇ ಕಳೆದರೂ ಅನುಮೋದನೆ ಮಾತ್ರ ಸಿಕ್ಕಿಲ್ಲ.
ಪೊನ್ನುರಾಜ್ ಅವರು ಜಿಲ್ಲಾಧಿಕಾರಿಯಾಗಿದ್ದಾಗ ಮಣ್ಣಪಳ್ಳದ ಅಭಿವೃದ್ಧಿಗೆ ಯೋಜನೆ, ವಿಸ್ತೃತ ವರದಿ, ನೀಲನಕ್ಷೆ ಎಲ್ಲವೂ ಸಿದ್ಧವಾಗುತ್ತಾ ಬಂದಿದೆ. ಈ ಮಧ್ಯೆ ಕೂರ್ಮಾರಾವ್ ಹಾಗೂ ಇನ್ನು ಕೆಲವರು ಜಿಲ್ಲಾಧಿಕಾರಿಯಾಗಿದ್ದ ಸಂದರ್ಭದಲ್ಲಿ ಬೋಟಿಂಗ್ ಸಹಿತ ಜಲಕ್ರೀಡೆಗಳಿಗೂ ಅವಕಾಶ ನೀಡಿದ್ದರೂ ಅದು ದೊಡ್ಡ ಮಟ್ಟದಲ್ಲಿ ಕ್ಲಿಕ್ ಆಗಿಲ್ಲ. ಕೆಲವು ವರ್ಷ ಕೆರೆಗೆ ಮೀನು ಮರಿಗಳನ್ನು ಬಿಟ್ಟು ಸಾಕುವ ಪ್ರಯತ್ನವೂ ನಡೆಯಿತಾದರೂ ದೊಡ್ಡ ಯಶಸ್ಸು ಕಂಡಿಲ್ಲ.
ನಗರಸಭೆ ವ್ಯಾಪ್ತಿಯಲ್ಲಿದ್ದರೂ ನಗರಸಭೆ ಇದರ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ. ನಗರಾಭಿವೃದ್ಧಿ ಪ್ರಾಧಿಕಾರದ ಅಧೀನದಲ್ಲಿದ್ದು ಅಭಿವೃದ್ಧಿಗೆ ಅನುದಾನವೂ ಇದೆ. ಆದರೆ ತಾಂತ್ರಿಕ ಕಾರಣದಿಂದ ಅನುದಾನ ಬಿಡುಗಡೆ ಮಾಡಲು ಆಗುತ್ತಿಲ್ಲ. ಹೀಗಾಗಿ ಮಣ್ಣಪಳ್ಳದ ಅಭಿವೃದ್ಧಿ ಯಾರು ಮಾಡಬೇಕು ಎಂಬುದೇ ಅಧಿಕಾರಿಗಳ ಹಂತದಲ್ಲಿ ಈಗಿರುವ ಪ್ರಶ್ನೆ. ಜಿಲ್ಲಾಧಿಕಾರಿಗಳ ನೇತೃತ್ವದ ನಿರ್ವಹಣ ಸಮಿತಿಯಿದೆ. ಸಭೆಗಳು ಆಗುತ್ತಿರುತ್ತವೆ. ಕಾರ್ಯಾನುಷ್ಠಾನ ಇಲ್ಲ.
ಗೊತ್ತಿರಲಿ…ಮಣ್ಣಪಳ್ಳ ಸಣ್ಣದಲ್ಲ!– ಮಣ್ಣಪಳ್ಳವೆಂದರೆ ಸಣ್ಣ ಪ್ರದೇಶವೇನಲ್ಲ. ಸುಮಾರು 120 ಎಕರೆ ವ್ಯಾಪ್ತಿ ಹೊಂದಿದೆ.
– ನೀರು ನಿಂತಿರುವ ಕೆರೆಯ ಭಾಗವೇ ಸುಮಾರು 60 ಎಕರೆಯಲ್ಲಿ ವ್ಯಾಪಿಸಿಕೊಂಡಿದೆ.
– ವಾಕಿಂಗ್ ಟ್ರ್ಯಾಕ್ನಲ್ಲಿ ಒಂದು ಸುತ್ತು ಬಂದರೆ 1.5 ಕಿ.ಮೀ. ನಡೆದಂತಾಗುತ್ತದೆ.
– ಸಣ್ಣ ಕೊಳದಂತಿದ್ದ ಇದು ಹೆಂಚಿನ ಕಾರ್ಖಾನೆಗೆ ಆವೆ ಮಣ್ಣು ತೆಗೆದು ವಿಶಾಲವಾಗಿದೆ.
– ಮಣ್ಣಪಳ್ಳ ಕೆರೆಯೊಳಗಿನ ಎರಡು ದ್ವೀಪಗಳು ನೂರಾರು ಪಕ್ಷಿಗಳ ಆವಾಸ ಸ್ಥಾನ.
– ಇದೊಂದು ರೋಚಕ ಬೋಟಿಂಗ್ ತಾಣ, ವಿಶೇಷ ಕಲಾಕೃತಿಗಳು ಇಲ್ಲಿನ ಆಕರ್ಷಣೆ.
– ನೂರಾರು ಬಗೆಯ ಗಿಡ ಮರಗಳು ಇಲ್ಲಿವೆ. ಪ್ರಕೃತಿ ಇಲ್ಲಿ ಖುಷಿಯಲ್ಲಿ ಕುಣಿಯುತ್ತಿದೆ.
– ಸುತ್ತಲೂ ದೇಗುಲ, ತಾರಾಲಯ, ಹಸ್ತಶಿಲ್ಪದಂಥ ಅದ್ಭುತಗಳನ್ನು ಆವರಿಸಿಕೊಂಡಿದೆ.
– ಚಂದದ ಬಯಲು ರಂಗ ಮಂದಿರವಿದೆ, ದೊಡ್ಡ ಆಟದ ಮೈದಾನವೂ ಇದೆ.
– ಫೋಟೋಗ್ರಫಿಗೆ, ರೀಲ್ಸ್ ಮಾಡುವುದಕ್ಕೆ, ಶೂಟಿಂಗ್ಗೂ ಹೇಳಿ ಮಾಡಿಸಿದ ಜಾಗ ಇದು! ಪ್ರಮುಖ ಸಮಸ್ಯೆ, ಕೊರತೆಗಳೇನು
– ಇಷ್ಟು ಸುಂದರವಾದ, ಬೃಹತ್ ಗಾತ್ರದ ಕೆರೆಯನ್ನು ದೈನಂದಿನ ನೆಲೆಯಲ್ಲಿ ನಿರ್ವ ಹಣೆ ಮಾಡುವ ವ್ಯವಸ್ಥೆಯೇ ಇಲ್ಲ.
– ಅತ್ಯುತ್ತಮ ವಾಕಿಂಗ್ ಟ್ರ್ಯಾಕ್ ಇದೆ. ಆದರೆ, ಅದರ ನಿರ್ವಹಣೆ ಇಲ್ಲದೆ ನಡಿಗೆಗೆ ಭಯವಾಗುತ್ತದೆ.
– ಕೆರೆಗೆ ಬರಲು ನಾಲ್ಕರಿಂದ ಐದು ಕಡೆ ಮಾರ್ಗವಿದೆ. ಆದರೆ, ಎಲ್ಲೂ ಮಾರ್ಗ ಸೂಚಿ, ಸೂಚನಾ ಫಲಕಗಳು ಇಲ್ಲ.
– ಕೆರೆ ಮತ್ತು ಸುತ್ತಲಿನ ಪರಿಸರಕ್ಕೆ ರಕ್ಷಣಾ ಬೇಲಿಗಳಿಲ್ಲ. ಅಲ್ಲಲ್ಲಿ ಅತಿಕ್ರಮಣದ ಸೂಚನೆಗಳು ಕಾಣಿಸುತ್ತಿವೆ.
– ಎಲ್ಲ ಕಡೆ ಹುಲ್ಲು, ಪೊದೆಗಳು ಬೆಳೆದಿವೆ. ಹೀಗಾಗಿ ವಾಕಿಂಗ್ ಟ್ರ್ಯಾಕ್ನಲ್ಲಿ ಹೋಗುವವರಿಗೆ ಕ್ಷಣಕ್ಷಣವೂ ಆತಂಕ.
– ಇಲ್ಲಿ ಯಾವುದೇ ಭದ್ರತಾ ಸಿಬಂದಿ ಗಳಿಲ್ಲ. ಅಡ್ಡಾದಿಡ್ಡಿಯಾಗಿ ವಾಹನ ಪಾರ್ಕಿಂಗ್ ಮಾಡಿದರೂ ಯಾರೂ ಕೇಳ್ಳೋರಿಲ್ಲ.
– ವಾಯು ವಿಹಾರಿಗಳು, ನಡಿಗೆದಾರರಿಗೆ ಅತ್ಯಗತ್ಯವಾಗಿ ಬೇಕಾದ ಶೌಚಾಲಯ ವ್ಯವಸ್ಥೆ ಇಲ್ಲ.
– ಹಗಲಿನಲ್ಲಿ ಪ್ರೇಮಿಗಳು, ರಾತ್ರಿ ಮದ್ಯ ವ್ಯಸನಿಗಳ ಗುಂಡುಪಾರ್ಟಿ ತಾಣವಾಗಿದೆ.
– ವಾಕಿಂಗ್ ಟ್ರ್ಯಾಕ್ನಲ್ಲೇ ನಾಯಿಗಳು ಮಲಗಿಕೊಂಡಿರುತ್ತವೆ. ಅವುಗಳಿಗೆ ಭಯಪಟ್ಟುಕೊಂಡೇ ಓಡಾಡಬೇಕು.
– ಇಲ್ಲಿ ಬಯಲು ರಂಗ ಮಂದಿರವಿದೆ. ಬೋಟಿಂಗ್ ಇದೆ. ಆದರೆ ಪೂರ್ಣ ಪ್ರಮಾಣದ ಬಳಕೆಗೆ ವ್ಯವಸ್ಥೆ ಮಾಡಿಲ್ಲ. ವರದಿ: ರಾಜು ಖಾರ್ವಿ/ಪುನೀತ್ ಸಾಲ್ಯಾನ್
ಚಿತ್ರ: ಆಸ್ಟ್ರೋಮೋಹನ್