ಬೆಂಗಳೂರು: ದೇಶದಲ್ಲಿ ಸುಧಾರಿತ ತಂತ್ರಜ್ಞಾನ ಬಳಿಸಿ ಶಸ್ತ್ರಚಿಕಿತ್ಸೆ ಹಾಗೂ ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವಲ್ಲಿ ಮುಂಚೂಣಿಯಲ್ಲಿರುವ ಮಣಿಪಾಲ್ ಆಸ್ಪತ್ರೆ ತನ್ನ ಪ್ರಚಾರ ರಾಯಭಾರಿಯಾಗಿ ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್ ಹೆಸರನ್ನು ಘೋಷಿಸಿದೆ.
ಸಂಸ್ಥೆಯು ಇದೇ ತಿಂಗಳಲ್ಲಿ ದೇಶದ ರಾಜಧಾನಿಯಲ್ಲಿ ಮೊದಲ ಆಸ್ಪತ್ರೆ ಆರಂಭಿಸಲಿದೆ. ಈ ಸಂಬಂಧ ರಾಹುಲ್ ದ್ರಾವಿಡ್ ಅವರೊಂದಿಗೆ ಯೋಜನಾತ್ಮಕ ಒಡಂಬಡಿಕೆ ಕೂಡಿಬಂದಿರುವುದು ವಿಶೇಷವಾಗಿದೆ. ಮುಂದಿನ ಮೂರು ವರ್ಷಕ್ಕೆ ಈ ಒಪ್ಪಂದವಾಗಿದ್ದು, ಸಂಸ್ಥೆಯ ಎಲ್ಲ ಅಭಿಯಾನಗಳಲ್ಲೂ ರಾಷ್ಟ್ರವ್ಯಾಪಿ ರಾಯಭಾರಿಯಾಗಿ ರಾಹುಲ್ ದ್ರಾವಿಡ್ ಕಾರ್ಯನಿರ್ವಹಿಸಲಿದ್ದಾರೆ.
ಈ ಕುರಿತಂತೆ ಮಣಿಪಾಲ್ ಆಸ್ಪತ್ರೆಯ ಮುಖ್ಯಸ್ಥ ಡಾ. ಸುದರ್ಶನ್ ಬಲ್ಲಾಳ್ ಮಾತನಾಡಿ, “ದಿ ವಾಲ್’ (ಗೋಡೆ), “ಮಿಸ್ಟರ್ ಡಿಪೆಂಡೆಬಲ್’ ಮೊದಲಾದ ಹೆಸರುಗಳಿಂದ ಖ್ಯಾತರಾಗಿರುವ ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್ ಅವರು ಮಣಿಪಾಲ್ ಕುಟುಂಬಕ್ಕೆ ಸ್ವಾಗತಿಸಲು ಸಂತವಾಗುತ್ತಿದೆ. ಅವರಲ್ಲಿರುವ ವ್ಯಕ್ತಿತ್ವ ಮಣಿಪಾಲ್ ಬ್ರ್ಯಾಂಡ್‌ಗೆ ಸರಿಹೊಂದುವಂತಿದೆ ಎಂದರು.
ಆರು ದಶಕಗಳಿಂದಲೂ ಉತ್ಕೃಷ್ಟವಾದ ಆರೋಗ್ಯ ಸೇವೆಯನ್ನು ಮಣಿಪಾಲ್ ಸಂಸ್ಥೆ ನೀಡುತ್ತಾ ಬಂದಿದೆ. ಶಸ್ತ್ರ ಚಿಕಿತ್ಸೆ, ರೋಗಿಗಳ ಆರೈಕೆ ಹಾಗೂ ನೀತಿಯುತ ಅಭ್ಯಾಸಗಳಲ್ಲಿ ಸಂಸ್ಥೆ ಬದ್ಧತೆಯಿಂದ ನಡೆದುಕೊಂಡು ಬರುತ್ತಿದೆ. ರಾಹುಲ್ ಅವರೊಂದಿಗಿನ ಈ ಒಪ್ಪಂದ ಸಂಸ್ಥೆಯ ಬೆಳವಣಿಗೆಗೂ ಸಹಕಾರಿಯಾಗಲಿದೆ ಎಂದು ವಿವರಿಸಿದರು.
ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್ ಮಾತನಾಡಿ, ಮಣಿಪಾಲ್ ಆರೋಗ್ಯ ಸಂಸ್ಥೆ ತನ್ನದೇ ಆದ ಪರಂಪರೆ ಹೊಂದಿದೆ. ವಿಶ್ವದರ್ಜೆಯ ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವ ಸಂಸ್ಥೆ ಇದಾಗಿದ್ದು, ಭಾರತದ ಅತ್ಯಂತ ನಂಬಿಕಾರ್ಹ ಆರೋಗ್ಯ ಸೇವೆ ಹಾಗೂ ಶಸ್ತ್ರಚಿಕಿತ್ಸಾ ಸಂಸ್ಥೆಯಾಗಿದೆ. ಇಂತಹ ಶ್ರೇಷ್ಠ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಳ್ಳಲು ಹೆಮ್ಮೆಯಾಗುತ್ತಿದೆ ಎಂದರು.