ಬೆಂಗಳೂರು: ವಿಶ್ವ ಮೂತ್ರಪಿಂಡ ದಿನಾಚರಣೆಯನ್ನು ಮಣಿಪಾಲ್ ಆಸ್ಪತ್ರೆಯು “ಅರೋಗ್ಯವಂತ ಜೀವನಶೈಲಿಗಾಗಿ ಅರೋಗ್ಯಯುತ ಮೂತ್ರಪಿಂಡಗಳು’ ಎಂಬ ಧ್ಯೇಯದೊಂದಿಗೆ ವಿಶೇಷ ಅಭಿಯಾನ ರೂಪದಲ್ಲಿ ಮಂಗಳವಾರ ಆಚರಿಸಿತು.
ಅಭಿಯಾನದ ಅಂಗವಾಗಿ ಶೇ.30ಕ್ಕಿಂತಲೂ ಹೆಚ್ಚಿನ “ಭೌತಿಕ ದ್ರವ್ಯರಾಶಿ ಸೂಚಿ’ (ಬಾಡಿ ಮಾಸ್ ಇಂಡೆಕ್ಸ್) ಹೊಂದಿರುವ ಮೂತ್ರಪಿಂಡ ರೋಗಿಗಳಿಗೆ ನೂರು ಉಚಿತ ಸಲಹಾ ಸೇವೆಗಳು ಮತ್ತು ಉಚಿತ ತಪಾಸಣೆ ನಡೆಸಲಾಯಿತು. ತನ್ನ ಈ ಸೇವೆಯನ್ನು ಆಸ್ಪತ್ರೆಯು ಪೊಲೀಸ್ ಸಿಬ್ಬಂದಿಗೆ ಮೀಸಲಿಟ್ಟಿತು. ಜೊತೆಗೆ ಮೂತ್ರಪಿಂಡ ರೋಗಿಗಳ ಅನುಕೂಲಕ್ಕಾಗಿ ಹಲವು ಪ್ಯಾಕೇಜ್‌ಗಳನ್ನೂ ಇದೇ ವೇಳೆ ಪ್ರಕಟಿಸಿತು.
ಹೆಚ್ಚುವರಿ ಪೊಲೀಸ್ ಆಯುಕ್ತರಾದ ಮಾಲಿನಿ ಕೃಷ್ಣಮೂರ್ತಿ, ಬಾಲಿವುಡ್ ನಟಿ ಕೊಂಕಣ ಸೆನ್, ಮಣಿಪಾಲ್ ಆಸ್ಪತ್ರೆಯ ಅಧ್ಯಕ್ಷ ಡಾ. ಸುದರ್ಶನ್ ಬಲ್ಲಾಳ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಮೂತ್ರಪಿಂಡ ಕಾಯಿಲೆಗೆ ತುತ್ತಾದವರು ಮತ್ತು ಗುಣಮುಖರಾದವರು ಹಾಗೂ ಮೂತ್ರಪಿಂಡ ಕಸಿ ಮಾಡಿಸಿಕೊಂಡವರು ತಮ್ಮ ಅನುಭವಗಳನ್ನು ಈ ವೇಳೆ ಹಂಚಿಕೊಂಡರು.
ಮಾಲಿನಿ ಕೃಷ್ಣಮೂರ್ತಿ ಮಾತನಾಡಿ, “ದೈಹಿಕ ದೃಢತೆ ಹೊಂದಿರುವುದು ಮತ್ತು ಆರೋಗ್ಯಕರ ಜೀವನಶೈಲಿಯನ್ನು ಉಳಿಸಿಕೊಳ್ಳುವುದು ಅತ್ಯಗತ್ಯ. ಪೌಷ್ಟಿಕ ಆಹಾರ ಸೇವನೆ ಮತ್ತು ನಿಗದಿತ ವ್ಯಾಯಾಮವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದರ ಮಹತ್ವ ಅರಿಯಬೇಕು. ಆ ಮೂಲಕ ರೋಗಗಳನ್ನು ದೂರವಿಡಬಹುದು. ಈ ಸಂದೇಶವನ್ನು ವ್ಯಾಪಕವಾಗಿ ಪ್ರಸಾರ ಮಾಡುತ್ತಿರುವ ಮಣಿಪಾಲ್ ಆಸ್ಪತ್ರೆಯೊಂದಿಗೆ ಸಹಯೋಗ ಹೊಂದುವುದು ಗೌರವದ ಸಂಗತಿ,”ಎಂದರು.
ಬಾಲಿವುಡ್ ನಟಿ ಕೊಂಕಣ ಸೆನ್ ಮಾತನಾಡಿ, “ಸಾಮಾಜಿಕ ಕಳಕಳಿಯಿಂದ ಸೇವೆ ಮಾಡುತ್ತಿರುವ ಮಣಿಪಾಲ್ ಆಸ್ಪತ್ರೆಗೆ ಪೂರ್ಣವಾಗಿ ಬೆಂಬಲ ನೀಡುತ್ತೇನೆ,” ಎಂದರು. ಮಣಿಪಾಲ್ ಆಸ್ಪತ್ರೆಯ ಅಧ್ಯಕ್ಷ ಡಾ. ಸುದರ್ಶನ್ ಬಲ್ಲಾಳ್ ಮಾತನಾಡಿ, “ಬೊಜ್ಜುಮೈ ಮೂತ್ರಪಿಂಡ ಕಾಯಿಲೆಯನ್ನು ದೀರ್ಘಕಾಲದ ರೋಗವನ್ನಾಗಿ ಪರಿವರ್ತಿಸುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ 2025ರ ವೇಳೆಗೆ ವಿಶ್ವವ್ಯಾಪಿ ಶೇ. 18ರಷ್ಟು ಪುರುಷರು, ಶೇ.21ಕ್ಕಿಂತಲೂ ಹೆಚ್ಚು ಮಹಿಳೆಯರಿಗೆ ಬೊಜ್ಜು ಮೈ ತೊಂದರೆ ಕಾಡಲಿದೆ.
ಅಲ್ಲದೆ ತೀವ್ರ ರೀತಿಯ ಬೊಜ್ಜು ಮೈ ತೊಂದರೆ ಜಗತ್ತಿನ ಶೇ.6ರಷ್ಟು ಪುರುಷರು ಮತ್ತು ಶೇ.9ರಷ್ಟು ಮಹಿಳೆಯರನ್ನು ಕಾಡಲಿದೆ. ಇದು ಒಟ್ಟಾರೆ ಕಳಪೆ ಆರೋಗ್ಯ ಮತ್ತು ಉನ್ನತ ವಾರ್ಷಿಕ ವೈದ್ಯಕೀಯ ವೆಚ್ಚಗಳ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರುತ್ತಿದೆ. ಹಾಗಾಗಿ ಈ ವಿಚಾರದಲ್ಲಿ ಕಾಳಜಿ ಅಗತ್ಯ,” ಎಂದರು.