ಹುಬ್ಬಳ್ಳಿ: ಎಲ್ಲರಿಗೂ ಗುಣಮಟ್ಟದ ಚಿಕಿತ್ಸೆ ಲಭ್ಯವಾಗಬೇಕೆಂಬ ಉದ್ದೇಶದಿಂದ ಮಣಿಪಾಲದ ಕಸ್ತೂರಬಾ ಹಾಸ್ಪಿಟಲ್ ಪರಿಚಯಿಸಿದ ಮಣಿಪಾಲ ಆರೋಗ್ಯ ಕಾರ್ಡ್ ಹುಬ್ಬಳ್ಳಿಯಲ್ಲೂ ಸಿಗಲಿದೆ ಎಂದು ಕಸ್ತೂರಬಾ ಆಸ್ಪತ್ರೆ ಉಪವ್ಯವಸ್ಥಾಪಕ ಮೋಹನ ಶೆಟ್ಟಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಣಿಪಾಲ ಉನ್ನತ ಶಿಕ್ಷಣ ಅಕಾಡೆಮಿ (ಮಾಹೆ) ಸಾಮಾಜಿಕ ಕಳಕಳಿಯ ಅಂಗವಾಗಿ 2000ರಲ್ಲಿ ಪರಿಚಯಿಸಿದ ಈ ಕಾರ್ಡ್‌ನಿಂದ ಮಣಿಪಾಲ, ಮಂಗಳೂರು ಹಾಗೂ ಗೋವಾದ ಮಣಿಪಾಲ ಆಸ್ಪತ್ರೆಯಲ್ಲಿ ರಿಯಾಯಿತಿ ದರದಲ್ಲಿ ಚಿಕಿತ್ಸೆ ಪಡೆದುಕೊಳ್ಳಬಹುದಾಗಿದೆ. ಪ್ರತಿವರ್ಷ ಸಹಸ್ರಾರು ಜನರು ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ ಎಂದರು.
ಈ ಕಾರ್ಡ್‌ನಿಂದ ವೈದ್ಯರ ಸಮಾಲೋಚನಾ ಶುಲ್ಕದಲ್ಲಿ ಶೇ.50; ಪ್ರಯೋಗಾಲಯ ಪರೀಕ್ಷೆ ಶುಲ್ಕದಲ್ಲಿ ಶೇ.30; ಸಿಟಿ, ಎಂಆರ್‌ಐ, ಆಲ್ಟ್ರಾ ಸೌಂಡ್ ಶುಲ್ಕದಲ್ಲಿ ಶೇ.20; ಹೊರ ರೋಗಿ ವಿಭಾಗಗಳಲ್ಲಿ ಶೇ.20; ಔಷಧಾಲಯಗಳಲ್ಲಿ ಶೇ.12 ರಿಯಾಯಿತಿ ಪಡೆಯಬಹುದು. ಈ ಕಾರ್ಡ್‌ಗಳಲ್ಲಿ ವೈಯಕ್ತಿಕ, ಫ್ಯಾಮಿಲಿ ಹಾಗೂ ಫ್ಯಾಮಿಲಿ ಪ್ಲಸ್ ಹೀಗೆ ಮೂರು ಬಗೆಗಳಿವೆ. ವೈಯಕ್ತಿಕ ಕಾರ್ಡ್‌ಗೆ ವರ್ಷಕ್ಕೆ 250 ರೂ., ಫ್ಯಾಮಿಲಿ ಕಾರ್ಡ್‌ಗೆ(ಗಂಡ, ಹೆಂಡತಿ, ಮಕ್ಕಳು) 500 ಹಾಗೂ ತಂದೆ-ತಾಯಿ, ಅತ್ತೆ, ಮಾವ ಅವರನ್ನೊಳಗೊಂಡ ಫ್ಯಾಮಿಲಿ ಪ್ಲಸ್ ಕಾರ್ಡ್ ಗೆ 650ರೂ. ಶುಲ್ಕವಿದೆ. ಎರಡು ವರ್ಷಗಳ ನವೀಕರಣಕ್ಕೂ ಸೌಲಭ್ಯ ಕಲ್ಪಿಸಲಾಗಿದೆ. ಇದಕ್ಕೆ ಕ್ರಮವಾಗಿ 400, 700 ಹಾಗೂ 850 ರೂ. ನಿಗದಿಪಡಿಸಲಾಗಿದೆ. ಇದರಿಂದ ನವೀಕರಣ ಶುಲ್ಕದಲ್ಲಿ ಉಳಿತಾಯ ಮಾಡಬಹುದಾಗಿದೆ ಎಂದರು.
ಮಾಹಿತಿಗೆ ವೆಬ್‌ಸೈಟ್ www.manipalhealthcard.com ಸಂಪರ್ಕಿಸಬಹುದು. ಹುಬ್ಬಳ್ಳಿ, ಧಾರವಾಡ, ಕಲಘಟಗಿ, ಅಳ್ನಾವರದ ಸೇಂಟ್ ಮಿಲಾಗ್ರಿಸ್ ಸೌಹಾರ್ದ ಶಾಖೆಗಳಲ್ಲಿ 2019ರ ಆರೋಗ್ಯ ಕಾರ್ಡ್ ನೋಂದಣಿಗಾಗಿ ಅರ್ಜಿ ಪಡೆಯಬಹುದು. ಮಾಹಿತಿಗೆ ಸಹಾಯವಾಣಿ 9980854700 ಸಂಪರ್ಕಿಸಬಹುದು ಎಂದರು.
ಹಿರಿಯ ವ್ಯವಸ್ಥಾಪಕ ಸಚಿನ್ ಕಾರಂತ, ಸಹಾಯಕ ವ್ಯವಸ್ಥಾಪಕ ರವಿಕಿರಣ ಪೈ, ಸ್ಥಳೀಯ ಪ್ರತಿನಿಧಿಗಳಾದ ಮೋಹನ, ಅಚ್ಯುತ್ ಇದ್ದರು.