ಕಾಲದ ದಿನದರ್ಶಿಕೆಯ ಮತ್ತೂಂದು ಹಾಳೆ ತಿರುವಿ ಇನ್ನೊಂದು ಫಲಪ್ರದ ಹೊಸ ವರ್ಷದ ಸಾಧ್ಯತೆಯನ್ನು ನಮ್ಮೆದುರು ತೆರೆದಿರಿಸಿದೆ. ಅಮಿತ ಬದಲಾವಣೆಗಳಿಗೆ ಸಾಕ್ಷಿಯಾಗುತ್ತಿರುವ ಈ ಹೊತ್ತಿನಲ್ಲಿ, ಒಂದು ಕ್ಷಣ ಹಿಂದೆ ತಿರುಗಿ ನಾವೆಲ್ಲಿ ದ್ದೇವೆ ಎಂಬುದನ್ನು ಗುರುತಿಸಿಕೊಳ್ಳುವ ಉತ್ಸಾಹದಲ್ಲಿದ್ದೇನೆ.
Advertisement
ವಿಶ್ವ ಇತಿಹಾಸದ ಪುಟಗಳಲ್ಲಿ ಹಿಂದಿನ ಶತಮಾನವನ್ನು ತೆರೆದರೆ ಒಂದು ಘಟನೆ ಮೇರುಸದೃಶವಾಗಿ ನಿಲ್ಲುತ್ತದೆ. 1969; ಅದು ಮಾನವನು ಚಂದ್ರನ ಅಂಗಳಕ್ಕೆ ಪಾದಾರ್ಪಣೆ ಮಾಡಿದ ವರ್ಷ. ಆ ವರ್ಷ ಭಾರತೀಯ ಸಂದರ್ಭಕ್ಕೂ ಬಹಳ ಮಹತ್ವದ್ದು. ಇಂದಿರಾ ಗಾಂಧಿಯವರು ಕಾಂಗ್ರೆಸ್ ಪಕ್ಷವನ್ನು ಒಡೆದು ತನ್ನ ಶಕೆಯನ್ನು ಅತ್ಯುತ್ಸಾಹದಿಂದ ಆರಂಭಿಸಿದರು. ಸುನೀಲ್ ಗಾವಸ್ಕರ್ ಅವರ ಕ್ರಿಕೆಟ್, ಅಮಿತಾಭ್ ಬಚ್ಚನ್ ಅವರ ಸಿನೆಮಾ ಹಾಗೂ ಇಂದಿರಾ ಗಾಂಧಿಯವರ ರಾಜಕಾರಣ ಭಾರತ ಮತ್ತು ಭಾರತೀಯರ ಆಲೋಚನೆಯನ್ನು ಬದಲಾಯಿಸತೊಡಗಿದ್ದ ಘಟ್ಟ 1970. ಅದು ಕಳೆದ ಶತಮಾನದ ಅತ್ಯಂತ ನಿರ್ಣಾಯಕ ದಶಕವಷ್ಟೇ ಅಲ್ಲ, ರೋಚಕ ಮತ್ತು ಆಘಾತಕಾರಿ ಕೂಡ. ದೇಶದ ಸಾಮಾಜಿಕ, ರಾಜಕೀಯ ಹಾಗೂ ಸಾಂಸ್ಕೃತಿಕ ನೆಲೆಗಳಲ್ಲಿ ಅಪಾರ ಸ್ಥಿತ್ಯಂತರಕ್ಕೆ ಸಾಕ್ಷಿಯಾದ 70ರ ದಶಕವನ್ನು ಸವಾಲಿನ, ಬದಲಾವಣೆಯ ಹಾಗೂ ರಾಜಿಯ ದಶಕವನ್ನಾಗಿಸಿದವರಿಗೆ ಧನ್ಯವಾದ. ಆ ಸಂದರ್ಭದಲ್ಲೇ ಮೈಸೂರು ರಾಜ್ಯವೆಂದಿದ್ದ ನಮ್ಮ ರಾಜ್ಯದ ಮುಖ್ಯಮಂತ್ರಿಯಾಗಿದ್ದವರು ವೀರೇಂದ್ರ ಪಾಟೀಲ್. ಅವರ ಸಮರ್ಥ ಆಡಳಿತ ರಾಜ್ಯದ ಆರ್ಥಿಕ ಅಭಿವೃದ್ಧಿಯ ರಥಕ್ಕೆ ಹೊಸ ಹಾದಿ ತೋರಿಸಿತು. 1972ರಲ್ಲಿ ಮುಖ್ಯಮಂತ್ರಿ ಪದವಿಗೇರಿದ ದೇವರಾಜ ಅರಸ್ ಕೂಡ ಸಾಮಾಜಿಕ – ಆರ್ಥಿಕ ಹಾಗೂ ರಾಜಕೀಯ ಸುಧಾರಣೆಗಳಿಗೆ ಮುಂದಾದರು. 1973ರಲ್ಲಿ ಮೈಸೂರು ರಾಜ್ಯ ಕರ್ನಾಟಕವಾಯಿತು.
ಸ್ಥಳೀಯತೆ, ಪ್ರಾದೇಶಿಕತೆಯ ಕನಸಿಗೆ ಬಣ್ಣ ತುಂಬುತ್ತಾ ಓದುಗರ ಒತ್ತಾಸೆಯಲ್ಲೇ ಬೆಳೆದ ಉದಯವಾಣಿ ಈ 50 ವರ್ಷಗಳಲ್ಲಿ ಹತ್ತಾರು ಸತ್ವಭರಿತ ಪ್ರಯೋಗಗಳನ್ನು ನಡೆಸಿದೆ. ಸ್ಥಳೀಯ ಹಿತಾಸಕ್ತಿಗೆ ದನಿ ಒದಗಿಸಿ ನಿಜವಾದ ಅರ್ಥದಲ್ಲಿ ಜನಮನದ ಜೀವನಾಡಿಯಾಗುವ ಪ್ರಾಮಾಣಿಕ ಪ್ರಯತ್ನ ನಡೆಸಿದೆ. “ಕುಗ್ರಾಮ ಗುರುತಿಸಿ’ ಸರಣಿಯ ಮೂಲಕ ಅಭ್ಯುದಯ ಪತ್ರಿಕೋದ್ಯಮವೆಂಬ ಹೊಸ ಶಾಖೆಯನ್ನು ಭಾರತೀಯ ಪತ್ರಿಕೋದ್ಯಮದಲ್ಲಿ ತೆರೆದಿದೆ. ಯುವಜನರ ಸಂಘಟನೆಗಾಗಿ ರಚನಾತ್ಮಕ ಚಟುವಟಿಕೆಗಳು, ವಿಂಶತಿ ಸಂದರ್ಭದ ಯಕ್ಷಗಾನ ಕಾರ್ಯಕ್ರಮಗಳು ಉಲ್ಲೇಖನೀಯ.
“ಉದಯವಾಣಿ’ಯ ಮೂಲಕ ನಿಮ್ಮಂತಹ “ನೈಜ ಓದುಗ’ರ ಹಿತಾಸಕ್ತಿಗಳನ್ನು ಕಾಯುವ ವಿಶ್ವಾಸ ನಮ್ಮದು. ಅಗ್ನಿಪರೀಕ್ಷೆಯಂತಹ ಈ ಐದು ದಶಕಗಳ ಅವಧಿಯಲ್ಲಿ ನಮ್ಮ ಕಾರ್ಯಚಟುವಟಿಕೆಗಳ ನೈತಿಕ ಅಡಿಪಾಯವು ಇನ್ನಷ್ಟು ಆಳವಾಗಿ ಬೇರೂರಿ, ದೃಢವಾಗಿ ನೆಲೆನಿಂತಿದೆ. ನಮ್ಮ ಸಂಪಾದಕೀಯ ಬಳಗವು ಸರ್ವ ಸ್ವತಂತ್ರ- ನಾವು ಆಚರಿಸುತ್ತ ಬಂದಿರುವ ಪತ್ರಿಕಾ ಧರ್ಮವು ಸದಾ ವಾಣಿಜ್ಯಿಕ ಒಲವುಗಳಿಂದ ದೂರ ನಿಂತಿದೆ. ಎಂದೂ ಉದ್ಯಮಪತಿಗಳು, ರಾಜಕಾರಣಿಗಳು ಹಾಗೂ ಅಭಿಮತ ನಿರೂಪಕರ ಪ್ರಭಾವಕ್ಕೆ ಒಳಗಾಗಿಲ್ಲ. ಇದು ಬಹಳ ಮುಖ್ಯವಾದದ್ದು. ಯಾಕೆಂದರೆ, ಇದುವೇ ನಮಗೆ ಸಮಾಜದ ಕಟ್ಟಕಡೆಯ ವ್ಯಕ್ತಿಯ ಧ್ವನಿಯಾಗಲು ಮತ್ತು ಆಡಳಿತಗಾರರನ್ನು ಉತ್ತರದಾಯಿಗಳನ್ನಾಗಿಸಲು ಶಕ್ತಿ ನೀಡಿದೆ.
Related Articles
ಈ 50ನೇ ವರ್ಷದಲ್ಲಿ ನಿಮ್ಮ ಕಲ್ಯಾಣ ಮತ್ತು ಸಮೃದ್ಧಿಗಳನ್ನು ಧನಾತ್ಮಕ ವಾಗಿ ಪ್ರಭಾವಿಸುವ ಅನೇಕ ಹೊಸ ಯೋಜನೆಗಳನ್ನು ನಾವು ಹಮ್ಮಿಕೊಳ್ಳಲಿದ್ದೇವೆ; ಸಮುದಾಯದ ಹಿತ, ಸ್ಥಳೀಯ ಯುವಜನರು ಮತ್ತು ಆರ್ಥಿಕ ಅಭಿವೃದ್ಧಿಗೆ ಪೂರಕವಾಗುವ ಹಲವಾರು ಚಿಂತನೆಗಳು ಕಾರ್ಯಸ್ವರೂಪ ಪಡೆಯಲಿವೆ. ಜನರ ಅಗತ್ಯಗಳನ್ನು ತನ್ನ ಅನುಭವದ ಮುಂಗಾಣೆRಯಿಂದ ದರ್ಶಿಸಿ ಅದಕ್ಕೆ ದನಿಯಾಗುವುದಕ್ಕೆ ಪ್ರಥಮ ಆದ್ಯತೆ. ಇವೆಲ್ಲವನ್ನೂ ನೀವು ಬೆಂಬಲಿಸಿ ಪೋಷಿಸುವಿರಿ ಎಂಬ ಸದಾಶಯ ನನ್ನದು.
Advertisement
– ಟಿ. ಗೌತಮ್ ಪೈ ನಿರ್ದೇಶಕರು