Advertisement

ಮಣಿನಾಲ್ಕೂರು: ಪಾಳುಬಿದ್ದ ವೃತ್ತಿಪರ ಶಿಕ್ಷಣ ಕೇಂದ್ರ

10:36 AM Jun 24, 2018 | |

ಪುಂಜಾಲಕಟ್ಟೆ : ಸುಮಾರು 18 ವರ್ಷಗಳ ಕಾಲ ಯುವಕರಿಗೆ ವೃತ್ತಿಪರ ಶಿಕ್ಷಣದ ಪಾಠ ಹೇಳಿಕೊಟ್ಟ ಜೆ.ಒ.ಸಿ. (ಜಾಬ್‌
ಓರಿಯಂಟಲ್‌ ಕೋರ್ಸ್‌) ತರಬೇತಿ ಕೇಂದ್ರ ಕಳೆದ ಆರು ವರ್ಷಗಳಿಂದ ಪಾಳು ಬಿದ್ದು ಹೀನಾಯ ಸ್ಥಿತಿಯಲ್ಲಿದೆ. ಬಂಟ್ವಾಳ ತಾಲೂಕಿನ ಮಣಿನಾಲ್ಕೂರು ಸರಕಾರಿ ಪ.ಪೂ. ಕಾಲೇಜಿನಲ್ಲಿ ಎಸೆಸೆಲ್ಸಿ ಕಲಿತ ವಿದ್ಯಾರ್ಥಿಗಳಿಗಾಗಿ ವೃತ್ತಿಪರ ಶಿಕ್ಷಣದ ಅಟೋಮೊಬೈಲ್‌ ಮೆಕ್ಯಾನಿಕಲ್‌ ಕೋರ್ಸ್‌ ಅನ್ನು ಈ ತರಬೇತಿ ಕೇಂದ್ರ 1994ರಿಂದ 2011ರ ವರೆಗೆ ನೀಡುತ್ತಾ ಬಂದಿದೆ. ಬಳಿಕ ತಾಂತ್ರಿಕ ನೆಪವೊಡ್ಡಿ ಕಾರ್ಯ ಸ್ಥಗಿತಗೊಂಡಿರುವ ಈ ತರಬೇತಿ ಸಂಸ್ಥೆ ಅನಾಥ ಸ್ಥಿತಿಯಲ್ಲಿದೆ.

Advertisement

ತುಕ್ಕು ಹಿಡಿದ ವಾಹನಗಳು
ಭೂತ ಬಂಗ್ಲೆಯಂತೆ ಕಾಣುವ ತರಬೇತಿ ಕೇಂದ್ರದೊಳಗೆ ವಿದ್ಯಾರ್ಥಿಗಳ ತರಬೇತಿಗೆ ಬಳಸಲಾಗುತ್ತಿದ್ದ ಮಾರುತಿ ಕಾರು, ಬೈಕ್‌ ಗಳು ತುಕ್ಕು ಹಿಡಿದ ಸ್ಥಿತಿಯಲ್ಲಿದ್ದರೆ, ಸ್ಟೀಲ್‌ ಕಪಾಟು, ಟಿ.ವಿ., ಮೇಜು, ಕುರ್ಚಿಗಳು, ಮೆಕ್ಯಾನಿಕಲ್‌ ಸಲಕರಣೆ ಸಹಿತ ಇತರ ಸೊತ್ತುಗಳು ಧೂಳು ಹಿಡಿದು ಉಪಯೋಗಕ್ಕೆ ಬಾರದ ಸ್ಥಿತಿಯಲ್ಲಿವೆ. 

ಮನವಿಗೆ ಸ್ಪಂದನೆಯಿಲ್ಲ
ಉಪಯೋಗವಿಲ್ಲದ ಈ ತರಬೇತಿ ಕೇಂದ್ರವನ್ನು ಪುನರಾರಂಭಿಸುವಂತೆ 2012ರಲ್ಲಿ ಮಣಿನಾಲ್ಕೂರು ಪ.ಪೂ. ಕಾಲೇಜಿನ ಅಭಿವೃದ್ಧಿ ಸಮಿತಿಯ ಪದಾಧಿಕಾರಿ ವೆಂಕಟರಮಣ ಐತಾಳ್‌ ಅವರು ಮಾಜಿ ಸಚಿವ ರಮಾನಾಥ ರೈ ಅವರಿಗೆ ಮನವಿ ಸಲ್ಲಿಸಿದ್ದರು. ಆದರೆ ತಾಂತ್ರಿಕ ನೆಪವೊಡ್ಡಿದ್ದ ಇಲಾಖೆ ಈ ಕೇಂದ್ರದತ್ತ ಗಮನ ಹರಿಸಿಲ್ಲ. ಹೀಗಾಗಿ ದಿನದಿಂದ ದಿನಕ್ಕೆ ಕಟ್ಟಡದ ಸ್ಥಿತಿ ಶಿಥಿಲಗೊಳ್ಳುತ್ತಾ ಸಾಗುತ್ತಿದ್ದು, ಸೊತ್ತುಗಳು ನಿರುಪಯುಕ್ತವಾಗಿ ಜನರ ತೆರಿಗೆ ಹಣ ಪೋಲಾಗುತ್ತಿದೆ. ಗ್ರಾಮೀಣ ಭಾಗದ ಹಲವಾರು ವಿದ್ಯಾರ್ಥಿಗಳು ಕೂಡ ವೃತ್ತಿಪರ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ.

ಕೇಂದ್ರ ಹಾಗೂ ರಾಜ್ಯ ಸರಕಾರಗಳು ಕೌಶಲಾ ಭಿವೃದ್ಧಿ, ವೃತ್ತಿಪರ ಶಿಕ್ಷಣದ ಹೆಸರಿನಲ್ಲಿ ಅನೇಕ ಹೊಸ ಹೊಸ ಯೋಜನೆಗಳನ್ನು ಜಾರಿಗೆ ತರುತ್ತಿವೆ. ಒಂದು ಕಾಲದಲ್ಲಿ ಅದೆಷ್ಟೋ ವಿದ್ಯಾರ್ಥಿಗಳಿಗೆ ಆಶಾ ಕಿರಣವಾಗಿದ್ದ ಇಂತಹ ತರಬೇತಿ ಕೇಂದ್ರಗಳನ್ನು ಪುನಶ್ಚೇತನಗೊಳಿಸುವುದರ ಕಡೆಗೂ ಸಂಬಂಧಿಸಿದ ಇಲಾಖೆ ಗಮನಹರಿಸಬೇಕಾದ ಅನಿವಾರ್ಯತೆ ಇದೆ.

ಸೂಕ್ತ ಕ್ರಮ
ಮಣಿನಾಲ್ಕೂರು ಜೆ.ಒ.ಸಿ. ತರಬೇತಿ ಕೇಂದ್ರ ಸ್ಥಗಿತಗೊಂಡಿರುವ ಬಗ್ಗೆ ಮಾಹಿತಿ ಬಂದಿದೆ. ಈ ಬಗ್ಗೆ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಇಲಾಖಾಧಿಕಾರಿಗಳಿಗೆ ತಿಳಿಸಲಾಗುವುದು.
– ರಾಜೇಶ್‌ ನಾೖಕ್‌ ಉಳಿಪ್ಪಾಡಿಗುತ್ತು
ಶಾಸಕರು, ಬಂಟ್ವಾಳ

Advertisement
Advertisement

Udayavani is now on Telegram. Click here to join our channel and stay updated with the latest news.

Next