ಅಗರ್ತಲಾ: 70 ವರ್ಷದ ಬಿಜೆಪಿ ನಾಯಕ ಡಾ|ಮಾಣಿಕ್ ಸಹಾ ಅವರು ಸೂಕ್ಷ್ಮ ಗಡಿ ರಾಜ್ಯ ತ್ರಿಪುರಾದ ಮುಖ್ಯಮಂತ್ರಿಯಾಗಿ ಬುಧವಾರ ಪ್ರಮಾಣ ವಚನ ಸ್ವೀಕರಿಸಿದರು. ರತನ್ ಲಾಲ್ ನಾಥ್, ಪ್ರಣಜಿತ್ ಸಿಂಘ ರಾಯ್, ಸಂತಾನಾ ಚಕ್ಮಾ, ಟಿಂಕು ರಾಯ್ ಮತ್ತು ಬಿಕಾಶ್ ದೆಬ್ಬರ್ಮಾ ಸೇರಿದಂತೆ ಇನ್ನೂ ಎಂಟು ಮಂದಿ ಸಚಿವರಿಗೆ ರಾಜ್ಯಪಾಲ ಸತ್ಯದೇವ್ ನಾರಾಯಣ್ ಆರ್ಯ ಅವರು ಪ್ರಮಾಣ ವಚನ ಬೋಧಿಸಿದರು.
ಪ್ರಮಾಣ ವಚನ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ಹಾಗೂ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.
ಸಂಪುಟದಲ್ಲಿ ಸಿಎಂ ಸಹಾ ಸೇರಿ ಬಿಜೆಪಿಯಿಂದ ಎಂಟು ಮತ್ತು ಅದರ ಮಿತ್ರ ಪಕ್ಷವಾದ ಐಪಿಎಫ್‌ಟಿಯ ಒಬ್ಬರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲಾಯಿತು. ಈ ಪೈಕಿ ಐವರು ಹೊಸ ಮುಖಗಳಾಗಿದ್ದರೆ, ಹಿಂದಿನ ಸಂಪುಟದಲ್ಲಿದ್ದ ನಾಲ್ವರು ಸಚಿವರು ಹೊಸ ಸಂಪುಟದಲ್ಲಿ ಸ್ಥಾನ ಪಡೆದಿದ್ದಾರೆ.
60 ಸದಸ್ಯರ ಸದನದಲ್ಲಿ ಬಿಜೆಪಿ 32 ಸ್ಥಾನಗಳನ್ನು ಗೆದ್ದುಕೊಂಡರೆ, ಅದರ ಮಿತ್ರ ಪಕ್ಷವಾದ ಐಪಿಎಫ್‌ಟಿ ಒಂದು ಸ್ಥಾನವನ್ನು ಗಳಿಸಿ ಸ್ಪಷ್ಟ ಬಹುಮತ ಪಡೆದಿತ್ತು.
ತ್ರಿಪುರಾದ ಒಳನಾಡಿನಲ್ಲಿ ಕಳಪೆ ಕಾನೂನು ಮತ್ತು ಸುವ್ಯವಸ್ಥೆಯ ಪರಿಸ್ಥಿತಿಯಿಂದಾಗಿ ಅವರ ಜನಪ್ರಿಯತೆಯ ರೇಟಿಂಗ್ ಕುಸಿಯುತ್ತಿದೆ ಎಂದು ಕಂಡುಬಂದ ನಂತರ ನಾಯಕತ್ವ ಬದಲಾವಣೆಯ ಭಾಗವಾಗಿ ಬಿಜೆಪಿ ಬಿಪ್ಲಬ್ ಕುಮಾರ್ ದೇಬ್ ಅವರ ಸ್ಥಾನಕ್ಕೆ ಮಾಣಿಕ್ ಸಹಾ ಅವರನ್ನು 2022 ರಲ್ಲಿ ಮುಖ್ಯಮಂತ್ರಿಯನ್ನಾಗಿ ನೇಮಕ ಮಾಡಿತ್ತು.