Advertisement

ಪ್ರಣಾಳಿಕೆ ದೊಡ್ಡ ಶಕ್ತಿ ನೀಡಿದೆ: ದಿನೇಶ್‌

12:37 AM Apr 04, 2019 | Lakshmi GovindaRaju |

ಬೆಂಗಳೂರು: ಕಾಂಗ್ರೆಸ್‌ ಬಿಡುಗಡೆ ಮಾಡಿರುವ ಪ್ರಣಾಳಿಕೆಯಿಂದ ಚುನಾವಣೆ ಎದುರಿಸಲು ಪಕ್ಷಕ್ಕೆ ದೊಡ್ಡ ಶಕ್ತಿ ಬಂದಿದೆ. ನ್ಯಾಯ್‌ ಯೋಜನೆ ಮುಖಾಂತರ ಬಡವರನ್ನು ಮೇಲೆ ತರುವ ಪ್ರಯತ್ನ ಮಾಡಿದ್ದೇವೆ.

Advertisement

ಮಹಿಳೆಯರಿಗೆ ಮೀಸಲಾತಿ, ರೈತರ ಸಂಪುರ್ಣ ಸಾಲ ಮನ್ನಾ ಮಾಡಲು ನಿರ್ಧರಿಸಿರುವುದು ಕಾಂಗ್ರೆಸ್‌ಗೆ ಅನುಕೂಲವಾಗುತ್ತದೆ ಎಂದು  ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಹೇಳಿದ್ದಾರೆ.

ಪಕ್ಷದ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನ್ಯಾಯ ಯೋಜನೆ ಬಗ್ಗೆ ಬಿಜೆಪಿಯವರು ಟೀಕೆ ಮಾಡುತ್ತಿದ್ದಾರೆ. ಬಿಜೆಪಿಯವರು ಮಾಡದಿರುವ ಕೆಲಸವನ್ನು ರಾಹುಲ್ ಗಾಂಧಿ ಮಾಡಿದ್ದಾರೆ. ಅವರು ಇದುವರೆಗೂ ಪ್ರಧಾನಿ ಮೋದಿ ರೀತಿ ಸುಳ್ಳು ಹೇಳಿಲ್ಲ.

ನಾವು ಆಹಾರ ಭದ್ರತೆ, ನರೇಗಾ, ಆರ್‌ಟಿಇ ಕಾಯ್ದೆಗಳನ್ನು ಜಾರಿಗೆ ತಂದಿದ್ದೆವು.  ಮೋದಿಯವರು ಈ ರೀತಿಯ ಒಂದು ಯೋಜನೆಯನ್ನೂ ಜಾರಿಗೆ ತರಲಿಲ್ಲ. ಬರೀ ದೇಶ ಒಡೆಯುವ, ಸಂವಿಧಾನ ಬದಲಾಯಿಸುವ ಮಾತನಾಡುತ್ತಾರೆ ಎಂದು ಆರೋಪಿಸಿದರು.

ಕೇಂದ್ರದಲ್ಲಿ ಯುಪಿಎ ಅಧಿಕಾರಕ್ಕೆ ಬಂದರೆ, ಜಿಎಸ್‌ಟಿಯನ್ನೂ ಸರಳೀಕರಣಗೊಳಿಸುತ್ತೇವೆ. ಪೆಟ್ರೋಲಿಯಂ ಉತ್ಪನ್ನಗಳನ್ನು ಜಿ ಎಸ್‌ಟಿ ವ್ಯಾಪ್ತಿಗೆ ತರುತ್ತೇವೆ. ಇದರಿಂದ ಸಾಮಾನ್ಯ ಜನರಿಗೆ ದೊಡ್ಡ ಅನುಕೂಲವಾಗುತ್ತದೆ.

Advertisement

ಪ್ರಣಾಳಿಕೆಯಲ್ಲಿ ಶಿಕ್ಷಣಕ್ಕೆ ಜಿಡಿಪಿ 6%  ಆರೋಗ್ಯಕ್ಕೆ 3% ಮೀಸಲಿಟ್ಟು ಸುಧಾರಣೆಗೆ ಆದ್ಯತೆ ನೀಡಿದ್ದಾರೆ. ಈ ಪ್ರಣಾಳಿಕೆಯ ಹಿಂದೆ  ಮಾಜಿ ಪ್ರಧಾನಿ  ಮನಮೋಹನ್‌ಸಿಂಗ್‌ ಹಾಗೂ ಪಿ. ಚಿದಂಬರಂ ಅವರ ಶ್ರಮ ಇದೆ  ಎಂದರು.

ಎಲೆಕ್ಟ್ರೋಲ್‌ ಬಾಂಡ್‌ ದೊಡ್ಡ ಹಗರಣ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಎಲೆಕ್ಟ್ರೋಲ್‌ ಬಾಂಡ್‌ ದೊಡ್ಡ ಹಗರಣವಾಗಿದ್ದು, ಕಾನೂನಾತ್ಮಕ ಭ್ರಷ್ಟಾಚಾರಕ್ಕೆ ಅವಕಾಶ ಕಲ್ಪಿಸಿದಂತಾಗಿದೆ. ಬಿಜೆಪಿಗೆ ದಾವೂದ್‌ ಇಬ್ರಾಹಿಂ, ನೀರವ್‌ ಮೋದಿ, ವಿಜಯ್‌ ಮಲ್ಯರಂಥವರೂ ದೇಣಿಗೆ ನೀಡಬಹುದು. ಯಾರು ಯಾವ ಪಕ್ಷಕ್ಕೆ ದೇಣಿಗೆ ನೀಡಿದ್ದಾರೆ ಎಂದು ಯಾರಿಗೂ ತಿಳಿಯುವುದಿಲ್ಲ ಎಂದು ಹೇಳಿದರು.

ಸುಳ್ಳು ಹೇಳುವುದೇ ಆರ್‌ಎಸ್‌ಎಸ್‌ ಡಿಎನ್‌ಎಯಲ್ಲಿ ಬಂದಿದೆ.  ಬಿಜೆಪಿಯವರಲ್ಲೂ  ಅದೇ ಡಿಎನ್‌ಎ ಇದೆ. ಅವರು ನೂರು ಸಾರಿ ಸುಳ್ಳು ಹೇಳಿ ಸತ್ಯ ಮಾಡಲು ಹೋರಟಿದ್ದಾರೆ. ನಾವು ಅವರಂತೆ ಸುಳ್ಳು ಹೇಳಿ ಮತ ಪಡೆಯುತ್ತಿಲ್ಲ ಎಂದು ಕಿಡಿಕಾರಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next