ಭಾಭರ್/ಹೊಸದಿಲ್ಲಿ: “ಕಾಂಗ್ರೆಸ್‌ನಿಂದ ಅಮಾನತುಗೊಂಡಿರುವ ಮಣಿಶಂಕರ್ ಅಯ್ಯರ್ ನನ್ನನ್ನು ತಮ್ಮ ಹಾದಿಯಿಂದ ಇಲ್ಲವಾಗಿಸಲು ಪಾಕಿಸ್ಥಾನದಲ್ಲಿ ಸುಪಾರಿ ನೀಡಿದ್ದರು. ಭಾರತ ಮತ್ತು ಪಾಕ್ ನಡುವೆ ಶಾಂತಿ ಸ್ಥಾಪನೆ ಆಗಬೇಕೆಂ ದರೆ ಮೋದಿ ಅವರನ್ನು ನಮ್ಮ ಹಾದಿಯಿಂದ ಪಕ್ಕಕ್ಕೆ ಸರಿಸಬೇಕು ಎಂದು ಹೇಳಿದ್ದರು. ಇದರ ಅರ್ಥವೇನು?’
ಹೀಗೆಂದು ಪ್ರಶ್ನಿಸಿದ್ದು ಪ್ರಧಾನಿ ನರೇಂದ್ರ ಮೋದಿ. ತಮ್ಮನ್ನು “ನೀಚ’ ಎಂಬ ಪದ ಬಳಸಿ ವಿವಾದಕ್ಕೀಡಾಗಿರುವ ಕಾಂಗ್ರೆಸ್ ನಾಯಕ ಅಯ್ಯರ್ ಕುರಿತ ಆಕ್ರೋಶವನ್ನು ಶುಕ್ರವಾರವೂ ಹೊರಹಾಕಿರುವ ಮೋದಿ ಅವರು, ಬನಸ್ಕಾಂತಾ ದಲ್ಲಿ ನಡೆದ ಚುನಾವಣಾ ಪ್ರಚಾರ ರ್ಯಾಲಿಯಲ್ಲಿ ಇಂತಹ ನೇರ ಆರೋಪವನ್ನು ಮಾಡಿದರು. ಜತೆಗೆ, ನಾನು ಮಾಡಿದ ತಪ್ಪೇನು? ಜನರು ನನ್ನನ್ನು ಆಶೀರ್ವದಿಸಿದ್ದೇ ತಪ್ಪಾ ಎಂದೂ ಅಲ್ಲಿ ಸೇರಿದ್ದ ಬೆಂಬಲಿಗರನ್ನು ಪ್ರಶ್ನಿಸಿದರು.
2015ರಲ್ಲಿ ಅಯ್ಯರ್ ನೆರೆಯ ರಾಷ್ಟ್ರದ ಟಿವಿ ವಾಹಿನಿಯೊಂದರ ಚರ್ಚೆ ವೇಳೆ ಪ್ರಧಾನಿ ಮೋದಿಯನ್ನು ಕಿತ್ತೂಗೆಯದ ಹೊರತು ಎರಡೂ ರಾಷ್ಟ್ರಗಳ ನಡುವೆ ಶಾಂತಿ ಮಾತುಕತೆಯಲ್ಲಿ ಪ್ರಗತಿ ಯಾಗದು ಎಂದಿದ್ದರು. “ರಾಸ್ತೇ ಸೇ ಹಟಾನಾ (ದಾರಿಯಿಂದ ಸರಿಸುವುದು) ಎಂಬ ಶಬ್ದದ ಅರ್ಥ ಏನು? ನನ್ನ ವಿರುದ್ಧ ಸುಪಾರಿ ಕೊಡಲು ಪಾಕಿಸ್ಥಾನಕ್ಕೆ ಹೋಗಿದ್ದಿರಾ? ಇಂಥ ಮಾತುಗಳನ್ನಾ ಡಿದ ಅಯ್ಯರ್ ವಿರುದ್ಧ ಕಾಂಗ್ರೆಸ್ ಕ್ರಮ ಕೈಗೊಂಡಿರಲಿಲ್ಲ. ಅದನ್ನು ಸಮರ್ಥಿಸಿಕೊಳ್ಳಲು ಯತ್ನಿಸಿತು ಎಂದೂ ಆರೋಪಿಸಿದರು. ಜತೆಗೆ, ಇದೇ ಮೊದಲಲ್ಲ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಹಾಗೂ ಅವರ ಕುಟುಂಬದವರು ಕೂಡ ನನ್ನನ್ನು ಹಲವು ಬಾರಿ ನಿಂದಿಸಿದ್ದರು ಎಂದೂ ಹೇಳಿದರು.
ಇದೇ ವೇಳೆ, ಉದಯಪುರದ ರ್ಯಾಲಿಯಲ್ಲಿ ಮಾತನಾಡಿದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್‌ಗಾಂಧಿ, “ಇದು ಮೋದಿ ಅಥವಾ ರಾಹುಲ್‌ಗೆ ಸಂಬಂಧಿಸಿದ ಚುನಾವಣೆಯಲ್ಲ. ಇದು ಗುಜರಾತ್ ಜನರಿಗೆ ಸಂಬಂಧಿಸಿದ್ದು’ ಎಂದರು. ಜತೆಗೆ ಬಿಜೆಪಿ ಸರಕಾರವು 6.5 ಲಕ್ಷ ಎಕರೆ ಬುಡಕಟ್ಟು ಜನಾಂಗದವರ ಭೂಮಿಯನ್ನು ಕಸಿದುಕೊಂಡು, ಸೂಕ್ತ ಪರಿಹಾರವನ್ನೂ ನೀಡಿಲ್ಲ ಎಂದು ಆರೋಪಿಸಿದರು.
ಬಿಜೆಪಿ ಪ್ರಣಾಳಿಕೆ ಬಿಡುಗಡೆ: ಮೊದಲ ಹಂತದ ಮತದಾನದ ಮುನ್ನಾ ದಿನವೇ ಬಿಜೆಪಿ ಪ್ರಣಾಳಿಕೆ ಬಿಡುಗಡೆ ಮಾಡಿದೆ. ರೈತರ ಆದಾಯ ದುಪ್ಪಟ್ಟು, ಬೆಳೆಗಳಿಗೆ ಉತ್ತಮ ಬೆಲೆ, ರಾಜ್ಯದ ಶೇ.10ರ ಆರ್ಥಿಕ ಪ್ರಗತಿ ಇನ್ನಷ್ಟು ಸುಧಾರಣೆ, 5 ವರ್ಷ ಗಳಲ್ಲಿ 50 ಲಕ್ಷ ಮನೆ ನಿರ್ಮಾಣ, ವಿಧವೆಯರ ಪಿಂಚಣಿ ಹೆಚ್ಚಳ, ವಿಶ್ವದರ್ಜೆಯ ಶಿಕ್ಷಣ ಸಂಸ್ಥೆಗಳ ಸ್ಥಾಪನೆ, ಆದಿವಾಸಿ ವಿವಿ, ಉದ್ಯೋಗ ಸೃಷ್ಟಿ ಸೇರಿ ಹಲವು ಆಶ್ವಾಸನೆಗಳನ್ನು ನೀಡಲಾಗಿದೆ.
ಕಾಂಗ್ರೆಸ್‌ಗೆ ಹಾನಿಯಾದ್ರೆ ಶಿಕ್ಷೆ ವಿಧಿಸಿ: ಅಯ್ಯರ್
ವಿವಾದಾತ್ಮಕ ಹೇಳಿಕೆ ನೀಡಿ ಸಸ್ಪೆಂಡ್ ಆದ ಅಯ್ಯರ್ ಅವರು ಶುಕ್ರವಾರ ಪ್ರತಿಕ್ರಿಯಿಸಿದ್ದು, “ನನ್ನ ಹೇಳಿಕೆಯಿಂದಾಗಿ ಗುಜರಾತ್‌ನಲ್ಲಿ ಕಾಂಗ್ರೆಸ್‌ಗೆ ಏನಾದರೂ ಹಾನಿ ಆದರೆ, ಯಾವುದೇ ಶಿಕ್ಷೆಯನ್ನು ಎದುರಿಸಲು ನಾನು ಸಿದ್ಧ,’ ಎಂದು ನುಡಿದಿದ್ದಾರೆ. ಜತೆಗೆ, ಕಾಂಗ್ರೆಸ್ ನನಗೆ ಬಹಳಷ್ಟನ್ನು ನೀಡಿದೆ. ಕಾಂಗ್ರೆಸ್ ಇಲ್ಲದೆ ದೇಶಕ್ಕೆ ಭವಿಷ್ಯವಿಲ್ಲ ಎಂದೂ ಹೇಳಿದ್ದಾರೆ. ಗುಜರಾತ್‌ನಲ್ಲಿ ರಾಹುಲ್‌ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಉತ್ತಮ ಪ್ರದರ್ಶನ ತೋರುತ್ತಿದೆ. ನನ್ನ ಹೇಳಿಕೆಯಿಂದ ಪಕ್ಷಕ್ಕೆ ಹಾನಿಯಾಗಿದ್ದರೆ, ಅದಕ್ಕೆ ನನ್ನ ವಿಷಾದವಿದೆ. ಪಕ್ಷ ಏನು ಶಿಕ್ಷೆ ಕೊಟ್ಟರೂ ಸ್ವೀಕರಿಸುತ್ತೇನೆ ಎಂದಿದ್ದಾರೆ.