ವಿಟ್ಲ : ವಿದ್ಯಾ ಸಂಸ್ಥೆಯನ್ನು ಸ್ಥಾಪಿಸಿದಾಗ ಇಟ್ಟುಗೊಂಡ ಗುರಿ ಉದ್ದೇಶಗಳು ಪೂರ್ಣಗೊಳ್ಳುತ್ತಿವೆ. ಸಂಸ್ಥೆಯ ಅಭಿವೃದ್ಧಿಯಲ್ಲಿ ಹೆತ್ತವರ ಕೊಡುಗೆಯೂ ಪ್ರಮುಖವಾಗಿದೆ. ಮಕ್ಕಳಿಗೆ ಸಲ್ಲಬೇಕಾದ ವಿದ್ಯಾಭ್ಯಾಸವನ್ನು ವ್ಯವಸ್ಥಿತ ರೀತಿಯಲ್ಲಿ ತಲುಪಿಸುವ ಪ್ರಯತ್ನದಲ್ಲಿ ನಾವಿದ್ದೇವೆ. ಅದಕ್ಕೆ ಹೆತ್ತವರು ಕೈ ಜೋಡಿಸಬೇಕು ಎಂದು ಮಾಣಿ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯ ಸಂಚಾಲಕ ಜೆ.ಪ್ರಹ್ಲಾದ್ ಶೆಟ್ಟಿ ಹೇಳಿದ್ದಾರೆ.
ಅವರು ಶನಿವಾರ ಶಾಲೆಯಲ್ಲಿ ನಡೆದ ಹೆತ್ತವರ ಸಭೆಯಲ್ಲಿ ಮಾತನಾಡಿದರು. ಆಡಳಿತಾಧಿಕಾರಿ ಸಿ.ಶ್ರೀಧರ್ ಮಾತನಾಡಿ ಅರ್ಪಣಾ ಮನೋಭಾವದ ಶಿಕ್ಷಕರು ಹಾಗೂ ಆಡಳಿತ ಮಂಡಳಿಯ ಸಹಕಾರದೊಂದಿಗೆ ನಮ್ಮ ವಿದ್ಯಾ
ಸಂಸ್ಥೆ ಉತ್ತುಂಗಕ್ಕೇರುತ್ತಿದೆ ಎಂದರು.
ರಕ್ಷಕ -ಶಿಕ್ಷಕ ಸಂಘದ ಅಧ್ಯಕ್ಷ ಬಾಲಕೃಷ್ಣ ಆಳ್ವ ಕೊಡಾಜೆ ಅವರು ಮಾತನಾಡಿ, ಪ್ರೌಢಾವಸ್ಥೆಯ ಮಗು ಸಮಾಜದಲ್ಲಿ ಬೆರೆಯುವ ಸಂದರ್ಭ ಹೆತ್ತವರು ಜಾಗರೂಕರಾಗಿರಬೇಕು ಎಂದರು.
ಕಾರ್ಯಕಾರಿ ಸಮಿತಿಯ ಸದಸ್ಯೆ ಕಸ್ತೂರಿ ಪಿ. ಶೆಟ್ಟಿ ಹೆತ್ತವರ ಪರವಾಗಿ ಮಾತನಾಡಿ ಪ್ರತಿಯೊಂದು ಮಗುವಿನಲ್ಲೂ ಪ್ರತಿಭೆ ಅಡಗಿರುತ್ತದೆ. ಮಕ್ಕಳ ಭಾವನೆಗಳಿಗೆ ನಾವು ಸ್ಪಂದಿಸಬೇಕಾದುದು ಅಗತ್ಯ ಎಂದರು. ಆಡಳಿತ ಮಂಡಳಿ ಅಧ್ಯಕ್ಷ ಬಿ.ಎಸ್.ನಾ„ಕ್, ಉಪಾಧ್ಯಕ್ಷ ಅಪ್ರಾಯ ಪೈ, ಕಾರ್ಯದರ್ಶಿ ಕೆ. ನಾರಾಯಣ ಶೆಟ್ಟಿ ,
ಮುಖ್ಯೋಪಾಧ್ಯಾಯಿನಿಯರಾದ ವಿಜಯಲಕ್ಷ್ಮೀ ವಿ. ಶೆಟ್ಟಿ, ಗ್ರೇಸ್ ಪಿ. ಸಲ್ಪಾನಾ ಮತ್ತಿತರರು ಉಪಸ್ಥಿತರಿದ್ದರು. ಇದೇ ಸಂದರ್ಭ ಕಳೆದ ಎಸೆಸೆಲ್ಸಿ ಪರೀಕ್ಷೆಯಲ್ಲಿ ಅತ್ಯುನ್ನತ ಅಂಕ ಗಳಿಸಿದ ಹಾಗೂ ವಿಶಿಷ್ಟ ಶ್ರೇಣಿ ಪಡೆದ ವಿದ್ಯಾರ್ಥಿಗಳನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಕಾರ್ಯಕಾರಿ ಸಮಿತಿ ಸದಸ್ಯೆ ಶಾಲಿನಿ ಅವರು ಗತವರ್ಷದ ಸಭೆಯ ವರದಿ ಮಂಡಿಸಿದರು. ಆಶಿತಾ ಎಸ್. ಶೆಟ್ಟಿ ಲೆಕ್ಕಪತ್ರ ಮಂಡಿಸಿದರು. ರಕ್ಷಕ – ಶಿಕ್ಷಕ ಸಂಘದ ಉಪಾಧ್ಯಕ್ಷೆ ಲಕ್ಷ್ಮೀ ಸ್ವಾಗತಿಸಿ, ಶಿಕ್ಷಕಿ ಮಂಜುಳಾ ಎಚ್.ಗೌಡ ವಂದಿಸಿದರು. ಶಿಕ್ಷಕಿ ಹರಿಣಾಕ್ಷಿ ಕಾರ್ಯಕ್ರಮ ನಿರ್ವಹಿಸಿದರು.