ವಿಧಾನ ಪರಿಷತ್ತು: ನಗರದಲ್ಲಿ ರಸ್ತೆ ಮಧ್ಯದಲ್ಲಿ ಮ್ಯಾನ್‌ಹೋಲ್‌ಗಳಿದ್ದು, ಸಂಚಾರಕ್ಕೆ ತೊಂದರೆಯಾಗುವಂತಿದ್ದರೆ ಅವುಗಳನ್ನು ಸರಿಪಡಿಸಲು ಕ್ರಮ ಕೈಗೊಳ್ಳುವುದಾಗಿ ಸಚಿವ ಕೆ.ಜೆ.ಜಾರ್ಜ್ ಭರವಸೆ ನೀಡಿದರು.
ಬಿಜೆಪಿ ಸದಸ್ಯೆ ತಾರಾ ಅನುರಾಧಾ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಹಿಂದೆಲ್ಲಾ ರಸ್ತೆಯಂಚಿನಲ್ಲೇ ಒಳಚರಂಡಿ ಕೊಳವೆ, ಮ್ಯಾನ್‌ಹೋಲ್‌ಗಳಿದ್ದವು. ರಸ್ತೆ ವಿಸ್ತರಣೆ ಬಳಿಕ ಅವು ರಸ್ತೆಯ ಮಧ್ಯಭಾಗಕ್ಕೆ ಬಂದಿವೆ.
ಟೆಂಡರ್‌ಶ್ಯೂರ್ ರಸ್ತೆ ಹಾಗೂ ಬಿಎಂಆರ್‌ಸಿಎಲ್ ಕಾಮಗಾರಿ ಸ್ಥಳದಲ್ಲಷ್ಟೇ ಕೊಳವೆಗಳನ್ನು ಸ್ಥಳಾಂತರಿಸಲಾಗುತ್ತಿದೆ. ನಗರದಲ್ಲಿ 1.50 ಲಕ್ಷ ಮ್ಯಾನ್‌ಹೋಲ್‌ಗಳಿದ್ದು, 2014-15ನೇ ಸಾಲಿನಲ್ಲಿ 7,350, 2015-16ನೇ ಸಾಲಿನಲ್ಲಿ 10,090 ಹಾಗೂ 2016-17ನೇ ಸಾಲಿನಲ್ಲಿ 16,900 ಮ್ಯಾನ್‌ಹೋಲ್‌ಗಳನ್ನು ದುರಸ್ತಿಪಡಿಸಲಾಗಿದೆ ಎಂದು ಸದನಕ್ಕೆ ಮಾಹಿತಿ ನೀಡಿದರು.
ಅಪಾರ್ಟ್‌ಮೆಂಟ್‌ನ ಎಸ್‌ಟಿಪಿ ದುರಸ್ತಿ ವೇಳೆ ಮೂವರು ಕಾರ್ಮಿಕರು ಹಾಗೂ ಖಾಸಗಿ ಹೋಟೆಲ್‌ನ ಒಳಚರಂಡಿ ಅವ್ಯವಸ್ಥೆ ದುರಸ್ತಿ ವೇಳೆ ಇಬ್ಬರು ಕಾರ್ಮಿಕರು ಮೃತಪಟ್ಟಿದ್ದಾರೆ. ಸುಪ್ರೀಂ ಕೋರ್ಟ್ ಆದೇಶದಂತೆ ಮಾರ್ಗಸೂಚಿ ನೀಡಿದ್ದರೂ ಪಾಲನೆಯಾಗುತ್ತಿಲ್ಲ.
ಜಲಮಂಡಳಿಯಲ್ಲಿ ನುರಿತ ಸಿಬ್ಬಂದಿಯಿದ್ದರೂ ಕಡಿಮೆ ದರದ ಕಾರಣಕ್ಕೆ ಖಾಸಗಿ ಸಿಬ್ಬಂದಿ ಬಳಸುವಾಗ ಅನಾಹುತಗಳು ಸಂಭವಿಸುತ್ತಿವೆ. ಮೃತಪಟ್ಟವರ ಕುಟುಂಬಕ್ಕೆ ಪರಿಹಾರ ನೀಡಲಾಗಿದೆ. ಸಂಬಂಧಪಟ್ಟವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಾಗಿದ್ದು, ಎಫ್ಐಆರ್ ದಾಖಲಾಗಿದೆ ಎಂದು ಹೇಳಿದರು.
ಪಾದಚಾರಿಗಳಿಗೆ ಒತ್ತು: ಪಾದಚಾರಿಗಳ ಸುಗಮ ಸಂಚಾರಕ್ಕೆ ಆದ್ಯತೆ ನೀಡಲಾಗಿದೆ ಎಂದು ಸಚಿವ ಕೆ.ಜೆ.ಜಾರ್ಜ್ ವಿಧಾನ ಪರಿಷತ್‌ಗೆ ತಿಳಿಸಿದರು. ಕಾಂಗ್ರೆಸ್‌ನ ಪಿ.ಆರ್.ರಮೇಶ್ ಪ್ರಶ್ನೆಗೆ ಉತ್ತರಿಸಿದ ಅವರು, ನಗರದಲ್ಲಿ 24,000 ಬೀದಿವ್ಯಾಪಾರಿಗಳನ್ನು ಗುರುತಿಸಲಾಗಿದ್ದು, ಈಗಾಗಲೇ ಗುರುತಿನ ಚೀಟಿ ನೀಡಲಾಗುತ್ತಿದೆ.
ನಿಯಮಾನುಸಾರ ಸ್ಥಳಾವಕಾಶವಿರುವ ಕಡೆ ಬೀದಿ ವ್ಯಾಪಾರಕ್ಕೆ ಅವಕಾಶ ಕಲ್ಪಿಸಲಾಗುವುದು. ಆದರೆ ಪಾದಚಾರಿಗಳ ಓಡಾಟಕ್ಕೆ ತೊಂದರೆಯಾಗಲು ಅವಕಾಶ ನೀಡುವುದಿಲ್ಲ. ಮಾನವೀಯತೆ ದೃಷ್ಟಿಯಿಂದ ಬೀದಿವ್ಯಾಪಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸುತ್ತಿಲ್ಲ ಎಂದು ಹೇಳಿದರು.