ಚಿಕ್ಕಬಳ್ಳಾಪುರ: ನಿಷೇಧದ ನಡುವೆಯೂ ನಗರದ 21 ನೇ ವಾರ್ಡಿನಲ್ಲಿ ಒಳಚರಂಡಿಯ ಮ್ಯಾನಹೋಲ್‍ನಲ್ಲಿ ಕಾರ್ಮಿಕನನ್ನು ಇಳಿಸಿ ಸ್ವಚ್ಛತೆ ಕಾರ್ಯ ನಡೆಸಿದ ಪೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ನಗರಸಭೆಯ ವ್ಯಾಪ್ತಿಯಲ್ಲಿ ನೈರ್ಮಲ್ಯ ಕಾಪಾಡಲು ಆಧುನಿಕ ಸೌಲಭ್ಯಗಳಿವೆ. ಆದರೂ ಕೂಡ ಕಾರ್ಮಿಕರನ್ನು ಈ ಕಾರ್ಯಕ್ಕೆ ಬಳಸಿರುವುದು ಕಾನೂನು ಬಾಹಿರವಾಗಿದೆ. ನಗರ ಪ್ರದೇಶದಲ್ಲಿ ಒಳಚರಂಡಿಗಳನ್ನು ಸ್ವಚ್ಛಗೊಳಿಸುವ ಸಲುವಾಗಿ ಸರ್ಕಾರ ಸೆಕ್ಕಿಂಗ್ ಮತ್ತು ಜೆಟ್ಟಿಂಗ್ ವಾಹನ ಸೌಲಭ್ಯವನ್ನು ಒದಗಿಸಿ ಮ್ಯಾನ್ ಹೋಲಿನಲ್ಲಿ ಕಾರ್ಮಿಕರನ್ನು ಇಳಿಸಿ ಕೊಳಚೆ ನೀರು ಸ್ವಚ್ಛಗೊಳಿಸುವುದು ನಿಷೇಧಿಸಿದೆ. ಆದರೂ ಸಹ ನಗರದ 21 ನೇ ವಾರ್ಡ್‍ನಲ್ಲಿ ಕಾರ್ಮಿಕರ ಮೂಲಕ ಮ್ಯಾನಹೋಲ್ ಸ್ವಚ್ಛಗೊಳಿಸಿರುವ ಭಾವಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಸರ್ಕಾರವೇ ಚರಂಡಿ ಮತ್ತು ಒಳಚರಂಡಿಯನ್ನು ಬರಿಗೈಲಿಯಲ್ಲಿ ಸ್ವಚ್ಛ ಮಾಡಬಾರದು ಅದರಲ್ಲೂ ವಿಶೇಷವಾಗಿ ಮ್ಯಾನ್ ಹೋಲ್‍ಗಳಲ್ಲಿ ಕಾರ್ಮಿಕರನ್ನು ಇಳಿಸಿ ಸ್ವಚ್ಛಗೊಳಿಸುವುದನ್ನು ನಿಷೇಧಿಸಿದೆ. ಆದರೂ ಸಹ ಸರ್ಕಾರದ ಆದೇಶವನ್ನು ಧಿಕ್ಕರಿಸಿ ಕಾರ್ಮಿಕನ ಮೂಲಕ ಒಳಚರಂಡಿಯ ಮ್ಯಾನಹೋಲ್‍ನನ್ನು ಸ್ವಚ್ಛಗೊಳಿಸಲಾಗಿದೆ ನಗರಸಭೆಯ ಆರೋಗ್ಯ ವಿಭಾಗದ ಅಧಿಕಾರಿಗಳ ನಿರ್ಲಕ್ಷ್ಯದಿಂದ ಈ ರೀತಿಯ ಘಟನೆ ನಡೆದಿದ್ದು ಇದಕ್ಕೆ ಯಾರು ಹೊಣೆಯೆಂದು ನಾಗರಿಕರು ಪ್ರಶ್ನಿಸುತ್ತಿದ್ದಾರೆ.
ನಗರಸಭೆಯ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುವ ಪೌರಕಾರ್ಮಿಕರಿಗೆ ಆರೋಗ್ಯ ಭದ್ರತೆಯನ್ನು ಒದಗಿಸಬೇಕೆಂದು ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ ಮತ್ತೊಂದಡೆ ನಗರದಲ್ಲಿ ಕಾರ್ಮಿಕರೊಬ್ಬರ ಮೂಲಕ ಒಳಚರಂಡಿಯ ಮ್ಯಾನಹೋಲ್ ಸ್ವಚ್ಛಗೊಳಿಸಲಾಗಿದೆ. ಈ ವಾರ್ಡ್‍ನಲ್ಲಿ ಅಭಿವೃದ್ಧಿ ಕಾರ್ಯ ನಡೆಸುವ ಸಲುವಾಗಿ ಗುತ್ತಿಗೆದಾರರೊಬ್ಬರು ಸರ್ವೇ ಕಾರ್ಯವನ್ನು ನಡೆಸಲು ಕಾರ್ಮಿಕನನ್ನು ಒಳಚರಂಡಿಯ ಮ್ಯಾನಹೋಲ್‍ನನ್ನು ಸ್ವಚ್ಛಗೊಳಿಸುವ ಕಾರ್ಯವನ್ನು ನಡೆಸಿದ್ದಾರೆ ಎಂದು ಹೇಳಲಾಗಿದ್ದು ಆದರೆ ಕಾರ್ಮಿಕರನ್ನು ಯಾರು ಒಳಚರಂಡಿಯ ಮ್ಯಾನಹೋಲ್‍ನಲ್ಲಿ ಇಳಿಸಿದರು ಎಂಬುದು ಮಾತ್ರ ಬಹಿರಂಗಗೊಂಡಿಲ್ಲ.
ಈ ಕುರಿತು ನಗರಸಭೆಯ ಆರೋಗ್ಯ ನಿರೀಕ್ಷಕರನ್ನು ಪ್ರಶ್ನಿಸಿದಾಗ 21ನೇ ವಾರ್ಡ್‍ನಲ್ಲಿ ಅಭಿವೃದ್ಧಿ ಕಾಮಗಾರಿ ನಡೆಸುವ ಸಲುವಾಗಿ ಸರ್ವೇ ಕಾರ್ಯ ನಡೆಯುತ್ತಿದೆ ಅದು ಹೊರತುಪಡಿಸಿ ಕಾರ್ಮಿಕರನ್ನು ಮ್ಯಾನಹೋಲ್‍ನಲ್ಲಿ ಇಳಿಸಿ ಸ್ವಚ್ಛತಾ ಕಾರ್ಯವನ್ನು ನಡೆಸಿರುವ ಮಾಹಿತಿ ಬಂದಿಲ್ಲ ಈ ಸಂಬಂಧ ಪರಿಶೀಲಿಸಿ ಕ್ರಮ ಜರುಗಿಸಲಾಗುವುದೆಂದು ಎಂದಿದ್ದಾರೆ.