ಶ್ರೀನಿವಾಸಪುರ: ಈ ಬಾರಿ ಮಾವು ವಹಿವಾಟು ಎಪಿಎಂಸಿನಲ್ಲಿ ನಡೆಸುವುದು ಬೇಡ ಎಂದು ಬಹಳಷ್ಟು ರೈತರು ಹೇಳಿದ್ದಾರೆ. ಹಾಗೆ ಕೆಲವರು ಅಲ್ಲೇ ನಡೆಸಿ ಎಂದು ಸಲಹೆ ನೀಡಿದ್ದಾರೆ. ಈ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಿ, ಚರ್ಚೆ ಮಾಡುತ್ತೇನೆ ಎಂದು ಜಿಲ್ಲಾಧಿಕಾರಿ ಸತ್ಯಭಾಮ ಹೇಳಿದರು. ಪಟ್ಟಣದಲ್ಲಿ ತಮ್ಮ ಅಧ್ಯಕ್ಷತೆಯಲ್ಲಿ ನಡೆದ ಮಾವು ಬೆಳೆಗಾರರ ಸಮಾಲೋಚನಾ ಸಭೆಯಲ್ಲಿ ಚರ್ಚೆ ನಡೆಸಿದ ಬಳಿಕ ಜಿಲ್ಲಾಧಿಕಾರಿ ಮಾತನಾಡಿದರು.
ತಹಶೀಲ್ದಾರ್, ತಾಪಂ ಇಒ, ಎಪಿಎಂಸಿ ಅಧ್ಯಕ್ಷರು, ತಾಲೂಕು ಆರೋಗ್ಯಾಧಿಕಾರಿಗಳು, ತೋಟಗಾರಿಕೆ ಉಪ ನಿರ್ದೇಶಕರು, ಆರಕ್ಷಕ ವೃತ್ತ ನಿರೀಕ್ಷಕರು, ಮ್ಯಾಂಗೋ ಬೋರ್ಡ್ ಅಧಿಕಾರಿಗಳು, ವಿವಿಧ ಇಲಾಖಾ ಮುಖ್ಯಸ್ಥರು, ರೈತಪರ ಸಂಘಟನೆಗಳ ಮುಖ್ಯಸ್ಥರು ಪಾಲ್ಗೊಂಡಿದ್ದ ಸಭೆಯಲ್ಲಿ 3 ಗಂಟೆ ಚರ್ಚೆ ನಡೆಸಲಾಯಿತು.
ಗೊಂದಲ ಬೇಡ: ಸಭೆಯಲ್ಲಿ ರೈತರಿಗೆ ನೇರವಾಗಿ ತಮ್ಮ ಅಭಿಪ್ರಾಯ ತಿಳಿಸಲು ಜಿಲ್ಲಾಧಿಕಾರಿಗಳು ಅವಕಾಶ ಮಾಡಿಕೊಟ್ಟಿದ್ದರು. ಈ ವೇಳೆ ಅನೇಕರು ಅಭಿಪ್ರಾಯ ತಿಳಿಸುತ್ತಿದ್ದ ವೇಳೆ ವರ್ತಕರು ಮಧ್ಯ ಪ್ರವೇಶ ಮಾಡುತ್ತಿದ್ದರಿಂದ ಜಿಲ್ಲಾಧಿಕಾರಿ ಅಸಮಾಧಾನ ವ್ಯಕ್ತಪಡಿಸಿ, ಇದು ವರ್ತಕರ ಸಭೆಯಲ್ಲ, ರೈತರ ಸಭೆ, ಬೇರೆಯವರು ಮಧ್ಯ ಪ್ರವೇಶ ಮಾಡಿ ಗೊಂದಲ ಸೃಷ್ಟಿ ಮಾಡಬೇಡಿ, ರೈತರ ಹಿತ ಮುಖ್ಯ. ಅವರ ಅಭಿಪ್ರಾಯ ಕೇಳಿ ಸರ್ಕಾರಕ್ಕೆ ವರದಿ ನೀಡಬೇಕಿದೆ ಎಂದು ಹೇಳಿದರು.
ಎಪಿಎಂಸಿಯಲ್ಲಿ ವಹಿವಾಟು ಬೇಡ: ಮುಂದು ವರಿದಂತೆ ಮಾವು ಬೆಳೆಗಾರರು ಹಾಗೂ ಸಂಘದ ಜಿಲ್ಲಾಧ್ಯಕ್ಷರೂ ಆದ ನೀಲಟೂರು ಚಿನ್ನಪ್ಪರೆಡ್ಡಿ, ಎಸ್.ಜಿ. ವೀರಭದ್ರಸ್ವಾಮಿ, ಡಾ.ಕೆ. ಎನ್.ವೇಣುಗೋಪಾಲ್, ಈರಪ್ಪರೆಡ್ಡಿ, ಎನ್. ಜಿ.ಶ್ರೀರಾಮರೆಡ್ಡಿ, ಸಿ.ವಿ.ಪ್ರಭಾಕರ್, ಹೆಬ್ಬಟ ರಮೇಶ್, ತೆರ್ನಹಳ್ಳಿ ಆಂಜಪ್ಪ, ಚಲ್ದಿಗಾನಹಳ್ಳಿ ಶ್ರೀಧರ್, ಅವಲಕುಪ್ಪ ಚಂದ್ರಶೇಖರ್, ರಾಜಾರೆಡ್ಡಿ ಅನೇಕರು ಎಪಿಎಂಸಿನಲ್ಲಿ ಮಾವು ವಹಿವಾಟು ನಡೆಸುವ ಸಂಬಂಧ ಅಭಿಪ್ರಾಯ ತಿಳಿಸಿದರು.
ಎಪಿಎಂಸಿಯಲ್ಲೇ ನಡೆಸಿ: ಈ ವೇಳೆ ಕೆಲವು ವರ್ತಕರು ಎಪಿಎಂಸಿಯಲ್ಲೇನಲ್ಲಿ ವಹಿವಾಟು ನಡೆಸಬೇಕೆಂದು ಹೇಳುತ್ತಿದ್ದಂತೆ ಕೆಲವು ವರ್ತ ಕರು ಚಪ್ಪಾಳೆ ಮೂಲಕ ಸ್ವಾಗತಿಸಿ, ಕೆಲವರು ಇದನ್ನೇ ವಿಡಿಯೋ ಮಾಡುತ್ತಿದ್ದನ್ನು ಗಮನಿಸಿದ ಜಿಲ್ಲಾಧಿಕಾರಿ, ಇದು ಪರ, ವಿರೋಧ ಸಭೆ ಅಲ್ಲ, ನಾಗರಿಕರಾಗಿ ವರ್ತಿಸಿ, ಯಾರನ್ನೂ ದ್ವೇಷ ಮಾಡುವ ಸಭೆಯಲ್ಲ, ಸಭೆಯ ಗಂಭೀ ರತೆ ಅರಿತುಕೊಳ್ಳಿ ಎಂದು ಸೂಚಿಸಿದರು.
ಕೆಲವರು ಒಮ್ಮೊಮ್ಮೆ ಸಭೆಯಲ್ಲಿ ಎದ್ದು ನಿಂತು ವಾದ ಮಾಡತೊಡಗಿದರು. ತಮ್ಮದೇ ಆದ ಶೈಲಿಯಲ್ಲಿ ಮಾತನಾಡತೊಡಗಿದರು. ಆದರೂ ಜಿಲ್ಲಾಧಿಕಾರಿಗಳು ಒಂದೇ ಮಾತಿನಲ್ಲಿ ವಹಿವಾಟು ನಡೆಸುವುದು ಬೇಕೆ ಬೇಡವೇ ಅಷ್ಟು ಮಾತ್ರ ಹೇಳಿ ಎಂದರು. ಮಾವು ವಹಿ ವಾಟು ಎಪಿಎಂಸಿನಲ್ಲಿ ನಡೆಸುವುದು ಬೇಡ ಎಂದು ಬಹಳಷ್ಟು ಮಂದಿ ಹೇಳಿದರೆ, ಕೆಲವರು ಎಪಿಎಂಸಿನಲ್ಲಿ ನಡೆಸಿ ಎಂದು ಸಲಹೆ ನೀಡಿದರು.