ಶ್ರೀನಿವಾಸಪುರ: ಕೋವಿಡ್ ಎಚ್ಚರಿಕೆ ನಡುವೆ ಈ ಬಾರಿ ಎಪಿಎಂಸಿಯಲ್ಲಿ ಮಾವು ವಹಿವಾಟು ನಡೆಸಲು ಸಿದ್ಧತೆ ನಡೆದಿದ್ದು, ಪರ- ವಿರೋಧ ಹೇಳಿಕೆಗಳು ವ್ಯಕ್ತವಾಗಿವೆ. ಈ ವರ್ಷ ಮಾವು ಸೀಜನ್ ಸಮಯಕ್ಕೆ ಕೋವಿಡ್ ಆವರಿಸಿರುವು ದರಿಂದ ರೈತರು, ವ್ಯಾಪಾರಸ್ಥರು, ಟ್ರೇಡರ್ನವರು, ಎಪಿಎಂಸಿ ಆಡಳಿತ ಮಂಡಳಿ, ತಾಲೂಕು ಆಡಳಿತಕ್ಕೆ ಮಾವು ವಹಿವಾಟು ಹೇಗೆ ಮಾಡುವುದು ಎಂಬ ಚಿಂತೆ ಕಾಡುತ್ತಿದೆ. ಈಗಾಗಲೇ ರೈತರು, ಟ್ರೇಡರ್, ಅಧಿಕಾರಿಗಳ ಜೊತೆ ಎಪಿಎಂಸಿನಲ್ಲಿ 4 ಬಾರಿ ಚರ್ಚೆ ಮಾಡಲಾಗಿದೆ. ಎಪಿಎಂಸಿನಲ್ಲಿ ಮಾವು ವಹಿವಾಟು ಬೇಕೆ? ಬೇಡವೇ? ಎಂಬ ಚರ್ಚೆಯಲ್ಲಿ ಸಾಕಷ್ಟು ಎಚ್ಚರ ವಹಿಸಬೇಕು ಎಂಬ ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ಈ ನಡುವೆ ರೈತ ಪರ ಸಂಘಟನೆಗಳು, ಮಾವು ಬೆಳೆಗಾರರ ಸಂಘದ ಮುಖ್ಯಸ್ಥರಾದ ಪಿ.ಆರ್. ಸೂರಿ, ನೀಲಟೂರು ಚಿನ್ನಪ್ಪರೆಡ್ಡಿ, ಎಸ್.ಜಿ.ವೀರಭದ್ರ ಸ್ವಾಮಿ, ಎನ್. ಜಿ.ಶ್ರೀರಾಮರೆಡ್ಡಿ ಕೋವಿಡ್ ಇರುವುದರಿಂದ ಎಪಿಎಂಸಿನಲ್ಲಿ ಮಾವು ವಹಿವಾಟು ನಡೆಸುವುದು ಬೇಡ ಎಂದಿದ್ದಾರೆ. ಅದೇ ರೀತಿ ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಎನ್.ವೇಣುಗೋಪಾಲ್ ಸಹ ರೈತ ತೋಟಗಳಿಂದಲೇ ಮಾವು ಖರೀದಿಯಾಗಲಿ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈಗ ಸರ್ಕಾರ ಯಾವ ನಿರ್ಧಾರ ಕೈಗೊಳ್ಳುತ್ತದೆ ಕಾದುನೋಡಬೇಕು.
ಈಗಾಗಲೇ 4 ಬಾರಿ ಎಪಿಎಂಸಿ ಪ್ರಾಂಗಣದಲ್ಲಿ ಶಾಸಕ ಕೆ.ಆರ್.ರಮೇಶ್‌ಕುಮಾರ್, ಜಿಲ್ಲಾಧಿಕಾರಿ ಸತ್ಯ ಭಾಮಾ ಸಮ್ಮು ಖದಲ್ಲಿ ರೈತರು, ಟ್ರೇಡರ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆ ನಡೆಸಲಾಗಿದೆ. ರೈತಪರ ಸಂಘಟನೆಗಳು ಎಪಿಎಂಸಿನಲ್ಲಿ ವಹಿವಾಟು ಬೇಡ ಎಂದರೆ, ಮಂಡಿಗಳವರು ಇಲ್ಲೇ ಮಾಡಿ ಎನ್ನುತ್ತಿದ್ದಾರೆ. ಆದರೂ ನಾವು ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ. ಮಂಗಳವಾರ ಸಹಕಾರ ಸಚಿವರ ಚರ್ಚೆ ನಡೆಯಲಿದೆ.
●ಎನ್.ರಾಜೆಂದ್ರಪ್ರಸಾದ್, ಅಧ್ಯಕ್ಷ, ಎಪಿಎಂಸಿ ಶ್ರೀನಿವಾಸಪುರ
ಎಪಿಎಂಸಿಗೆ ಸಾವಿರಾರು ಜನ ಬರುವುದರಿಂದ ಕೋವಿಡ್ ಸೋಂಕು ಹರಡು ವು ದನ್ನು ತಡೆಯುವುದು ಕಷ್ಟ. ಆದ್ದರಿಂದ ಈ ಬಾರಿ ಮಾವು ವಹಿವಾಟು ನಡೆಸುವುದು ಬೇಡ.
●ಎನ್.ಜಿ.ಶ್ರೀರಾಮರೆಡ್ಡಿ, ಅಧ್ಯಕ್ಷ, ರಾಜ್ಯ ರೈತ ಸಂಘ ಶ್ರೀನಿವಾಸಪುರ.