ಪಂಚಾಯಿತಿ ಕಟ್ಟೆ ಮೇಲೆ ಊರ ಮುಖಂಡರು ಸಭೆ ಸೇರಿ ಕಳವಿನ ಬಗ್ಗೆ ಚರ್ಚೆ ನಡೆಸುತ್ತಿದ್ದರು. ಕಳ್ಳತನ ಮಾಡಿದ್ದ ರಾಮಣ್ಣ- ಶಾಮಣ್ಣ ಇಬ್ಬರೂ ಅಲ್ಲಿಗೆ ತೆರಳಿ ಏನಾಯೆ¤ಂದು ನಾಟಕವಾಡತೊಡಗಿದರು!
ದಾಸನಪುರ ಎಂಬ ಹಳ್ಳಿ. ಅಲ್ಲಿ ರಾಮಣ್ಣ ಮತ್ತು ಶಾಮಣ್ಣ ಎಂಬ ಇಬ್ಬರು ಗೆಳೆಯರಿದ್ದರು. ಅವರು ರಾತ್ರಿಯ ಸಮಯದಲ್ಲಿ ಜೊತೆಯಾಗಿ ಕಳ್ಳತನ ಮಾಡುತ್ತಿದ್ದರು. ಅದು, ಯಾರಿಗೂ ಗೊತ್ತಾಗುತ್ತಿರಲಿಲ್ಲ. ರೈತರ ಹೊಲಗಳಲ್ಲಿ ಬೆಳೆದಿದ್ದ ಹಣ್ಣು, ಕಾಳು, ತರಕಾರಿಗಳನ್ನು ಅವರು ಕದಿಯುತ್ತಿದ್ದರು. ಕದ್ದ ವಸ್ತುಗಳನ್ನು ದೂರದ ಸಂತೆಯಲ್ಲಿ ಮಾರಾಟ ಮಾಡಿ ಏನೂ ಆಗೇ ಇಲ್ಲವೆಂಬಂತೆ ಊರಿಗೆ ಮರಳುತ್ತಿದ್ದರು.
ಒಂದು ದಿನ, ರಾಮಣ್ಣ- ಶಾಮಣ್ಣ ಇಬ್ಬರೂ ಕೃಷ್ಣಪ್ಪ ಎನ್ನುವ ರೈತನ ಜಮೀನಿನಲ್ಲಿ ಮಾವಿನ ಹಣ್ಣುಗಳನ್ನು ಕದ್ದರು. ಎಂದಿನಂತೆ ಸೂರ್ಯ ಹುಟ್ಟುವ ಮುನ್ನವೇ ಮಾವಿನ ಹಣ್ಣುಗಳನ್ನು ದೂರದ ಸಂತೆಯಲ್ಲಿ ಮಾರಿಕೊಂಡು ಊರಿಗೆ ಬಂದರು. ಅಷ್ಟೊತ್ತಿಗಾಗಲೇ ಕೃಷ್ಣಪ್ಪನಿಗೆ ತನ್ನ ಹೊಲದಲ್ಲಿ ಮಾವಿನ ಹಣ್ಣುಗಳು ಕಳವಾಗಿರುವುದು ಗೊತ್ತಾಗಿತ್ತು. ಅವನು ಊರ ಪಂಚಾಯಿತಿಯವರಲ್ಲಿ ದೂರು ನೀಡಿದ. ಸದಸ್ಯರು, ಮುಖಂಡರು ಸಭೆ ಸೇರಿ ಕಳವಿನ ಬಗ್ಗೆ ಚರ್ಚೆ ನಡೆಸುತ್ತಿದ್ದರು. ರಾಮಣ್ಣ- ಶಾಮಣ್ಣ ಅಲ್ಲಿಗೆ ತೆರಳಿ ಏನಾಯೆ¤ಂದು ನಾಟಕವಾಡತೊಡಗಿದರು.
ಅದೇ ಹೊತ್ತಿಗೆ ವ್ಯಾಪಾರಿಯೊಬ್ಬ ತಲೆಯ ಮೇಲೆ ಬಿದಿರಿನ ತಟ್ಟಿಯಲ್ಲಿ ಮಾವಿನ ಹಣ್ಣುಗಳನ್ನು ಮಾರುತ್ತಾ ಅತ್ತ ಕಡೆ ಬಂದ. ಅವನನ್ನು ಕಂಡು ರಾಮಣ್ಣ- ಶಾಮಣ್ಣ ನಿಧಾನವಾಗಿ ಅಲ್ಲಿಂದ ಜಾಗ ಖಾಲಿ ಮಾಡಿದರು. ಮುಖಂಡರು ಮಾವಿನ ಹಣ್ಣನ್ನು ಕೊಂಡು ತಿನ್ನತೊಡಗಿದರು. ಮಾವು ರುಚಿಯಾಗಿದ್ದರಿಂದ “ಯಾವ ಊರಿನ ಮಾವು ಇದು’ ಎಂದು ಅವರಲ್ಲೊಬ್ಬರು ಕೇಳಿದರು. ವ್ಯಾಪಾರಿ “ಅಲ್ಲಿ ಹೋಗುತ್ತಿದ್ದಾರಲ್ಲ ರಾಮಣ್ಣ- ಶಾಮಣ್ಣ, ಅವರ ತೋಟದ್ದು’ ಎಂದನು. ಅವರ ಬಳಿ ಮಾವಿನ ತೋಟವೇ ಇರಲಿಲ್ಲ. ಮುಖಂಡರಿಗೆ ಏನೋ ಗುಮಾನಿ ಬಂದಿತು. ಅವರು ಕೃಷ್ಣಪ್ಪನನ್ನು ಕರೆಸಿದರು. ಅವನು ವ್ಯಾಪಾರಿಯ ಬುಟ್ಟಿಯಲ್ಲಿದ್ದ ಹಣ್ಣುಗಳು ತನ್ನ ತೋಟದ್ದೇ ಎನ್ನುವುದನ್ನು ಖಾತರಿ ಪಡಿಸಿದ. ಪಂಚಾಯಿತಿ ಕಟ್ಟೆಯ ಮೇಲೆ ಕುಳಿತಿದ್ದವರಿಗೆಲ್ಲ ರಾಮಣ್ಣ- ಶಾಮಣ್ಣನ ಕೈಚಳಕ ಗೊತ್ತಾಯಿತು. ಊರವರೆಲ್ಲರೂ ಸೇರಿ ಅವರನ್ನು ಹಿಡಿಸಿ ಪೊಲೀಸರಿಗೆ ಒಪ್ಪಿಸಿದರು. ಆಗ ಈ ಹಿಂದೆ ಹಳ್ಳಿಯಲ್ಲಿ ನಡೆದ ಅನೇಕ ಪ್ರಕರಣಗಳು ಬೆಳಕಿಗೆ ಬಂದವು.
– ಸಣ್ಣಮಾರಪ್ಪ, ದೇವರಹಟ್ಟಿ