Advertisement

ಬೆಳಗ್ಗೆ ಬುಕ್‌ ಮಾಡಿದರೆ ಸಂಜೆ ತಾಜಾ ಮಾವಿನ ಹಣ್ಣು

03:35 PM Apr 25, 2023 | Team Udayavani |

ಬೆಂಗಳೂರು: ಮಾರುಕಟ್ಟೆಯಲ್ಲಿ ಮಾವಿನ ಹಣ್ಣಿನ ಸೀಜನ್‌ ಆರಂಭವಾಗಿದ್ದು, ಅಂಚೆ ಇಲಾಖೆಯ ಕರ್ನಾಟಕ ವೃತ್ತದ ಸ್ಪೀಡ್‌ ಪೋಸ್ಟ್‌ ವಿಭಾಗ ಮಾವಿನ ಹಣ್ಣಿನ ಸ್ಪೀಡ್‌ ಪೋಸ್ಟ್‌ ಸೇವೆಯನ್ನು ಆರಂಭಿಸಿದೆ. ನಗರದ ಗ್ರಾಹಕರು ಅಂಚೆ ಮೂಲಕ ಬೆಳಗ್ಗೆ ಬುಕ್‌ ಮಾಡಿ ಸಂಜೆ ವೇಳೆಗೆ ಮನೆ ಬಾಗಿಲಿಗೆ ತಾಜಾ ಹಣ್ಣುಗಳನ್ನು ತರಿಸಿಕೊಳ್ಳುತ್ತಿದ್ದಾರೆ.

Advertisement

ತೋತಾಪುರಿ, ಬಂಗನ್‌ಪಲ್ಲಿ, ಶುಗರ್‌ ಬೇಬಿ, ನೀಲಂ, ರಸಪುರಿ, ಮಲ್ಲಿಕಾ ಸೇರಿದಂತೆ ತರಹೇವಾರಿ ಮಾವಿನ ಹಣ್ಣುಗಳಿಗೆ ಗ್ರಾಹಕರು ಬೇಡಿಕೆ ಸಲ್ಲಿಸುತ್ತಿದ್ದಾರೆ. ಈ ಪೈಕಿ ಬಾದಾಮಿಗೆ ಹೆಚ್ಚು ಡಿಮ್ಯಾಂಡ್‌ ಇದೆ. ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂ ಕಿನ ಬಂಡಪಲ್ಲಿ ಗ್ರಾಮದ ಚಂದ್ರಾರೆಡ್ಡಿ ಅಂಚೆ ಇಲಾಖೆ ಜತೆಗೆ ಒಡಂಬಡಿಕೆ ಮಾಡಿಕೊಂಡಿದ್ದು ವಿವಿಧ ಮಾವಿನ ಹಣ್ಣುಗಳ ಮಾರಾಟದಲ್ಲಿ ತೊಡಗಿದ್ದಾರೆ. ಕಳೆದ 15 ದಿನಗಳ ಹಿಂದೆ ಆನ್‌ಲೈನ್‌ ಮೂಲಕ ಮಾರಾಟ ಸೇವೆ ಪ್ರಾರಂಭಿಸಿದ್ದು, ಇದುವರೆಗೂ 3 ಕೆ.ಜಿ. ತೂಕದ ಸುಮಾರು 2,200 ಬಾಕ್ಸ್‌ ಮಾವಿನ ಹಣ್ಣುಗಳನ್ನು ಸಿಲಿಕಾನ್‌ ಸಿಟಿಯ ಗ್ರಾಹಕರಿಗೆ ಪೂರೈಸಿದ್ದಾರೆ.ಆರಂಭದಲ್ಲಿ ಸಿಮೀತ ಸಂಖ್ಯೆಯಲ್ಲಿ ಆರ್ಡರ್‌ ಬರುತ್ತಿದ್ದವು. ಇದೀಗ ವಾರಕ್ಕೆ 50 ರಿಂದ 60 ಆರ್ಡರ್‌ ಬರುತ್ತಿವೆ. ಶನಿವಾರ ಮತ್ತು ಭಾನುವಾರ ದಿನದಂದು 200 ಬಾಕ್ಸ್‌ ವರೆಗೂ ಆರ್ಡರ್‌ ಬರುತ್ತಿವೆ. ಎಲ್ಲ ರೀತಿಯ ಹಣ್ಣುಗಳಿಗೂ ಗ್ರಾಹಕರು ಬೇಡಿಕೆಯಿಡುತ್ತಿದ್ದಾರೆ ಎಂದು ಶ್ರೀನಿವಾಸಪುರದ ಬಂಡಪಲ್ಲಿ ಮಾವು ಬೆಳೆಗಾರ ಚಂದ್ರಪ್ಪ ರೆಡ್ಡಿ ಹೇಳುತ್ತಾರೆ.

“ಉದಯವಾಣಿ’ ಜತೆ ಮಾತನಾಡಿದ ಅವರು, ವಾರಕ್ಕೆ 2 ದಿನ ಮಾವಿನ ಹಣ್ಣುಗಳನ್ನು ಪೂರೈಸಲಾ ಗುತ್ತಿದೆ. ಸೋಮವಾರ ಮತ್ತು ಗುರುವಾರ ಅಂಚೆ ಮೂಲಕ ಗ್ರಾಹಕರ ಮನೆಬಾಗಿಲಿಗೆ ತಲುಪಿಸಲಾ ಗುತ್ತಿದೆ. ಪ್ರತಿ ಬಾಕ್ಸ್‌ ಮಾವಿನ ಹಣ್ಣು 300 ರೂ.ದಿಂದ 1000 ರೂ.ವರೆಗೂ ಮಾರಾಟ ವಾಗುತ್ತದೆ ಎಂದು ಮಾಹಿತಿ ನೀಡುತ್ತಾರೆ.

ಶುಗರ್‌ ಬೇಬಿಗೆ ಹೆಚ್ಚು ರೇಟ್‌: ಬಾದಾಮಿ ಹಣ್ಣಿಗೆ ಗ್ರಾಹಕರಿಂದ ಬೇಡಿಕೆ ಉಂಟಾಗಿದೆ. ವಾರಕ್ಕೆ 200 ಬಾಕ್ಸ್‌ಗಳು ಖರೀದಿ ಆಗುತ್ತಿದೆ. ಹಿಮಾಪಸಂದ್‌ ಮಾವಿನ ಹಣ್ಣು 100 ಬಾಕ್ಸ್‌, ರಸಪುರಿ 50 ಬಾಕ್ಸ್‌, ಮಲ್ಲಿಕಾ 50 ಬಾಕ್ಸ್‌ , ಶುಗರ್‌ 5 ಬಾಕ್ಸ್‌, ಮಲಗೋಬಾ ಮಾವಿನ ಹಣ್ಣು 10 ಬಾಕ್ಸ್‌ ಮಾರಾಟವಾಗಿದೆ. ರಸಪೂರಿ ಮಾವಿನ ಹಣ್ಣು (3 ಕೆ.ಜಿ. ಬಾಕ್ಸ್‌) 600 ರೂ, ಮಲ್ಲಿಕಾ 600 ರೂ, ಬಾದಾಮಿ 750 ರೂ, ಹಿಮಾಪಸಂದ್‌ 900 ರೂ, ಶುಗರ್‌ ಬೇಬಿ 1000 ರೂ.ಗೆ ಮಾರಾಟವಾಗುತ್ತಿದೆ. ಕಳೆದ ಬಾರಿ ಹೋಲಿಸಿದರೆ ಈ ಬಾರಿ ಮಾವಿನ ಫ‌ಸಲು ಕಡಿಮೆ. ಹೂವು ಬಿಡುವ ವೇಳೆ ಕೀಟಬಾಧೆಯಿಂದ ಮಾವಿನ ಫ‌ಸಲಿಗೆ ನಷ್ಟ ಉಂಟಾಯಿತು. ಹೀಗಾಗಿ ಈ ವರ್ಷ ಶೇ.20ರಷ್ಟು ಮಾತ್ರ ಮಾವಿನ ಫ‌ಸಲು ಇದೆ. ಮುಂದಿನ ದಿನಗಳಲ್ಲಿ ಮಾವಿನ ಹಣ್ಣಿಗೆ ಮತ್ತಷ್ಟು ಬೇಡಿಕೆ ಉಂಟಾಗುವ ನಿರೀಕ್ಷೆಯಿದೆ ಎಂದು ಮಾವಿನ ಬೆಳೆಗಾರರು ಹೇಳುತ್ತಾರೆ.

100 ಟನ್‌ ಮಾವಿನ ಹಣ್ಣಿನ ಮಾರಾಟ ಗುರಿ: ಕಳೆದ ಬಾರಿ ಮ್ಯಾಂಗೋ ಬೋರ್ಡ್‌ ಮೂಲಕ ಗ್ರಾಹಕರ ಮನೆಬಾಗಿಲಿಗೆ ಮಾವಿನ ಹಣ್ಣುಗಳನ್ನು ಅಂಚೆ ಮೂಲಕ ತಲುಪಿಸಲಾಗಿತ್ತು. ಈ ವರ್ಷ ಕೋಲಾರ ಭಾಗದ ಕೆಲವು ಮಾವು ಬೆಳೆಗಾರರು ಆನ್‌ ಲೈನ್‌ ಮೂಲಕ ಸಿಲಿಕಾನ್‌ ಸಿಟಿಯ ಗ್ರಾಹಕರಿಗೆ ತಲುಪಿಸಲು ಮುಂದಾಗಿದ್ದಾರೆ. ಬೆಳಗ್ಗೆ 8 ಗಂಟೆಗೆ ಮಾವಿನ ಹಣ್ಣಿನ ಬಾಕ್ಸ್‌ಗಳನ್ನು ನೀಡಿದರೆ ಸಂಜೆ ಒಳಗಾಗಿ ಗ್ರಾಹಕರ ಮನೆಬಾಗಿಲಿಗೆ ಅಂಚೆಯಣ್ಣ ತಲುಪಿಸಲಿದ್ದಾನೆ ಎಂದು ಅಂಚೆ ಇಲಾಖೆಯ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Advertisement

ಸದ್ಯ ಬೆಂಗಳೂರು ಸಿಟಿಗೆ ಮಾತ್ರ ನಮ್ಮ ಸೇವೆಯನ್ನು ಸೀಮಿತ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ನಗರ ಹೊರವಲಯಗಳಲ್ಲಿರುವ ಗ್ರಾಹಕರ ಮನೆ ಬಾಗಿಲಿಗೂ ತಲುಪಿಸಲಾಗುವುದು. ಕಳೆದ ವರ್ಷ ಸುಮಾರು 70 ಟನ್‌ ಮಾವಿನ ಹಣ್ಣುಗಳನ್ನು ಮಾರಾಟ ಮಾಡಿದ್ದೇವು. ಈ ವರ್ಷ ಸುಮಾರು 100 ಟನ್‌ ಮಾವಿನ ಹಣ್ಣು ಮಾರಾಟ ಮಾಡುವ ಗುರಿ ಹೊಂದಲಾಗಿದೆ ಎಂದು ಹೇಳುತ್ತಾರೆ.

ಕಳೆದ ಮೇ ತಿಂಗಳಲ್ಲಿ ಮಾವು ಮಾರಾಟ ಆರಂಭಿಸಲಾಗಿತ್ತು. ಆದರೆ ಈ ವರ್ಷ ಕೋಲಾರ ಭಾಗದ ಕೆಲವು ರೈತರು ಮಾವಿನ ಹಣ್ಣುಗಳನ್ನು ಸ್ಪೀಡ್‌ ಪೋಸ್ಟ್‌ ಮೂಲಕ ರಾಜಧಾನಿಯ ಗ್ರಾಹಕರಿಗೆ ತಲುಪಿಸಲು ಮುಂದೆ ಬಂದಿದ್ದಾರೆ. ಆ ಹಿನ್ನೆಲೆಯಲ್ಲಿ ಈ ವರ್ಷ ಏಪ್ರಿಲ್‌ ತಿಂಗಳಾಂತ್ಯದಲ್ಲಿ ಮಾರಾಟ ಸೇವೆ ಆರಂಭಿಸಲಾಗಿದೆ. ಗ್ರಾಹಕರಿಂದಲೂ ಸಾಕಷ್ಟು ಬೇಡಿಕೆ ಬಂದಿದೆ. ಶೀಘ್ರದಲ್ಲಿ ಮ್ಯಾಗೋ ಬೋರ್ಡ್‌ ಕೂಡ ಆನ್‌ ಲೈನ್‌ ಮೂಲಕ ಮಾವು ಮಾರಾಟ ಸೇವೆ ಆರಂಭಿಸಲಿದೆ. ●ರಾಘವೇಂದ್ರ, ಮ್ಯಾನೇಜರ್‌ ಸ್ಪೀಡ್‌ ಪೋಸ್ಟ್‌ ಸೇವೆಗಳ ವಿಭಾಗ ಬೆಂಗಳೂರು ವೃತ್ತ

-ದೇವೇಶ ಸೂರಗುಪ್ಪ

Advertisement

Udayavani is now on Telegram. Click here to join our channel and stay updated with the latest news.

Next