ಹುಣಸೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನದಂಚಿನ ಎಸ್ಟೇಟ್‌ಗೆ ಕಿಡಿಗೇಡಿಗಳು ಹಾಕಿದ್ದ ಬೆಂಕಿಯಿಂದ 18-20 ಎಕರೆ ಮಾವಿನ ತೋಟ ಭಸ್ಮವಾಗಿದ್ದು, ಅರಣ್ಯಾಧಿಕಾರಿಗಳ ಮುನ್ನೆಚ್ಚರಿಕೆ ಕ್ರಮದಿಂದ ಭಾರೀ ಅನಾಹುತ ತಪ್ಪಿದೆ.
ತಾಲೂಕಿನ ಹನಗೋಡು ಬಳಿಯ ಕೆ.ಜಿ ಹಬ್ಬನಕುಪ್ಪೆಯ ತರಗನ್ ಎಸ್ಟೇಟ್‌ನಲ್ಲಿ ಈ ಅನಾಹುತ ಸಂಭವಿಸಿದ್ದು, 500ಕ್ಕೂ ಹೆಚ್ಚು ಫಲ ಬಿಡುತ್ತಿದ್ದ ಮಾವಿನ ಮರಗಳು ಸುಟ್ಟು ಕರಕಲಾಗಿವೆ. ಅರಣ್ಯ ಸಿಬ್ಬಂದಿ ಕ್ಷಿಪ್ರ ಕಾರ್ಯಾಚರಣೆಯಿಂದ ನಾಗರಹೊಳೆ ಅರಣ್ಯಕ್ಕೆ ಬೆಂಕಿ ಹರಡುವುದನ್ನು ತಪ್ಪಿಸಿದ್ದಾರೆ.
ಘಟನೆ ವಿವರ: ಗುರುವಾರ ಮಧ್ಯಹ್ನ ಬಿಲ್ಲೇನಹೊಸಳ್ಳಿ ರಸ್ತೆ ಬದಿಯ ಎಸ್ಟೇಟ್‌ನ ಬೇಲಿಕಡೆಯಿಂದ ಕಿಡಿಗೇಡಿಗಳು ಹಾಕಿದ್ದ ಬೆಂಕಿಗೆ ದಟ್ಟ ಹೊಗೆ ಆವರಿಸಿಕೊಂಡು ಏಕಾಏಕಿ ಬೆಂಕಿ ಜ್ವಾಲೆ ಕಾಣಿಸಿಕೊಂಡಿತು. ಗಾಳಿಯ ವೇಗ ಹೆಚ್ಚಾಗುತ್ತಿದ್ದಂತೆ ಬೆಂಕಿ ಎಸ್ಟೇಟ್‌ನ ಸುತ್ತ ಆವರಿಸತೊಡಗಿತು. ನೋಡುತ್ತಿದ್ದಂತೆ ಹತ್ತಾರು ಎಕರೆ ಪ್ರದೇಶವನ್ನು ಆವರಿಸಿಕೊಂಡಿತು.
ಪಕ್ಕದ ನಾಗರಹೊಳೆ ಉದ್ಯಾನದ ಹುಣಸೂರು ವಲಯದ ಟವರ್‌ನಲ್ಲಿದ್ದ ಫೈರ್‌ವಾಚರ್ ಮಾಹಿತಿ ನೀಡುತ್ತಿದ್ದಂತೆ ಹುಣಸೂರು ಕಚೇರಿಯಲ್ಲಿದ್ದ ನಾಗರಹೊಳೆ ಹುಲಿಯೋಜನೆ ನಿರ್ದೇಶಕ ನಾರಾಯಣಸ್ವಾಮಿ, ಎಸಿಎಫ್ ಪ್ರಸನ್ನಕುಮಾರ್, ಆರ್‌ಎಫ್‌ಒ ಸುರೇಂದ್ರ ಸ್ಥಳಕ್ಕೆ ಧಾವಿಸಿ, 100ಕ್ಕೂ ಹೆಚ್ಚು ಅರಣ್ಯ ಹಾಗೂ ಅಗ್ನಿಶಾಮಕ ಸಿಬ್ಬಂದಿ, ಆರ್‌ಆರ್‌ಟಿ ವಾಹನ, ಬೆಂಕಿ ನಂದಿಸುವ ಪರಿಕರಗಳೊಂದಿಗೆ ಸತತ 3 ಗಂಟೆ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು.
ಸ್ವಲ್ಪ ಮೈಮರೆತಿದ್ದರೂ ನಾಗರಹೊಳೆಗೆ ಬೆಂಕಿ ಆವರಿಸಿಕೊಳ್ಳುತ್ತಿತ್ತು. ಇದನ್ನರಿತು ತಕ್ಷಣವೇ ನಮ್ಮ ಅರಣ್ಯ ಸಿಬ್ಬಂದಿಯನ್ನು ಪರಿಕರಗಳೊಂದಿಗೆ ಕರೆಸಿ ಬೆಂಕಿ ನಂದಿಸಲಾಯಿತೆಂದು ನಾಗರಹೊಳೆ ಸಿಎಫ್ ನಾರಾಯಣಸ್ವಾಮಿ ತಿಳಿಸಿದರು.